- ಪರಪ್ಪನ ಅಗ್ರಹಾರ ಜೈಲಿನಲ್ಲಿ ತನಿಖೆಗೆ ಅಸಹಕಾರ
- ಬಾಡಿ ವಾರಂಟ್ ಮೇಲೆ 5 ದಿನ ಕಸ್ಟಡಿಗೆ
- ಅಕ್ರಮದಿಂದ ಬಂದ ಹಣ ಹವಾಲಾ ವಹಿವಾಟು ಶಂಕೆ
- ಶಾಂತಾ ಹೊಸಮನಿಗೆ ಸೇರಿ ದಾವಣಗೆರೆ, ಬೆಂಗಳೂರಿನ ಮನೆ ಮೇಲೆ ಸಿಐಡಿ ದಾಳಿ
ಬೆಂಗಳೂರು: ಕರ್ನಾಟಕ ಲೋಕಸೇವಾ ಆಯೋಗ(ಕೆಪಿಎಸ್‌ಸಿ)ದಲ್ಲಿ ಪರೀಕ್ಷಾ ಹಗರಣ ಸಂಬಂಧ ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ಐಎಎಸ್ ಅಧಿಕಾರಿ ಜ್ಞಾನೇಂದ್ರ ಕುಮಾರ್ ಗಂಗ್ವಾರ್ ಮತ್ತು ಮಧ್ಯವರ್ತಿ ಬಸವರಾಜ್ ಕನ್ನಾಳೆಯನ್ನು ಜಾರಿ ನಿರ್ದೇಶನಾಲಯ(ಇ.ಡಿ) ಅಧಿಕಾರಿಗಳು ಬಾಡಿ ವಾರಂಟ್ ಮೇಲೆ ವಶಕ್ಕೆ ಪಡೆದಿದ್ದಾರೆ.
ಸಿಐಡಿ ಅಧಿಕಾರಿಗಳು ಈ ಹಿಂದೆ ಆರೋಪಿಗಳಿಬ್ಬರನ್ನು ಬಂಧಿಸಿ 10 ದಿನಗಳ ಕಾಲ ವಿಚಾರಣೆ ನಡೆಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು. ಆ ವೇಳೆ ನಗರದ ಮ್ಯಾಜಿಸ್ಟ್ರೇಟ್ ಕೋರ್ಟ್‌ನಲ್ಲಿ ಅನುಮತಿ ಪಡೆದಿದ್ದ ಇಡಿ, ಪರಪ್ಪನ ಅಗ್ರಹಾರ ಜೈಲಿನಲ್ಲಿ ಎರಡು ದಿನ ಇಬ್ಬರನ್ನು ವಿಚಾರಣೆ ನಡೆಸಿತ್ತು. ಆದರೆ, ಇಬ್ಬರು ಅಧಿಕಾರಿಗಳ ವಿಚಾರಣೆಗೆ ಅಸಹಕಾರ ತೋರಿದ ಹಿನ್ನೆಲೆಯಲ್ಲಿ ಸೆ.18ರಂದು ಜ್ಞಾನೇಂದ್ರ ಕುಮಾರ್ ಮತ್ತು ಸೆ.19ರಂದು ಬಸವರಾಜ್ ಕನ್ನಾಳೆಯನ್ನು ಬಾಡಿ ವಾರಂಟ್ ಮೇಲೆ ವಶಕ್ಕೆ ಪಡೆದು ವಿಚಾರಣೆ ನಡೆಸಲು ಮುಂದಾಗಿದೆ ಎಂದು ಮೂಲಗಳು ತಿಳಿಸಿವೆ.
ಭ್ರಷ್ಟಾಚಾರದ ದಾಖಲೆ ಸಂಗ್ರಹ:
ಕೆಪಿಎಸ್‌ಸಿಯಲ್ಲಿ ಪರೀಕ್ಷಾ ನಿಯಂತ್ರಕರಾಗಿದ್ದ ಜ್ಞಾನೇಂದ್ರ ಪಶುವೈದ್ಯಾಧಿಕಾರಿಗಳ ಪರೀಕ್ಷೆಯಲ್ಲಿ ಭಾರೀ ಅಕ್ರಮ ಎಸಗಿದ್ದರು. ಮಧ್ಯವರ್ತಿ ಬಸವರಾಜ್ ಕನ್ನಾಳೆ ಜತೆ ಸೇರಿ ಹಲವು ಅಭ್ಯರ್ಥಿಗಳಿಂದ ಲಕ್ಷಾಂತರ ರೂ. ಪಡೆದು ಅರ್ಹತಾ ಪಟ್ಟಿಯಲ್ಲಿ ಆಯ್ಕೆಯಾಗುವಂತೆ ಮಾಡಿದ್ದರು. ಇದಕ್ಕೆ ಸಂಬಂಧಿಸಿದಂತೆ ಹಲವು ತಾಂತ್ರಿಕ ಮತ್ತು ಸಾಕ್ಷಾೃಧಾರಗಳನ್ನು ಸಂಗ್ರಹಿಸಿರುವ ಇಡಿ ಅಧಿಕಾರಿಗಳು ಇಬ್ಬರನ್ನು ವಿಚಾರಣೆಗೆ ಒಳಪಡಿಸಿದೆ.
ಪಶುವೈದ್ಯಾಧಿಕಾರಿಗಳ ಹುದ್ದೆ ಅಷ್ಟೇ ಅಲ್ಲದೇ ವಿವಿಧ ಇಲಾಖೆಗಳ ನೇಮಕಾತಿಯಲ್ಲೂ ದೊಡ್ಡ ಮಟ್ಟದ ಅಕ್ರಮ ಎಸಗಿದ್ದರು. ಆ.18ರಂದು ಇಡಿ ಜ್ಞಾನೇಂದ್ರಕುಮಾರ್ ಮನೆ ಮೇಲೆ ದಾಳಿ ನಡೆಸಿತ್ತು. ಆದರೆ, ಆರೋಪಿ ರಾಜ್ಯ ತೊರೆದು ಪರಾರಿಯಾಗಿದ್ದ. ಆ ಬಳಿಕ ಸಿಐಡಿ ಅಧಿಕಾರಿಗಳು ಬಂಧಿಸಿದ್ದರು.
ಅಕ್ರಮ ಹಣದಿಂದ ಅಸ್ತಿ, ಚಿನ್ನ ಖರೀದಿ
ಪ್ರಾಥಮಿಕ ವಿಚಾರಣೆಯಲ್ಲಿ ಜ್ಞಾನೇಂದ್ರಕುಮಾರ್, ಮಧ್ಯವರ್ತಿ ಬಸವರಾಜು ಕನ್ನಾಳೆ ಜತೆ ಸೇರಿ ಆಯೋಗದ ಹಲವು ಪರೀಕ್ಷೆಯಲ್ಲೂ ಅಕ್ರಮ ಎಸಗಿದ್ದಾರೆ. ಈ ಮೂಲಕ ಕೋಟ್ಯಂತರ ರೂ. ಲಂಚ ಪಡೆದುಕೊಂಡಿದ್ದಾರೆ. ದೆಹಲಿಯಲ್ಲಿರುವ ತನ್ನ ಪ್ರೇಯಸಿಗೆ ಒಮ್ಮೆ 26 ಲಕ್ಷ ರೂ. ಮತ್ತೊಮ್ಮೆ 30 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಖರೀದಿಸಿ ಉಡುಗೋರೆಯಾಗಿ ನೀಡಿದ್ದ. ಅಲ್ಲದೇ ಕ್ನನಾಳೆ ಕೂಡ ಅಕ್ರಮದಿಂದ ಬಂದ ಹಣದಿಂದ ಕೃಷಿ ಜಮೀನು ಖರೀದಿ, ಡೈರಿಾರ್ಮ್ ನಿರ್ಮಾಣ ಮಾಡಿದ್ದ. ಅಲ್ಲದೇ ಬೆಂಗಳೂರಿನಲ್ಲಿ ಅಕ್ರಮ ಆಸ್ತಿ, ಮನೆ ಹೊಂದಿದ್ದ. ವಿವಿಧ ಆಯಾಮದಲ್ಲಿ ತನಿಖೆ ಗೊಂಡಿದ್ದ ತನಿಖಾ ಸಂಸ್ಥೆಗಳು ಆಯೋಗದಲ್ಲಿ ನಡೆಯುವ ನೇಮಕಾತಿ ಪರೀಕ್ಷೆಗಳ ಮೂಲಕ ಭಾರೀ ಅಕ್ರಮ ಎಸಗಿದ್ದಾನೆ ಎಂಬುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ.
ಶಾಂತಾ ಹೊಸಮನಿ ಮನೆ ಮೇಲೆ ದಾಲಿ
ಪ್ರಕರಣದಲ್ಲಿ ಭಾಗಿಯಾದ ಆರೋಪದ ಮೇರೆಗೆ ಆಯೋಗದ ಸದಸ್ಯೆ ಶಾಂತಾ ಹೊಸಮನಿ ಮನೆಗಳ ಮೇಲೆ ಸಿಐಡಿ ಅಧಿಕಾರಿಗಳು ಶನಿವಾರ ದಾಳಿ ನಡೆಸಿ ಪರಿಶೀಲನೆ ನಡೆಸಿದ್ದಾರೆ. ಬೆಂಗಳೂರಿನಲ್ಲಿ ಒಂದು ಮನೆ, ದಾವಣಗೆರೆಯ ಮತ್ತೊಂದು ಮನೆಯಲ್ಲಿ ಶೋಧ ನಡೆಸಿದ್ದಾರೆ. ಬೆಂಗಳೂರಿನ ಮನೆಯಲ್ಲಿ ನಡೆಸಿದ ತಪಾಸಣೆ ವೇಳೆ 2 ಮೊಬೈಲ್, ಒಂದು ಟ್ಯಾಬ್ ಜಪ್ತಿ ಮಾಡಲಾಗಿದ್ದು, ಅವುಗಳಲ್ಲಿರುವ ಡೇಟಾಗಳ ಡಿಲೀಟ್ ಮಾಡಲಾಗಿದೆ. ಹೀಗಾಗಿ ರಿಟ್ರೀವ್‌ಗಾಗಿ ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ಇನ್ನು ಶಾಂತಾ ಹೊಸಮನಿ ದಾವಣಗೆರೆಯ ಮನೆಯನ್ನು ಬಾಡಿಗೆಗೆ ನೀಡಿ, ಬೆಂಗಳೂರಿನಲ್ಲಿ ಕುಟುಂಬದ ಜತೆ ವಾಸವಾಗಿದ್ದರು ಎನ್ನಲಾಗಿದೆ.
ಜಾಮೀನು ಅರ್ಜಿ ಆದೇಶ ಸೆ.21ಕ್ಕೆ
ಕೆಪಿಎಸ್‌ಸಿ ಅಕ್ರಮ ಆರೋಪದಲ್ಲಿ ಪರಪ್ಪನ ಅಗ್ರಹಾರ ಜೈಲು ಸೇರಿರುವ ಐಎಎಸ್ ಅಧಿಕಾರಿ ಜ್ಞಾನೇಂದ್ರ ಕುಮಾರ್ ಗಂಗ್ವಾರ್ ಮತ್ತು ಮಧ್ಯವರ್ತಿ ಬಸವರಾಜ್ ಕನ್ನಾಳೆ ಜಾಮೀನು ಅರ್ಜಿ ಆದೇಶವನ್ನು ಕೋರ್ಟ್ ಸೆ.21ಕ್ಕೆ ಕಾಯ್ದಿರಿಸಿ ಆದೇಶ ಮಾಡಿದೆ.
ಸಿಐಡಿ ಬಂಧನದ ವೇಳೆ ನಗರದ 52ನೇ ಸೆಷನ್ಸ್ ಕೋರ್ಟ್‌ಗೆ ಜಾಮೀನು ಅರ್ಜಿ ಸಲ್ಲಿಸಿದ್ದರು. ಶನಿವಾರ ಅರ್ಜಿ ವಿಚಾರಣೆ ನಡೆಸಿದ ಕೋರ್ಟ್ ವಾದ-ಪ್ರತಿವಾದ ಆಲಿಸಿ ಜಾಮೀನು ಆದೇಶವನ್ನು ನ್ಯಾಯಾಲಯ ಕಾಯ್ದಿರಿಸಿದೆ.
ಹವಾಲಾ ದಂಧೆ ಶಂಕೆ:
ಮೂರನಾಲ್ಕು ವರ್ಷಗಳಿಂದ ನೇಮಕಾತಿ ಪರೀಕ್ಷೆಯಲ್ಲಿ ಅಕ್ರಮ ಎಸಗಿರುವ ಜ್ಞಾನೇಂದ್ರ ಕುಮಾರ್ ಗಂಗ್ವಾರ್ ಮತ್ತು ಬಸವಾಜ್ ಕನ್ನಾಳೆ ಅಭ್ಯರ್ಥಿಗಳಿಂದ ಪಡೆದಿದ್ದ ನೂರಾರು ಕೋಟಿ ರೂ. ಹವಾಲಾ ದಂಧೆಯಲ್ಲಿ ತೋಡಗಿಸಿದರು ಎಂಬ ಶಂಕೆ ವ್ಯಕ್ತಪಡಿಸಿರುವ ಇಡಿ, ಆ ಮೂಲಕವೂ ತನಿಖೆಗೆ ನಡೆಸಲು ಮುಂದಾಗಿದೆ. ಸಾಮಾನ್ಯ ಖಾತೆಗಳನ್ನು ಹೊಂದಿದ್ದ ಆರೋಪಿಗಳಿಬ್ಬರು ವಾರ್ಷಿಕ ಕೋಟ್ಯಂತರ ರೂ. ಹಣಕಾಸು ವ್ಯವಹಾರ ನಡೆಸಿದರೆ ತೊಂದರೆಯಲಾಗಲಿದೆ ಎಂದು ಹವಾಲಾ ಮೂಲಕ ಹಣಕಾಸು ವ್ಯವಹಾರ, ಅಕ್ರಮ ಆಸ್ತಿ ಖರೀದಿ ಮಾಡಿದ್ದರು ಎನ್ನಲಾಗಿದೆ.