judicial custody 
ರಾಜ್ಯ

ಐಎಎಸ್ ಅಧಿಕಾರಿ ಜ್ಞಾನೇಂದ್ರ, ಕನ್ನಾಳೆ 14ದಿನ ನ್ಯಾಯಾಂಗ ಬಂಧನ

ಪ್ರಮುಖ ಮುಖ್ಯಾಂಶಗಳು

  • ಪಶುವೈದ್ಯಾಧಿಕಾರಿ ನೇಮಕಾತಿಯಲ್ಲಿ ಅಕ್ರಮ ಸಾಭೀತು
  • ಕಸ್ಟಡಿಗೆ ಪಡೆಯಲು ಕೋರ್ಟ್‌ಗೆ ಇ.ಡಿ ಅರ್ಜಿ
ಬೆಂಗಳೂರು: ಕರ್ನಾಟಕ ಲೋಕಸೇವಾ ಆಯೋಗ (ಕೆಪಿಎಸ್‌ಸಿ)ದಲ್ಲಿ ಪಶು ವೈದ್ಯಾಧಿಕಾರಿಗಳ ನೇಮಕಾತಿ ಪರೀಕ್ಷೆ ಅಕ್ರಮದಲ್ಲಿ ಬಂಧನಕ್ಕೊಳಗಾಗಿರುವ ಐಎಎಸ್ ಅಧಿಕಾರಿ ಜ್ಞಾನೇಂದ್ರ ಕುಮಾರ್ ಗಂಗ್ವಾರ್ ಮತ್ತು ಮಧ್ಯವರ್ತಿ ಬಸವರಾಜು ಕನ್ನಾಳೆ 14ದಿನ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ಕೋರ್ಟ್ ಆದೇಶ ಮಾಡಿದೆ.
ಆಗಸ್ಟ್ 31ರಂದು ಇಬ್ಬರು ಆರೋಪಿಗಳನ್ನು ಬಂಧಿಸಿ ಕೋರ್ಟ್‌ಗೆ ಹಾಜರು ಪಡಿಸಿದ್ದ ಸಿಐಡಿ ಅಧಿಕಾರಿಗಳು 10 ದಿನಗಳ ಕಾಲ ವಶಕ್ಕೆ ಪಡೆದು ಪರೀಕ್ಷಾ ನೇಮಕಾತಿಯಲ್ಲಿ ನಡೆದಿದ್ದ ಭ್ರಷ್ಟಾಚಾರದ ಕುರಿತು ತೀವ್ರ ವಿಚಾರಣೆ ನಡೆಸಿದ್ದರು. ಬುಧವಾರ ಕಸ್ಟಡಿ ಅಂತ್ಯಗೊಂಡ ಹಿನ್ನೆಲೆಯಲ್ಲಿ ನಗರದ 1ನೇ ಎಸಿಜೆಎಂ ಕೋರ್ಟ್‌ಗೆ ಹಾಜರು ಪಡಿಸಿದ್ದರು. ಮತ್ತೊಮ್ಮೆ ವಿಚಾರಣೆಗೆ ಅಗತ್ಯವಿಲ್ಲ ಎಂಬ ಕಾರಣಕ್ಕೆ ಇಬ್ಬರನ್ನು ಕೋರ್ಟ್ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ.
ಮತ್ತೊಂದೆಡೆ ಜಾರಿ ನಿರ್ದೇಶನಾಲಯ(ಇ.ಡಿ) ಅಧಿಕಾರಿಗಳು ಇಬ್ಬರು ಆರೋಪಿಗಳನ್ನು ಪರಪ್ಪನ ಅಗ್ರಹಾರ ಜೈಲಿನಲ್ಲಿ ವಿಚಾರಣೆಗೆ ಅವಕಾಶ ನೀಡುವಂತೆ ಕೋರಿ ಅರ್ಜಿ ಸಲ್ಲಿಸಿದ್ದು, ಗುರುವಾರ ವಿಚಾರಣೆ ನಡೆಯಲಿದೆ.

ಕಸ್ಟಡಿಗೆ ಪಡೆಯಲು ಇ.ಡಿ ಮನವಿ:

ಆರೋಪಿಗಳ ವಿಚಾರಣೆ ಕೋರಿ ಇ.ಡಿ ಅಧಿಕಾರಿಗಳು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದಾರೆ. ಈ ಹಿಂದೆ ದಾಳಿ ಸಂದರ್ಭದಲ್ಲಿ ಜ್ಞಾನೇಂದ್ರ ಕುಮಾರ್ ಗಂಗ್ವಾರ್ ನಾಪತ್ತೆಯಾಗಿದ್ದು, ಸಾಕ್ಷ್ಯ ನಾಶ ಪಡಿಸಿರುವ ಶಂಕೆ ಇದೆ. ಪ್ರಕರಣದಲ್ಲಿ ಬಸವರಾಜು ಕನ್ನಾಳೆ ಪಾತ್ರ ಇರುವುದರಿಂದ ಇಬ್ಬರನ್ನು ಪರಪ್ಪನ ಅಗ್ರಹಾರ ಜೈಲಿನಲ್ಲೇ ವಿಚಾರಣೆಗೆ ಅವಕಾಶ ನೀಡುವಂತೆ ಅರ್ಜಿಯಲ್ಲಿ ಉಲ್ಲೇಖಿಸಿದೆ. ಈ ಸಂಬಂಧ ಗುರುವಾರ ವಿಚಾರಣೆ ನಡೆಯಲಿದ್ದು, ಬಹುತೇಕ ಇಬ್ಬರನ್ನು ಇ.ಡಿ ವಶಕ್ಕೆ ಕೋರ್ಟ್ ನೀಡುವ ಸಾಧ್ಯತೆಯಿದೆ ಎಂದು ಹೇಳಲಾಗಿದೆ.
ಪ್ರಕರಣದ 5ನೇ ಆರೋಪಿ ಜ್ಞಾನೇಂದ್ರ ಗಂಗ್ವಾರ್ ಅನಾರೋಗ್ಯ ಕಾರಣ ನೀಡಿ ಮಧ್ಯಂತರ ಜಾಮೀನು ಕೋರಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದಾರೆ. ತಮಗೆ ಬೆನ್ನು ನೋವು ಇರುವುದರಿಂದ ಮಧ್ಯಂತರ ಜಾಮೀನು ನೀಡುವಂತೆ ಅರ್ಜಿಯಲ್ಲಿ ಉಲ್ಲೇಖಿಸಿದ್ದಾರೆ. ಈ ಅರ್ಜಿ ವಿಚಾರಣೆಯೂ ಗುರುವಾರ ನಡೆಯಲಿದೆ.
ಕೆಪಿಎಸ್‌ಸಿಯಲ್ಲಿ ನಡೆದಿರುವ ಪರೀಕ್ಷಾ ಹಗರಣದ ಸಂಬಂಧ ಸಿಐಡಿ ಅಧಿಕಾರಿಗಳು ಇದುವರೆಗೆ ನಡೆಸಿರುವ ಆರೋಪಿಗಳ ವಿಚಾರಣೆಯಲ್ಲಿ ಐಎಎಸ್ ಅಧಿಕಾರಿ, ಕನ್ನಾಳೆ ಸೇರಿ ಹಲವು ಅಭ್ಯರ್ಥಿಗಳು ಭಾಗಿಯಾಗಿರುವುದು ಬೆಳಕಿಗೆ ಬಂದಿದೆ. ಜ್ಞಾನೇಂದ್ರ ಕರ್ತವ್ಯಲೋಪ ಎಸಗಿರುವುದು ದೃಢಪಟ್ಟಿದೆ. ಪರೀಕ್ಷೆಗೂ ಮುನ್ನವೇ ಪ್ರಶ್ನೆ ಪತ್ರಿಕೆಗಳನ್ನು ಕಳ್ಳತನ ಮಾಡಿ ಬಸವರಾಜು ಕನ್ನಾಳೆಗೆ ನೀಡಿದ್ದಾನೆ. ಪ್ರಮುಖವಾಗಿ ಪಶುವೈದ್ಯಾಧಿಕಾರಿ ಪ್ರಶ್ನೆ ಪತ್ರಿಕೆಯನ್ನು ನೀಡಿರುವುದು, ಹಣಕಾಸು ವ್ಯವಹಾರದ ಬ್ಯಾಂಕ್‌ನ ವಹಿವಾಟು ಹಾಗೂ ರೆಸಾರ್ಟ್‌ನಲ್ಲಿ ಅಭ್ಯರ್ಥಿಗಳಿಗೆ ಪರೀಕ್ಷೆಗೆ ಸಿದ್ಧತೆ ಸೇರಿ ಹಲವು ಸಾಕ್ಷ್ಯಗಳನ್ನು ಸಿಐಡಿಗೆ ಲಭ್ಯವಾಗಿವೆ ಎಂದು ಸಿಐಡಿ ಮೂಲಗಳು ಹೇಳಿವೆ.
ಶಾಂತ ಹೊಸಮನಿ ಮನೆ ಮೇಲೆ ದಾಳಿ!

ಕಳೆದ ಮೂರು ದಿನಗಳಿಂದ ನಾಪತ್ತೆಯಾಗಿರುವ ಆಯೊಗದ ಸದಸ್ಯೆ ಶಾಂತಾ ಹೊಸಮನಿ ಅವರಿಗೆ ಸೇರಿದ ಹೊಸಕೆರೆಹಳ್ಳಿ ಮತ್ತು ನಾಗರಬಾವಿಯಲ್ಲಿರುವ ಮನೆ ಮೇಲೆ ಸಿಐಡಿ ಅಧಿಕಾರಿಗಳು ದಾಳಿ ನಡೆಸಿ ಶೋಧ ನಡೆಸಿದ್ದಾರೆ. ಈ ವೇಳೆ ಆಕೆ ಮನೆಯಲ್ಲಿ ಇರಲಿಲ್ಲ. ಆದರೆ, ಮನೆಯಲ್ಲಿ ಪರಿಶೀಲನೆ ವೇಳೆ ಕೆಲವು ದಾಖಲೆಗಳನ್ನು ಅಧಿಕಾರಿಗಳು ಜಪ್ತಿ ಮಾಡಿದ್ದಾರೆ ಎನ್ನಲಾಗಿದೆ.

ಮುಂದುವರೆದ ಸಾಹುಕಾರ್ ಹುಡುಕಾಟ !

ಕೆಪಿಎಸ್‌ಸಿ ಅಧ್ಯಕ್ಷ ಸ್ಥಾನದಿಂದ ಅಮಾನತ್ತುಗೊಂಡಿರುವ ಶಿವಶಂಕರಪ್ಪನ ಸಾಹುಕಾರ ಹುಡುಕಾಟ ಮುಂದುವರೆಸಿರುವ ಸಿಐಡಿ ಅಧಿಕಾರಿಗಳು, ಬೆಂಗಳೂರು, ಕಲಬುರಗಿ ಸೇರಿ ಹಲವು ಸ್ಥಳಗಳಲ್ಲಿ ಶೋಧಕಾರ್ಯ ಮುಂದುವರೆಸಿದ್ದಾರೆ. ಸೆ.7 ರಂದು ನಿರೀಕ್ಷಣಾ ಜಾಮೀನನ್ನು ಹೈಕೋರ್ಟ್ ವಜಾಗೊಳಿಸಿದ ದಿನದ ರಾತ್ರಿಯೇ ಸಾಹುಕಾರ್ ನಾಪತ್ತೆಯಾಗಿದ್ದಾರೆ. ಸಿಐಡಿ ಕಚೇರಿಗೆ ಸೆ.3ರಂದು ತಡರಾತ್ರಿ ಭೇಟಿ ನೀಡಿದ್ದ ಆರೋಪಿ ಶಿವಶಂಕರಪ್ಪ ಕೆಲ ಕಾರಣ ನೀಡಿ ವಿಚಾರಣೆಗೆ ಎರಡು ದಿನದ ಬಳಿಕ ಹಾಜರಾಗುವುದಾಗಿ ಹೇಳಿದ್ದರು. ಪರೀಕ್ಷಾ ಹಗರಣದಲ್ಲಿ ಅವರ ವಿಚಾರಣೆ ಅತ್ಯವಶ್ಯಕವಾಗಿರುವ ಕಾರಣ ಸಾಹುಕಾರ್ ಹುಡುಕಾಟ ಮುಂದುವರೆಸಿದ್ದಾರೆ. ಎರಡು ನೋಟಿಸ್ ಬಳಿಕ ಮೂರನೇ ನೋಟಿಸ್‌ನ್ನು ಸಿಐಡಿ ಖುದ್ದು ಅವರಿಗೆ ನೀಡಲು ತಯಾರಿ ನಡೆಸಿದ್ದಾರೆ.