- 9 ಗಂಟೆ ಸಿಐಡಿ ವಿಚಾರಣೆ ಎದುರಿಸಿದ ಅಧಿಕಾರಿ
- ಪಶುವೈದ್ಯಾಧಿಕಾರಿ ನೇಮಕ ಹಗರಣ ಹಾರಿಕೆ ಉತ್ತರ!
ಕರ್ನಾಟಕ ಲೋಕಸೇವಾ ಆಯೋಗ (ಕೆಪಿಎಸ್‌ಸಿ)ದಲ್ಲಿ 400 ಪಶುವೈದ್ಯಾಧಿಕಾರಿಗಳ ನೇಮಕಾತಿ ಪರೀಕ್ಷೆ ಅಕ್ರಮಕ್ಕೆ ಸಂಬಂಧಿಸಿದಂತೆ ಕಳೆದ ಹತ್ತು ದಿನಗಳಿಂದ ನಾಪತ್ತೆಯಾಗಿದ್ದ ಐಎಎಸ್ ಅಧಿಕಾರಿ ಜ್ಞಾನೇಂದ್ರ ಕುಮಾರ್ ಗಂಗ್ವಾರ್ ಶುಕ್ರವಾರ ದಿಢೀರ್ ಸಿಐಡಿ ಕಚೇರಿಯಲ್ಲಿ ಪ್ರತ್ಯಕ್ಷರಾಗಿ, ಅಂದಾಜು 9 ಗಂಟೆಗಳ ವಿಚಾರಣೆ ಎದುರಿಸಿದ್ದಾರೆ.
ನೇಮಕಾತಿ ಹಗರಣ ಸಂಬಂದ ಸಿಐಡಿ ಅಧಿಕಾರಿಗಳು ನೀಡಿದ್ದ ಎರಡನೇ ನೋಟಿಸ್‌ಗೆ ಜ್ಞಾನೇಂದ್ರ ಕುಮಾರ್ ಆ.28ರಂದು ವಿಚಾರಣೆಗೆ ಹಾಜರಾಗಬೇಕಿತ್ತು. ಆದರೆ, ಗೈರು ಹಾಜರಾಗಿದ್ದರಿಂದ ಶುಕ್ರವಾರ ಬೆಳಗ್ಗೆ 12 ಗಂಟೆಗೆ ಸಿಐಡಿ ಅಧಿಕಾರಿಗಳ ಮುಂದೆ ಹಾಜರಾದರು. ತನಿಖಾಧಿಕಾರಿ ರಾಘವೇಂದ್ರ ಹೆಗ್ಡೆ ಒಂಬಂತ್ತು ಗಂಟೆಗಳ ಕಾಲ ಸುದೀರ್ಘ ವಿಚಾರಣೆ ನಡೆಸಿದರು.
ಆ.18ರಂದು ಜಾರಿನಿರ್ದೇಶನಾಲಯ ಅಧಿಕಾರಿಗಳ ತಂಡ ಕೆಪಿಎಸ್‌ಸಿ ಕಚೇರಿ ಮೇಲೆ ದಾಳಿ ನಡೆಸಿರುವ ವಿಚಾರ ತಿಳಿಯುತ್ತಿದ್ದಂತೆ ಮೊಬೈಲ್ ಸ್ವಿಚ್ಛಆಫ್ ಮಾಡಿಕೊಂಡು ನಾಪತ್ತೆಯಾಗಿದ್ದರು.
2024ರಲ್ಲಿ ಪಶುವೈದ್ಯಾಧಿಕಾರಿ ಪರೀಕ್ಷೆ ನಡೆದಾಗ ಜ್ಞಾನೇಂದ್ರ ಕುಮಾರ್ ಪರೀಕ್ಷಾ ನಿಯಂತ್ರಕರಾಗಿದ್ದರು. ಈ ವೇಳೆ ಒಎಂಆರ್ ತಿದ್ದುಪಡಿ, ಅಭ್ಯರ್ಥಿಗಳಿಗೆ ಪರೀಕ್ಷೆಗೂ ಮುನ್ನವೇ ಉತ್ತರ ಹಾಗೂ ಪ್ರಶ್ನೆ ಪತ್ರಿಕೆ ತರಬೇತಿ, 70 ರಿಂದ 80 ಲಕ್ಷ ರೂ.ಹಣದ ವ್ಯವಹಾರ ಸೇರಿ ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ಸಾಲು ಸಾಲು ಎ್ಐಆರ್‌ಗಳ ದಾಖಲು ಸೇರಿ ರಾಜ್ಯಾದ್ಯಂತ ತೀವ್ರ ಆಕ್ರೋಶಕ್ಕೆ ಕಾರಣವಾಗಿತ್ತು.
ಅಕ್ರಮದಲ್ಲಿ ಇವರ ಹೆಸರು ಕೇಳಿ ಬಂದಿತ್ತು. ಜತೆಗೆ ಪ್ರಾಥಮಿಕ ತನಿಖೆಯಲ್ಲಿ ಉದ್ದೇಶಪೂರ್ವಕವಾಗಿ ಕೆಲವೊಂದು ಕರ್ತವ್ಯಲೋಪ ಎಸಗಿರುವುದು ಕಂಡು ಬಂದಿತ್ತು. ಜ್ಞಾನೇಂದ್ರ ಕುಮಾರ್ ಅವರ ಬೆಂಗಳೂರಿನಲ್ಲಿರುವ ನಿವಾಸದ ಮೇಲೆ ದಾಳೀ ಕೂಡ ನಡೆಸಲಾಗಿತ್ತು. ಅವರ ವಿಚಾರಣೆ ತನಿಖಾಧಿಕಾರಿಗಳಿಗೆ ಅಗತ್ಯ ಇರುವ ಪರಿಣಾಮ ಎರಡು ಬಾರಿ ನೋಟಿಸ್ ನೀಡಲಾಗಿತ್ತು.
ಪರೀಕ್ಷಾ ಅಕ್ರಮದ ಮಾಹಿತಿ ಇಲ್ಲ:
ಪಶುವೈದ್ಯಾಧಿಕಾರಿಗಳ ನೇಮಕಾತಿಯಲ್ಲಿ ನಡೆದಿರುವ ಅಕ್ರಮದ ಬಗ್ಗೆ ಸಿಐಡಿ ಅಧಿಕಾರಿಗಳ ಪ್ರಶ್ನೆಗೆ ತಮಗೆ ಅದರ ಬಗ್ಗೆ ಮಾಹಿತಿ ಇಲ್ಲ ಎಂದು ಹೇಳಿಕೆ ನೀಡಿದ್ದಾರೆ. ಆಯೋಗದ ಕಚೇರಿ ಮೇಲೆ ದಾಳಿ ಒಎಂಆರ್ ಶೀಟ್‌ಗಳನ್ನು ಜಪ್ತಿ ಮಾಡಿತ್ತು. ಜತೆಗೆ ಒಎಂಆರ್ ಸಂಗ್ರಹಿಸಿದ್ದ ಕೊಠಡಿಯಲ್ಲಿ ಸಿಸಿ ಕ್ಯಾಮರಾಗಳ ದೃಶ್ಯಗಳ ಆಧಾರವಾಗಿಟ್ಟುಕೊಂಡು 50ಕ್ಕೂ ಹೆಚ್ಚು ಪ್ರಶ್ನೆಗಳನ್ನು ಜ್ಞಾನೇಂದ್ರ ಕುಮಾರ್‌ಗೆ ಅಧಿಕಾರಿಗಳು ಕೇಳಿದ್ದಾರೆ ಎನ್ನಲಾಗಿದೆ.
ಒಎಂಆರ್ ಇಟ್ಟಿದ್ದ ಕೊಠಡಿಯಲ್ಲಿನ ಸಿಸಿ ಕ್ಯಾಮರಾ ಹಾರ್ಡ್ ಡಿಸ್ಕ್‌ನಲ್ಲಿ ಪ್ರಮುಖ ದೃಶ್ಯಗಳು ಅಳಿಸಲಾಗಿದೆ ಕಾರಣವೇನು? ಯಾವ ಕಾರಣಕ್ಕೆ ಗುಜರಾತ್‌ನ ಅಹಮದಬಾದ್‌ನಲ್ಲಿರುವ ಎಜುಟೆಸ್ಟ್ ಸೆಲ್ಯೂಷನ್ ಪ್ರೈ.ಲಿ. ಪರೀಕ್ಷಾ ಪತ್ರಿಕೆಗಳ ಡಿಜಿಟಲ್ ಮೌಲ್ಯಮಾಪನದ ಜವಾಬ್ದಾರಿ ನೀಡಲಾಗಿತ್ತು? ಅಲ್ಲಿಂದಲೇ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿವೆ ಎನ್ನಲಾಗಿದೆ, ಇದು ನಿಜವೇ? ಸ್ಟ್ರಾಂಗ್ ರೂಮ್ ಭದ್ರತೆಗೆ ಕುರಿತು ಕೈಗೊಂಡ ಕ್ರಮವೇನು? ಪಶುವೈದ್ಯಾಧಿಕಾರಿ ಹುದ್ದೆ ಕೊಡಿಸಲು ಲಕ್ಷಾಂತರ ರೂ. ವ್ಯವಹಾರ ನಡೆದಿದೆ. ಅದರಲ್ಲಿ ನಿಮ್ಮ ಹೆಸರು ಕೇಳಿ ಬಂದಿದೆ. ಅದು ನಿಜವೇ? ಎಂಬ ಹಲವು ಪ್ರಶ್ನೆಗಳ ಸುರಿ ಮಳೆ ಮಾಡಿದ್ದಾರೆ ಎನ್ನಲಾಗಿದೆ. ಆದರೆ, ಎಲ್ಲ ಪ್ರಶ್ನೆಗಳಿಗೂ ಜ್ಞಾನೇಂದ್ರ ಗಂಗ್ವಾರ್ ಹಾರಿಕೆ ಉತ್ತರ ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ. ಪುನಃ ವಿಚಾರಣೆಗೆ ಹಾಜರಾಗುಂತೆ ಸಿಐಡಿ ಅಧಿಕಾರಿಗಳು ಸೂಚಿಸಿದಾರೆ.
ತಂದೆ ಅನಾರೋಗ್ಯದ ನಿಮಿತ್ತ ಊರಿಗೆ!
ಆ.18ರಿಂದ ಆ.25ರವರೆಗೆ ಮೊಬೈಲ್ ಸ್ವಿಚ್ಡ್‌ಆಫ್ ಆಗಿತ್ತು. ಆ ಅವಧಿಯಲ್ಲಿ ಎಲ್ಲಿಗೆ ಹೋಗಿದ್ದಿರಿ? ಪ್ರಕರಣದಲ್ಲಿ ಭಾಗಿಯಾಗಿಲ್ಲ ಎಂಬುದಾದರೆ ನಾಪತ್ತೆ ಆಗಿದ್ದು ಯಾತಕ್ಕೆ? ಎಂದು ಪ್ರಶ್ನಿಸಿಲಾಗಿದೆ. ಅದಕ್ಕೆ ಉತ್ತರಿಸಿದ ಜ್ಞಾನೇಂದ್ರ ಕುಮಾರ್, ತಂದೆಗೆ ಅನಾರೋಗ್ಯ ಹಾಗೂ ವೈಯಕ್ತಿಕ ಕಾರಣಕ್ಕೆ ದೆಹಲಿಗೆ ತೆರಳಿದ್ದೆ ಎಂದಷ್ಟೇ ಹೇಳಿದ್ದು, ಹೆಚ್ಚಿನ ಮಾಹಿತಿ ನೀಡಿಲ್ಲ ಎಂದು ಮೂಲಗಳು ತಿಳಿಸಿವೆ.