ಆಳಂದನಲ್ಲಿ ಹಮ್ಮಿಕೊಂಡಿದ್ದ ಅಭಿಮಾನಿಗಳು ಹಾಗೂ ಕಾರ್ಯಕರ್ತರ ಸಭೆಯಲ್ಲಿ ಶಾಸಕ ಬಿ.ಆರ್.ಪಾಟೀಲ್ ಮಾತನಾಡಿದರು. ಶಿವಪುತ್ರಪ್ಪ ಪಾಟೀಲ್, ಮಜರ್ ಹುಸೇನಿ, ಶರಣಬಸಪ್ಪ ಭೂಸನೂರ, ಪ್ರತಾಪ ಕುಲಕರ್ಣಿ, ಈರಣ್ಣ ಝಳಕಿ ಇತರರಿದ್ದರು.
- ಶಾಸಕ ಬಿ.ಆರ್.ಪಾಟೀಲ್ ಬೇಸರ
- ಆಳಂದನಲ್ಲಿ ಅಭಿಮಾನಿಗಳು, ಕಾರ್ಯಕರ್ತರ ಸಭೆ
ಆಳಂದ: ರಾಜಕೀಯ ಜೀವನದಲ್ಲಿ ನುಡಿದಂತೆ ನಡೆಯುವನನ್ನು ನಂಬಿ ನಾನು ಕೆಟ್ಟಿದ್ದು, ಸಮಯ ನೋಡಿ ಕಾರ್ಯಕರ್ತರ ಜತೆಗೆ ಚರ್ಚಿಸಿ ಮುಂದಿನ ರ್ನಿಣಯ ಕೈಗೊಳ್ಳುತ್ತೇನೆ ಎಂದು ಸಚಿವ ಸ್ಥಾನ ವಂಚಿತ ಶಾಸಕ ಬಿ.ಆರ್.ಪಾಟೀಲ್ ಹೇಳಿದರು.
ಸಮತಾ ಲೋಕ ಶಿಕ್ಷಣ ಸಮಿತಿಯ ಸಿಬಿಎಸ್ಸಿ ಶಾಲೆ ಆವರಣದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಅಭಿಮಾನಿಗಳು ಹಾಗೂ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿ, ಯಾವುದೇ ಕಾರಣಕ್ಕೂ ರಾಜೀನಾಮೆ ನೀಡುವುದಿಲ್ಲ. ಇನ್ನೂ 2 ವರ್ಷ ಅವಧಿಯಿದ್ದು, ಕ್ಷೇತ್ರದ ಅಭಿವೃದ್ಧಿಗೆ ಸಕ್ರಿಯವಾಗಿ ಕೆಲಸ ಮಾಡುತ್ತೇನೆ. ಗೌರವ ಸಿಗದಿದ್ದರೆ ಮುಂದಿನ ಕ್ರಮ ಕೈಗೊಳ್ಳುತ್ತೇನೆ ಎಂದು ತಿಳಿಸಿದರು.
ಅಭಿಮಾನಿಗಳು, ಕಾರ್ಯಕರ್ತರು ನನ್ನೊಂದಿಗೆ ಇದ್ದರೆ ಸಾಕು. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮೂರು ನನ್ನನ್ನು ಮಂತ್ರಿ ಮಾಡುವುದಾಗಿ ಹೇಳಿ ಕೈಬಿಟ್ಟಿದ್ದಾರೆ. ಯಾಕೆ ಎಂದು ಕೇಳಿದರೆ ನಿಮ್ಮ ಜಿಲ್ಲೆಯವರೇ ನಿಮಗೆ ಮಂತ್ರಿ ಸ್ಥಾನ ನೀಡದಂತೆ ಅಪಸ್ವರ ಎತ್ತಿದ್ದಾರೆ ಎಂದಿದ್ದಾರೆ. ಅವರು ಯಾರು ಎಂಬುದು ಬಹಿರಂಗ ಪಡಿಸಲಿ ಎಂದು ಕಾರ್ಯಕರ್ತರು ನನ್ನನ್ನು ಕೇಳುತ್ತಿದ್ದಾರೆ ಎಂದರು.
ಕಾರ್ಯಕರ್ತರಾದ ನಾಗೇಂದ್ರಪ್ಪ ಥಂಬೆ, ಸಲಾಂ ಸಗರಿ, ಈರಣ್ಣ ಝಳಕಿ, ಮಜರ್ ಹುಸೇನಿ, ಬಸವರಾಜ ಪವಾಡಸೆಟ್ಟಿ, ಎಚ್.ಎಂ.ಪಟೇಲ್, ಗುರುಶರಣ ಪಾಟೀಲ್, ಪಾಶಾ ಗುತ್ತೇದಾರ್, ಶಿವಲಿಂಗಪ್ಪ ಜಮಾದಾರ, ಶಿವರಾಜ ಸರಾಟೆ, ಸಿದ್ದರಾಮ ಅರಳಿಮಠ ಮಾತನಾಡಿ, ಕಳೆದ ಚುನಾವಣೆ ವೇಳೆ ಬಿ.ಆರ್.ಪಾಟೀಲ್ ಅವರನ್ನು ಗೆಲ್ಲಿಸಿ ಕಳಿಸಿದರೆ ಸಚಿವ ಸ್ಥಾನ ನೀಡುವುದಾಗಿ ಸಿದ್ದರಾಮಯ್ಯ ವಾಗ್ದಾನ ನೀಡಿದ್ದರು. ಆದರೆ ಮಂತ್ರಿ ಸ್ಥಾನ ನೀಡದೆ ವಂಚಿಸುತ್ತಾ ಬಂದಿದ್ದಾರೆ. ಪುತ್ರ ವ್ಯಾಮೋಹಕ್ಕಾಗಿ ಮಗನನ್ನು ಮಂತ್ರಿ ಮಾಡಿದರು. 40 ವರ್ಷದಿಂದ ಗುರುತಿಸಿಕೊಂಡು ಬಂದ ಸ್ನೇಹಿತನನು ಕಡೆಗಣಿಸಿದ್ದಾರೆ ಎಂದು ಕಿಡಿಕಾರಿದರು.
ಗ್ಯಾರಂಟಿ ಅನುಷ್ಠಾನ ಸಮಿತಿ ತಾಲೂಕು ಅಧ್ಯಕ್ಷ ಶಿವಪುತ್ರಪ್ಪ ಪಾಟೀಲ್, ಎಪಿಎಂಸಿ ಮಾಜಿ ಅಧ್ಯಕ್ಷ ಶರಣಬಸಪ್ಪ ಭೂಸನೂರ, ಪ್ರಮುಖರಾದ ಪ್ರತಾಪ ಕುಲಕರ್ಣಿ, ಗುರುಶಾಂತ ಪಾಟೀಲ್, ಅಸ್ಮಿತಾ ಚಿಟಗುಪ್ಪಕರ್, ರಾಜಶೇಖರ ಪಾಟೀಲ್, ಶಂಕರರಾವ ದೇಶಮುಖ, ರವಿ ಪಾಟೀಲ್, ರೇವಣಸಿದ್ದಪ್ಪ ನಾಗೂರೆ, ಸಿದ್ದರಾಮ ಪ್ಯಾಟಿ, ಮಹಾಂತಪ್ಪ ಸಾಲೇಗಾಂವ್, ರಾಜಶೇಖರ ಯಂಕಂಚಿ, ಅಮ್ಜದ್ ಅಲಿ ಕರಜಗಿ, ಸೋಮಶೇಖರ ಮೂಲಗೆ, ರಾಜಶೇಖರ ಪಾಟೀಲ್ ಇತರರಿದ್ದರು.
ಕಾಂಗ್ರೆಸ್ ಹೈಕಮಾಂಡ್ ಸಚಿವರನ್ನು ಆಯ್ಕೆ ಮಾಡುವಾಗ ಯಾವ ಮಾನದಂಡ ಅನುಸರಿಸಿದೆ ಎಂಬುದು ತಿಳಿಯುತ್ತಿಲ್ಲ. ಮಹಾಭಾರತ, ರಾಮಾಯಣದಲ್ಲೂ ಮೋಸದ ಆಟ ನಡೆದಿದೆ. ಅದೇ ರೀತಿ ಇಂದಿನ ರಾಜಕೀಯದಾಟದಲ್ಲಿ ಅನ್ಯಾಯ ಮಾಡಲಾಗಿದೆ. ನಾನು ಸಿದ್ಧಾಂತಕ್ಕಾಗಿ ರಾಜಕೀಯ ಮಾಡಿದವನು. ಮುಂದೆಯೂ ಹೀಗೆ ಸಾಗುವೆ.
— > ಬಿ.ಆರ್.ಪಾಟೀಲ್, ಶಾಸಕ