ಜಾತಿ ನಿಂದನೆ, ದೌರ್ಜನ್ಯ ನಡೆದಲ್ಲಿ ಠಾಣೆಗೆ ದೂರು ನೀಡಿ police station 
ರಾಜ್ಯ

ಜಾತಿ ನಿಂದನೆ, ದೌರ್ಜನ್ಯ ನಡೆದಲ್ಲಿ ಠಾಣೆಗೆ ದೂರು ನೀಡಿ police station

ಪ್ರಮುಖ ಮುಖ್ಯಾಂಶಗಳು

  • ಮಾಸ್ತಿ ಪೊಲೀಸ್​ ಠಾಣೆಯ ಸಿಪಿಐ ಓಂಪ್ರಕಾಶ್​ ಸೂಚನೆ
  • ಎಸ್​ಸಿ,ಎಸ್​ಟಿ ದೌರ್ಜನ್ಯ, ಕುಂದು ಕೊರತೆಗಳ ಪರಿಶೀಲನಾ ಸಭೆ
ಟೇಕಲ್​: ಪ.ಜಾತಿ, ಪ.ಪಂಗಡದವರ ಮೇಲೆ ಜಾತಿ ನಿಂದನೆ ಮತ್ತು ದೌರ್ಜನ್ಯ ನಡೆದರೆ ನಿರ್ಭಯವಾಗಿ ಠಾಣೆಗೆ ಬಂದು ದೂರು ನೀಡಿ, ಆರೋಪಿಗಳ ವಿರುದ್ಧ ನಿರ್ದಾಕ್ಷಣ್ಯ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಮಾಸ್ತಿ ಪೊಲೀಸ್​ ಠಾಣೆಯ ಸಿಪಿಐ ಓಂಪ್ರಕಾಶ್​ ಹೇಳಿದರು. police station
ತಾಲೂಕಿನ ಟೇಕಲ್​ ಹೋಬಳಿಯ ಪೊಲೀಸ್​ ಠಾಣೆಯ ಆವರಣದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಪ.ಜಾತಿ ಮತ್ತು ಪ.ಪಂಗಡಗಳ ಮೇಲಿನ ದೌರ್ಜನ್ಯ, ಕುಂದು ಕೊರತೆಗಳ ಪರಿಶೀಲನಾ ಸಭೆಯಲ್ಲಿ ಮಾತನಾಡಿ, ಸಂವಿಧಾನದಡಿ ಎಲ್ಲ ಸಮುದಾಯಗಳಿಗೆ ಸಮಾನ ಸ್ಥಾನಮಾನ ನೀಡಲಾಗಿದೆ. ಒಬ್ಬರನ್ನು ಅವಾಚ್ಯವಾಗಿ ನಿಂದಿಸುವುದು, ದೌರ್ಜನ್ಯ ಎಸಗುವುದು ಅಪರಾಧವಾಗಿದೆ ಎಂದರು.
ಗ್ರಾಮೀಣ ಪ್ರದೇಶದಲ್ಲಿ ಎಲ್ಲ ಸಮುದಾಯಗಳ ಮಧ್ಯೆ ಸಹಬಾಳ್ವೆ ಭಾವ ಬೆಳೆಯಬೇಕು. ಇದನ್ನೂ ಮೀರಿ ಯಾವುದೇ ರೀತಿಯ ಜಾತಿ ನಿಂದನೆ, ದೌರ್ಜನ್ಯ ಎಸಗುವ ಹೀನ ಕೃತ್ಯಕ್ಕೆ ಮುಂದಾದಲ್ಲಿ ಸಂತ್ರಸ್ತರು ನಿರ್ಭೀತಿಯಿಂದ ಠಾಣೆಗೆ ಬಂದು ದೂರು ದಾಖಲಿಸಿ. ಅಂತಹವರ ವಿರುದ್ಧ ಕಾನೂನು ಕ್ರಮ ಜರುಗಿ ನೊಂದವರಿಗೆ ನ್ಯಾಯ ಕೊಡಿಸುವ ಕೆಲಸ ಮಾಡಲಾಗುವುದು ಎಂದು ತಿಳಿಸಿದರು.
ಯುವ ಪೀಳಿಗೆ ದುಶ್ಚಟಗಳಿಗೆ ದಾಸರಾಗದ ರೀತಿಯಲ್ಲಿ ಎಚ್ಚರಿಕೆ ವಹಿಸುವುದು ಅವಶ್ಯವಾಗಿದೆ. ಗಾಂಜಾ ಮಾರಾಟ, ಜೂಜು ದಂಧೆ, ಕೋಳಿ ಪಂದ್ಯಗಳಂತ ಕಾನೂನು ಬಾಹೀರ ಕೆಲಸಗಳ ಬಗ್ಗೆ ಜನರು ಠಾಣೆಗೆ ತಿಳಿಸಿದಲ್ಲಿ ಅಪರಾಧಗಳನ್ನು ಮಟ್ಟ ಹಾಕಲು ಸಹಕಾರಿಯಾಗಲಿದೆ. ಅಪ್ರಾಪ್ತ ಮಕ್ಕಳಿಗೆ ಮೊಬೈಲ್​ ನೀಡುವ ಬಲಿಗೆ ಉತ್ತಮ ಹವ್ಯಾಸಗಳನ್ನು ಹೇಳಿಕೊಡಿ ಎಂದರು.
ಜಿಲ್ಲಾ ಅಟ್ರಾಸಿಟಿ ಸದಸ್ಯ ಎನ್​.ವೆಂಕಟರಾವ್​ ಮಾತನಾಡಿ, ಜನರ ಮಧ್ಯೆ ಯಾವುದೇ ಗೊಂದಲ ಉಂಟಾಗದ ರೀತಿಯಲ್ಲಿ ಜಾಗೃತಿ ವಹಿಸಬೇಕು. ದಲಿತ ಸಮುದಾಯಗಳ ಮೇಲೆ ದೌರ್ಜನ್ಯ ನಡೆದರೆ ಬಗ್ಗೆ ಠಾಣೆಯ ಸಿಬ್ಬಂದಿ ತಕ್ಷಣವೇ ಕಾನೂನು ಕ್ರಮ ಜರುಗಿಸಿ ನೊಂದವರಿಗೆ ನ್ಯಾಯ ಕೊಡಿಸಲು ಮುಂದಾಗಬೇಕು. ಜನರ ಮಧ್ಯೆ ಸಣ್ಣ ಪುಟ್ಟ ಸಮಸ್ಯೆಗಳು ಏರ್ಪಟ್ಟಾಗ ಅವುಗಳನ್ನು ಬೆಳೆಯಲು ಬಿಡದೇ ಹಿರಿಯರ ಸಮ್ಮುಖದಲ್ಲಿ ಬಗೆಹರಿಸಿಕೊಳ್ಳಿ ಎಂದು ಹೇಳಿದರು.
ದಲಿತರಿಗೆ ದೇವಸ್ಥಾನ ರ್ನಿಬಂಧಿಸಲಾಗಿದೆ ಎಂಬ ವಿಷಯ ಚರ್ಚಿಸಿದ್ದು ಗ್ರಾಮದಲ್ಲಿ ಅಂತಹ ಟನೆ ನಡೆದಿರುವುದು ಬೆಳಕಿಗೆ ಬಂದಲ್ಲಿ ಅಂತಹವರ ವಿರುದ್ಧ ಕ್ರಮಕ್ಕೆ ಮುಂದಾಗಲಾಗುವುದು. ದಲಿತ ಸಮುದಾಯಗಳು ನಿರ್ಭಯದಿಂದ ಜೀವನ ನಡೆಸಬೇಕು, ಕಿರುಕುಳಗಳ ನಡೆದಲ್ಲಿ ಸ್ಥಳಿಯ ಠಾಣೆಯನ್ನು ಸಂಪರ್ಕಿಸಿ ಎಂದರು.
ಸಭೆಯಲ್ಲಿ ಮಾಕರಹಳ್ಳಿ ಗ್ರಾಮದ ಸುತ್ತಮುತ್ತಲಿನ ಕ್ರಷರ್​ನಿಂದ ಬರುವ ಟಿಪ್ಪರ್​ ಗಾಡಿಯಿಂದ ಅಪಘಾತಗಳಾಗುತ್ತಿವೆ. ಕೆಲ ಗ್ರಾಮದಲ್ಲಿ ಅಕ್ರಮ ಮಧ್ಯ ಮಾರಾಟವಾಗುತ್ತಿರುವ ಕುರಿತು ಸಭೆಯಲ್ಲಿ ಚರ್ಚಿಸಲಾಯಿತು.