ಬಸವನಬಾಗೇವಾಡಿ ಪಟ್ಟಣದಲ್ಲಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ವತಿಯಿಂದ ತಹಸೀಲ್ದಾರ್ ಹಾಗೂ ಹೆಸ್ಕಾಂ ಎಇ ಅವರಿಗೆ ಮನವಿ ಸಲ್ಲಿಸಲಾಯಿತು. ಕಲ್ಲು ಸೊನ್ನದ, ಮುದಕಣ್ಣ ಹೊರ್ತಿ, ಅನೀಲ ಗೊಳಸಂಗಿ, ರೇವಣಸಿದ್ಧ ಮಣ್ಣೂರ, ಬಸವರಾಜ ಸಂಗಮ, ಎಸ್.ಎಂ. ಮನಗೂಳಿ ಇತರರಿದ್ದಾರೆ. 
ರಾಜ್ಯ

ವಿದ್ಯುತ್ ಖಾಸಗಿಕರಣವಾದರೆ ರೈತರ ಬದುಕು ಅತಂತ್ರ

ಪ್ರಮುಖ ಮುಖ್ಯಾಂಶಗಳು

  • ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಒತ್ತಾಯ
  • ಅಧಿಕಾರಿಗಳಿಗೆ ಮನವಿ
ಬಸವನಬಾಗೇವಾಡಿ: ರಾಜ್ಯ ಸರ್ಕಾರ ಹೆಸ್ಕಾಂ ವಿದ್ಯುತ್ ಸಂಸ್ಥೆಯನ್ನು ಖಾಸಗೀಕರಣ ಮಾಡಲು ಷಡ್ಯಂತರ ನಡೆದಿದೆ. ಕೂಡಲೇ ಅದನ್ನು ಕೈಬಿಟ್ಟು ಸರ್ಕಾರವೇ ನಡೆಸಿಕೊಂಡು ಹೋಗಬೇಕು ಎಂದು ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ವತಿಯಿಂದ ಒತ್ತಾಯಿಸಿ ಶನಿವಾರ ತಹಸೀಲ್ದಾರ್ ಯಮನಪ್ಪ ಸೋಮನಕಟ್ಟಿ ಹಾಗೂ ಹೆಸ್ಕಾಂ ಎಇ ಸಿದ್ಧರಾಮ ಬಿರಾದಾರ ಅವರಿಗೆ ಮನವಿ ಸಲ್ಲಿಸಲಾಯಿತು.
ಪಟ್ಟಣದ ವಿದ್ಯುತ್ ವಿಭಾಗ ಕಚೇರಿ ಸಭಾಭವನದಲ್ಲಿ ತಾಲೂಕಿನ ವಿವಿಧ ಗ್ರಾಮಗಳಿಂದ ಆಗಮಿಸಿ, ರೈತರು ಹಾಗೂ ರೈತ ಸಂಘದ ಕಾರ್ಯಕರ್ತರು ಮಾತನಾಡಿದ, ರಾಜ್ಯದ ರೈತರು ಮೊದಲೇ ಲಾಭವಿಲ್ಲದ ಕೃಷಿಯ ಜತೆ ಬದುಕು ಸಾಗಿಸುತ್ತಿದ್ದಾರೆ. ಲಾಭದಾಯಕ ಬೆಲೆ ಕೂಡ ಇಲ್ಲಿಯವರೆಗೆ ಸಿಕ್ಕಿಲ್ಲ, ಇನ್ನು ವಿದ್ಯುತ್ ಖಾಸಗೀಕರಣವಾದಲ್ಲಿ ಎಲ್ಲರೂ ಕೃಷಿ ಮಾಡುವುದನ್ನು ಬಿಡಬೇಕಾಗುತ್ತದೆ ಎಂದರು.
ಈಗಾಗಲೇ ಹೆಸ್ಕಾಂ ಇಲಾಖೆಯು ಸಾವಿರಾರು ಕೋಟಿ ಹಣ ವ್ಯಯ ಮಾಡಿ ವಿದ್ಯುತ್ ಕಂಬ ಹಾಗೂ ವೈಯರ್, ಟ್ರಾನ್ಸ್‌ಫಾರ್ಮರ್‌ಗಳನ್ನು ಖಾಸಗಿ ಅವರಿಗೆ ಬಳಸಿಕೊಳ್ಳಲು ಅನುಮತಿ ನೀಡಿದರೆ ಅವರಿಗೆ ಲಾಭ ಮಾಡಿಕೊಳ್ಳಲು ದಾರಿ ಮಾಡಿಕೊಟ್ಟಂತಾಗುತ್ತದೆ. ಹೆಸ್ಕಾಂ ಇಲಾಖೆಯಲ್ಲಿ ಸಾವಿರಾರು ಕಾರ್ಮಿಕರು ತಮ್ಮ ಜೀವದ ಹಂಗನ್ನು ತೊರೆದು ಕಳೆದ ಹಲವಾರು ವರ್ಷಗಳಿಂದ ಕೆಲಸ ಮಾಡಿ ಪ್ರಾಣವನ್ನು ಮುಡಿಪ್ಪಾಗಿಟ್ಟರೆ ಇನ್ನು ಕೆಲವರು ಅಂಗವೈಕಲ್ಯಕ್ಕೆ ಗುರಿ ಆಗಿದ್ದಾರೆ, ಕಾರ್ಮಿಕರೆಲ್ಲರಿಗೂ ವಿದ್ಯುತ್ ನಿಗಮ ದಾರಿ ದೀಪವಾಗಿ ನಿಂತಿದೆ. ಆದರೆ ಖಾಸಗೀಕರಣವಾದರೆ ಕಾರ್ಮಿಕರ ಬದುಕು ಅತಂತ್ರವಾಗಲಿದೆ ಎಂದು ಹೇಳಿದರು.
ಈಗಾಗಲೇ ರಾಜ್ಯದಲ್ಲಿ ಜಾರಿಯಲ್ಲಿರುವ ರೈತರ ಜಮೀನುಗಳಲ್ಲಿನ ಪಂಪ್‌ಸೆಟ್‌ಗಳಿಗೆ ಉಚಿತ್ ವಿದ್ಯುತ್, ಗೃಹ ಜ್ಯೋತಿ, ಭಾಗ್ಯ ಜ್ಯೋತಿ, ಕುಟೀರ ಜ್ಯೋತಿ, ರಾಜೀವ ಗಾಂಧಿ ಗ್ರಾಮೀಣ ವಸತಿ ಯೋಜನೆಯಡಿ ದಿನ ದಯಾಳ ವಿದ್ಯುತ್ ಸೇರಿ ಬಡವರಿಗೆ ಯೋಜನೆ ಮುಂದುವರೆಸಿಕೊಂಡು ಹೋಗಲು ಸಾಧ್ಯವಾಗದಿರಬಹುದು. ವಿದ್ಯುತ್ ನಿಗಮಗಳು ಖಾಸಗೀಕರಣವಾದರೆ, ಸರ್ಕಾರಿ ನೇಮಕಾತಿ ಪ್ರಕ್ರಿಯೆ ನಿಂತು ಹೋಗಿ ಪ್ರತಿಭಾವಂತ ಉದ್ಯೋಗ ಆಕಾಂಕ್ಷೆಗಳಿಗೆ ಸರ್ಕಾರಿ ಉದ್ಯೋಗ ಗಗನಕುಸುಮವಾಗಲಿದೆ. ಈ ಪರವಾನಗಿ ಪ್ರಕ್ರಿಯೆ ಕೂಡಲೇ ಕೈ ಬಿಡಬೇಕು, ಇಲ್ಲವಾದಲ್ಲಿ ರಾಜ್ಯದ 31 ಜಿಲ್ಲೆಗಳಲ್ಲಿ ಹೋರಾಟ ಮಾಡಲಾಗುವುದು ಎಂದು ಆಗ್ರಹಿಸಿ ಮುಖ್ಯಮಂತ್ರಿಗಳಿಗೆ ಬರೆದ ಮನವಿ ಪತ್ರ ಅಧಿಕಾರಿಗಳಿಗೆ ಸಲ್ಲಿಸಿದರು. ರೈತ ಸಂಘ, ಹಸಿರು ಸೇನೆ ಉಪಾಧ್ಯಕ್ಷ ಕಲ್ಲು ಸೊನ್ನದ, ಮುದಕಣ್ಣ ಹೊರ್ತಿ, ಅನೀಲ ಗೊಳಸಂಗಿ, ರೇವಣಸಿದ್ಧ ಮಣ್ಣೂರ, ಬಸವರಾಜ ಸಂಗಮ, ಎಸ್.ಎಂ. ಮನಗೂಳಿ, ಬಿ.ಎಸ್. ಸಂಕನಾಳ, ಯಲ್ಲಪ್ಪ ಕುಂಬಾರ, ಶರಣಪ್ಪ ಗುಡ್ಡದ ಇತರರಿದ್ದರು.