ಉಪಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ್ 
ರಾಜ್ಯ

ಬಡವರಿಗೆ ಸೈಟ್ ಕೊಡಲು ಭೂಮಿ ಗುರುತಿಸಿ

ಬೆಂಗಳೂರು: ಬಡವರಿಗೆ ಸೈಟ್ ನೀಡುವ ಕಾರ್ಯಕ್ರಮ ಘೋಷಣೆಯಾದ ಬಳಿಕ ಜನರಿಂದ ಉತ್ತಮ ಪ್ರತಿಕ್ರಿಯೆ ಬರುತ್ತಿದೆ. ಕೂಡಲೇ ಭೂಮಿ ಗುರುತಿಸುವ ಕೆಲಸ ಮಾಡಬೇಕೆಂದು ಉಪಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ್ ಸೂಚನೆ ನೀಡಿದ್ದಾರೆ.
ವಿಧಾನಸೌಧದಲ್ಲಿ ಎಲ್ಲ ಜಿಲ್ಲಾಧಿಕಾರಿಗಳೊಂದಿಗೆ ವೀಡಿಯೋ ಕಾನ್ಫರೆನ್ಸ್ ಮೂಲಕ ಕಂದಾಯ ಇಲಾಖೆಯ ಪ್ರಗತಿ ಪರಿಶೀಲನಾ ಸಭೆ ನಡೆಸಿ, ಅಧಿಕಾರಿಗಳಿಗೆ ಅಗತ್ಯ ಸೂಚನೆಗಳನ್ನು ನೀಡಿದರು. ಬಡವರಿಗೆ ಸೈಟ್ ಹಂಚಿಕೆ ಯೋಜನೆಯನ್ನು ಗಂಭೀರವಾಗಿ ಪರಿಗಣಿಸಬೇಕು. ಕೆಲ ಜಿಲ್ಲೆಗಳಲ್ಲಿ ಭೂಮಿ ಗುರುತಿಸುವ ಕೆಲಸ ಆಗಿಲ್ಲ. ನಿವೇಶನ ಸಿದ್ಧಪಡಿಸಲು ಭೂಮಿ ಗುರುತಿಸುವ ಪ್ರಕ್ರಿಯೆಯನ್ನು ತಿಂಗಳಾಂತ್ಯದ ವೇಳೆಗೆ ಪೂರ್ಣಗೊಳಿಸಬೇಕು. ಈ ಬಗ್ಗೆ ನಿರ್ಲಕ್ಷಿಸುವುದು ಬೇಡ. ಹಿರಿಯ ಅಧಿಕಾರಿಗಳು ಟೆಕ್ನಿಕಲ್ ಸಹಕಾರ ನೀಡಲಿದ್ದಾರೆ ಎಂದು ಪರಮೇಶ್ವರ್ ತಿಳಿಸಿದರು.
ಭಾರತ್ ಜೋಡೋ ಯುವ ಸಂಘ ಮುಖ್ಯಮಂತ್ರಿಯವರ ಕನಸಿನ ಯೋಜನೆಯಾಗಿದೆ. ಸಂಘಗಳ ನೋಂದಣಿ, ಮೆಂಟರ್ಸ್‌ಗಳ ನೇಮಕ ಸೇರಿ ಸಂಘ ಪ್ರಾರಂಭಿಸುವ ಪ್ರಕ್ರಿಯೆಯನ್ನು ಮತ್ತಷ್ಟು ಚುರುಕುಗೊಳಿಸಬೇಕು. ತಾಂತ್ರಿಕ ಸಮಸ್ಯೆ ಉಂಟಾದ ಹಿನ್ನೆಲೆಯಲ್ಲಿ ಸ್ಥಗಿತಗೊಳಿಸಲಾಗಿತ್ತು. ಕೂಡಲೇ ಅರ್ಜಿ ನಮೂನೆಗಳನ್ನು ವಿತರಿಸಿ, ಭರ್ತಿ ಮಾಡಿಸಬೇಕು. ಭಾರತ್ ಜೋಡೋ ಯುವಕ ಸಂಘ ಇಡೀ ದೇಶದಲ್ಲಿ ಮೊದಲ ಬಾರಿಗೆ ಜಾರಿಗೊಳಿಸುತ್ತಿರುವ ಕಾರ್ಯಕ್ರಮ. ಸರ್ಕಾರಕ್ಕೆ ಮತ್ತು ಅಧಿಕಾರಿಗಳಿಗೆ ಒಳ್ಳೆಯ ಹೆಸರು ಬರಲಿದೆ ಎಂದು ಪರಮೇಶ್ವರ್ ಮನವರಿಕೆ ಮಾಡಿದರು.
ಪ್ರಜಾಸೇವಾ ಅಭಿಯಾನದಲ್ಲಿ ಹೆಚ್ಚಾಗಿ ಕಂದಾಯ ಇಲಾಖೆಗೆ ಸಂಬಂಧಿಸಿದ ಅರ್ಜಿಗಳು ಬರುತ್ತಿವೆ. ಪಹಣಿ ತಿದ್ದುಪಡಿ, ಪೋಡಿ, ಪಿಂಚಣಿ ಸಮಸ್ಯೆ ಮುಂತಾದ ಅರ್ಜಿಗಳನ್ನು ತ್ವರಿತಗತಿಯಲ್ಲಿ ವಿಲೇವಾರಿ ಮಾಡಬೇಕು. ಆರ್‌ಟಿಸಿ, ಪೋಡಿ ಪ್ರಕರಣಗಳನ್ನು ಸರಳೀಕರಣಗೊಳಿಸಲಾಗಿದೆ. ಆದಾಗ್ಯೂ ಗೊಂದಲಗಳಿದ್ದರೆ ಹಿರಿಯ ಅಧಿಕಾರಿಗಳಿಂದ ಅಗತ್ಯ ಸಲಹೆ ಪಡೆದು ಮುಂದಿನ ಕ್ರಮ ಕೈಗೊಳ್ಳಬೇಕು ಎಂದು ಡಿಸಿಎಂ ಸೂಚಿಸಿದರು.
ಸಭೆಯಲ್ಲಿ ಕಂದಾಯ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ರಾಜೇಂದರ್ ಕುಮಾರ್ ಕಟಾರಿಯಾ, ವಿಪತ್ತು ನಿರ್ವಹಣಾ ಇಲಾಖೆ ಕಾರ್ಯದರ್ಶಿ ಮನೋಜ್ಕುಮಾರ್ ಮೀನಾ, ಕಂದಾಯ ಆಯುಕ್ತ ಮೀನಾ ನಾಗರಾಜ್, ಭೂ ಮಾಪನ ಮತ್ತು ಭೂ ದಾಖಲೆ ಇಲಾಖೆಯ ಆಯುಕ್ತ ವೆಂಕಟರಾಜ್ ಉಪಸ್ಥಿತರಿದ್ದರು.