- ವಿಶ್ವ ಪರಿಸರ ದಿನಾಚರಣೆ ಆಚರಣೆ
- ನಾಲ್ಕು ವಿಧದ ಕಸ ವಿಂಗಡಣೆ ಕುರಿತು ವಿಶೇಷ ಕಾರ್ಯಾಗಾರ
ಕಲಬುರಗಿ: ವಿಶ್ವ ಪರಿಸರ ದಿನಾಚರಣೆ-2026ರ ಅಂಗವಾಗಿ ಶುಕ್ರವಾರ ಕಲಬುರಗಿ ಮಹಾನಗರ ಪಾಲಿಕೆಯ ಸಭಾಂಗಣದಲ್ಲಿ ನಗರದ ಜನಪ್ರತಿನಿಧಿಗಳಿಗಾಗಿ ಮಹತ್ವದ ಕಾರ್ಯಕ್ರಮವೊಂದನ್ನು ಆಯೋಜಿಸಲಾಗಿತ್ತು. ನಗರದಲ್ಲಿ ವೈಜ್ಞಾನಿಕ ತ್ಯಾಜ್ಯ ನಿರ್ವಹಣೆಗೆ ಆದ್ಯತೆ ನೀಡುವ ನಿಟ್ಟಿನಲ್ಲಿ "ನಾಲ್ಕು ವಿಧದ ಕಸ ವಿಂಗಡಣೆ" ಕುರಿತು ಜಾಗೃತಿ ಮೂಡಿಸಲು ಪಾಲಿಕೆಯ ಎಲ್ಲ ಗೌರವಾನ್ವಿತ ಸದಸ್ಯರಿಗಾಗಿ ಈ ವಿಶೇಷ ಕಾರ್ಯಾಗಾರವನ್ನು ಹಮ್ಮಿಕೊಳ್ಳಲಾಗಿತ್ತು.
ಸಿಸಿಕ್ಯಾಮೆರಾ ಕಣ್ಗಾವಲು: ಕಸ ಹಾಕುವವರಿಗೆ ದಂಡದ ಬಿಸಿ!
ಇದೇ ವೇಳೆ ನಗರದ ಸ್ವಚ್ಛತೆ ಕಾಪಾಡುವ ನಿಟ್ಟಿನಲ್ಲಿ ಮಹಾನಗರ ಪಾಲಿಕೆಯು ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾಗಿದೆ. ಪಾಲಿಕೆ ವ್ಯಾಪ್ತಿಯ ವಿವಿಧ ಬಡಾವಣೆಗಳಲ್ಲಿ ಕಸ ಸುರಿಯುವ ಪ್ರಮುಖ ಜಾಗಗಳನ್ನು (GVP - Garbage Vulnerable Points) ಗುರುತಿಸಿ, ಅಲ್ಲಿ ಈಗಾಗಲೇ ಸಿಸಿಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ನಿಯಮ ಮೀರಿ ಸಾರ್ವಜನಿಕ ಸ್ಥಳದಲ್ಲಿ ಕಸ ಎಸೆಯುವವರನ್ನು ಕ್ಯಾಮೆರಾ ದೃಶ್ಯಾವಳಿಗಳ (ವಿಡಿಯೋ ಫೂಟೇಜ್) ಆಧಾರದ ಮೇಲೆ ಪತ್ತೆಹಚ್ಚಿ ದಂಡ ವಿಧಿಸುವ ಪ್ರಕ್ರಿಯೆಗೆ ಚಾಲನೆ ನೀಡಲಾಗಿದೆ.
ಇತ್ತೀಚೆಗೆ ಸಿಸಿಕ್ಯಾಮೆರಾ ಛಾಯಾಚಿತ್ರದ ಆಧಾರದ ಮೇಲೆ ಸಾರ್ವಜನಿಕ ಸ್ಥಳದಲ್ಲಿ ಕಸ ಎಸೆಯುತ್ತಿದ್ದ ಮನೆಯ ಮಾಲೀಕರೊಬ್ಬರನ್ನು ಪತ್ತೆಹಚ್ಚಿದ ಸಂಬಂಧಪಟ್ಟ ವಲಯದ ಆರೋಗ್ಯ ನಿರೀಕ್ಷಕರಾದ ಶ್ರೀ ಬಸವರಾಜ ಪಾಣೆಗಾಂವ ಅವರು ಸ್ಥಳದಲ್ಲೇ ದಂಡ ವಿಧಿಸಿ ಬಿಸಿ ಮುಟ್ಟಿಸಿದ್ದಾರೆ.
ಸಾರ್ವಜನಿಕರಿಗೆ ಪಾಲಿಕೆ ಮನವಿ:
ಮಾನ್ಯ ಸರ್ವೋಚ್ಚ ನ್ಯಾಯಾಲಯದ ಆದೇಶ ಹಾಗೂ ‘ಘನತ್ಯಾಜ್ಯ ನಿರ್ವಹಣೆ (SWM) ಕಾಯ್ದೆ 2026’ರ ನಿಯಮಾವಳಿಗಳ ಅನ್ವಯ ಮುಂಬರುವ ದಿನಗಳಲ್ಲೂ ಈ ದಂಡ ವಿಧಿಸುವ ಕಾರ್ಯಾಚರಣೆ ನಿರಂತರವಾಗಿ ಮುಂದುವರೆಯಲಿದೆ. ಆದ್ದರಿಂದ ನಗರದ ಸಾರ್ವಜನಿಕರು ಮುಂಜಾಗ್ರತೆ ವಹಿಸಿ, ದಿನನಿತ್ಯ ತಮ್ಮ ಮನೆಯಲ್ಲಿ ಸಂಗ್ರಹವಾಗುವ ಕಸವನ್ನು ಪಾಲಿಕೆಯ ಸ್ವಚ್ಛತಾ ವಾಹನಗಳಿಗೇ ನೀಡುವ ಮೂಲಕ ಪಾಲಿಕೆಯೊಂದಿಗೆ ಕೈಜೋಡಿಸಿ ಸಹಕರಿಸಬೇಕು ಎಂದು ಅಧಿಕಾರಿಗಳು ಕೋರಿದ್ದಾರೆ.
ಈ ಸಂದರ್ಭದಲ್ಲಿ ಕಲಬುರಗಿ ಮಹಾನಗರ ಪಾಲಿಕೆಯ ಮೇಯರ್ ವರ್ಷಾ ಜಾನೆ, ಸ್ಥಾಯಿ ಸಮಿತಿ ಅಧ್ಯಕ್ಷರಾದ ಅನುಪಮಾ ಕಮಕನೂರ್, ಆಯಾಜ್ ಖಾನ್, ಪಾಲಿಕೆ ಸದಸ್ಯರಾದ ಅಲಾಂದಾರ್ ಜೈದಿ, ರೇಣುಕಾ, ಪಾಲಿಕೆ ಆಯುಕ್ತರಾದ ಅವಿನಾಶ್ ಶಿಂಧೆ ಹಾಗೂ ಉಪ ಆಯುಕ್ತರಾದ (ಅಭಿವೃದ್ಧಿ) ಮಂಜುನಾಥ್ ಚವ್ಹಾಣ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ತಾಂತ್ರಿಕ ಮಾಹಿತಿ ನೀಡಿದ ಸಹಾಯಕ ಕಾರ್ಯಪಾಲಕ ಅಭಿಯಂತರರು (ಪರಿಸರ) ಅಭಯ ಕುಮಾರ್ ಹಾಗೂ ಪರಿಸರ ಅಭಿಯಂತರರು ಬಾಬು ಮೇಲಕೇರಿ ಸೇರಿದಂತೆ ಪಾಲಿಕೆಯ ಎಲ್ಲಾ ಆರೋಗ್ಯ ನಿರೀಕ್ಷಕರು ಹಾಗೂ ಪೌರಕಾರ್ಮಿಕರು ಭಾಗವಹಿಸಿದ್ದರು.