ಬೇಲೂರಿನ ಚನ್ನಕೇಶವಸ್ವಾಮಿ ದೇಗುಲದ ಬಲಿ ಕಲ್ಲಿನ ಮೇಲೆ ಆಣೆ ಮಾಡಿದ ನಂತರ ಧರ್ಮಸ್ಥಳಕ್ಕೆ ಕಾರ್ಯಕರ್ತರೊಂದಿಗೆ ಹೊರಟ ಶಾಸಕ ಎಚ್.ಕೆ.ಸುರೇಶ್.
- ವಿಧಾನ ಪರಿಷತ್ ಚುನಾವಣೆಯಲ್ಲಿ ಅಡ್ಡ ಮತದಾನ
- ಶಾಸಕ ಎಚ್.ಕೆ.ಸುರೇಶ್
ಬೇಲೂರು: ವಿಧಾನ ಪರಿಷತ್ ಚುನಾವಣೆಯಲ್ಲಿ ಅಡ್ಡ ಮತದಾನ ಮಾಡಿರುವ ಆರೋಪದ ಹಿನ್ನೆಲೆಯಲ್ಲಿ ಶಾಸಕ ಎಚ್.ಕೆ.ಸುರೇಶ್ ಮಂಗಳವಾರ ಚನ್ನಕೇಶವ ಸ್ವಾಮಿ ದೇಗುಲಕ್ಕೆ ತೆರಳಿ ಪೂಜೆ ಸಲ್ಲಿಸಿದ ಬಳಿಕ ದೇಗುಲದ ಬಲಿ ಕಲ್ಲಿನ ಮೇಲೆ ಎರಡೂ ಕೈ ಇಟ್ಟು ಅಡ್ಡ ಮತದಾನ ಮಾಡಿಲ್ಲ, ಪಕ್ಷಕ್ಕೆ ದ್ರೋಹ ಮಾಡಿಲ್ಲ ಎಂದು ಮೂರು ಬಾರಿ ಪ್ರಮಾಣ ಮಾಡಿದರು. ಬಳಿಕ ನೂರಾರು ಕಾರ್ಯಕರ್ತರೊಂದಿಗೆ ಧರ್ಮಸ್ಥಳಕ್ಕೆ ಪ್ರಯಾಣ ಬೆಳೆಸಿದರು.
ಬೆಳಗ್ಗೆಯೇ ನೂರಾರು ವಾಹನಗಳಲ್ಲಿ ಬಂದಿದ್ದ ಬಿಜೆಪಿ ಕಾರ್ಯಕರ್ತರು ಶಾಸಕ ಎಚ್.ಕೆ.ಸುರೇಶ್ ಜತೆ ಆಣೆ, ಪ್ರಮಾಣ ಮಾಡಲು ತೆರಳಿದರು.
ನನ್ನ ಮೇಲೆ ಆರೋಪ ಬಂದರೂ ಪಕ್ಷ ಯಾವುದೇ ನೋಟಿಸ್ ಕೊಟ್ಟಿಲ್ಲ. ನನ್ನ ಮೇಲೆ ಆರೋಪ ಹೊರಿಸುತ್ತಿರುವುದರಿಂದ ಯಾರು ತಪ್ಪು ಮಾಡಿದ್ದಾರೋ ಅವರ ವಿರುದ್ಧ ಕ್ರಮ ಕೈಗೊಳ್ಳಲು ನಾನೇ ಸ್ವತಃ ರಾಜ್ಯಾಧ್ಯಕ್ಷರು, ಪ್ರತಿಪಕ್ಷ ನಾಯಕರು, ರಾಷ್ಟ್ರೀಯ ಅಧ್ಯಕ್ಷರು ಹಾಗೂ ರಾಜ್ಯ ಉಸ್ತುವಾರಿ ಮತ್ತು ಸಂಘಟನಾ ಪ್ರಧಾನ ಕಾರ್ಯದರ್ಶಿಗಳಿಗೆ ಪತ್ರ ಬರೆದಿದ್ದೇನೆ. ಇದರಲ್ಲಿ ಯಾರಿದ್ದಾರೆ ಎಂಬುದು ದೇವರಿಗೆ ಗೊತ್ತು ಎಂದು ಶಾಸಕರು ತಿಳಿಸಿದರು.
ಬಿಜೆಪಿ ತಾಲೂಕು ಅಧ್ಯಕ್ಷ ಸಂಜಯ್, ಮುಖಂಡರಾದ ಸಿ.ಎಸ್.ಪ್ರಕಾಶ್, ಜಿ.ಕೆ.ಕುಮಾರ್, ಪರ್ವತಯ್ಯ, ಶ್ರೀನಿವಾಸ್, ಮಂಜುನಾಥ್ ಸೇರಿದಂತೆ ನೂರಾರು ಕಾರ್ಯಕರ್ತರಿದ್ದರು .
ಮಂಜುನಾಥನ ಸನ್ನಿಧಿಯಲ್ಲೂ ಪ್ರಮಾಣ: ಧರ್ಮಸ್ಥಳದಲ್ಲಿ ಅಣ್ಣಪ್ಪಸ್ವಾಮಿ ದರ್ಶನ ಪಡೆದು ನಂತರ ಮಂಜುನಾಥಸ್ವಾಮಿ ಎದುರು ಪ್ರಮಾಣ ಮಾಡಿದರು.
ಪಕ್ಷ ನನಗೆ ತಾಯಿ-ತಂದೆ ಇದ್ದ ಹಾಗೆ. ಪಕ್ಷಕ್ಕೆ ದ್ರೋಹ ಮಾಡಲ್ಲ. ನಾನು ಪಕ್ಷಕ್ಕೆ ವಿರುದ್ಧವಾಗಿ ನಡೆದುಕೊಂಡಿದ್ದರೆ ನನಗೆ ಶಿಕ್ಷೆ ಆಗಲಿ. ತಪ್ಪಿದಲ್ಲಿ ನನ್ನ ವಿರುದ್ಧ ಆರೋಪ ಮಾಡಿದವರಿಗೆ ಶಿಕ್ಷೆ ಆಗಲಿ. ಕೆಲವರು ನನ್ನ ಒಳ್ಳೆಯ ಕೆಲಸ ಸಹಿಸುತ್ತಿಲ್ಲ. ಹಾಗಾಗಿ ಆರೋಪ ಮಾಡಿದ್ದಾರೆ. ನಾನು ಕಳ್ಳ ಅಲ್ಲ, ಅಳುಕಿಲ್ಲ, ನನ್ನ ಆತ್ಮ ಸಾಕ್ಷಿ ಹಾಗೂ ಕ್ಷೇತ್ರದ ಮತದಾರರ ಸಮದಾನಕ್ಕೆ ಪ್ರಮಾಣ ಮಾಡುತ್ತಿರುವುದಾಗಿ ಹೇಳಿದರು.
ನಂತರ ಶ್ರೀ ವೀರೇಂದ್ರ ಹೆಗ್ಗಡೆ ಅವರನ್ನು ಭೇಟಿ ಮಾಡಿ ತಾವು ಬಂದಿರುವ ವಿಚಾರವನ್ನು ತಿಳಿಸಿ ಅವರೊಂದಿಗೆ ಚರ್ಚಿಸಿ ಆಶೀರ್ವಾದ ಪಡೆದು, ನಂತರ ಅಲ್ಲಿಯೇ ಕಾರ್ಯಕರ್ತರೊಂದಿಗೆ ಪ್ರಸಾದ ಸೇವಿಸಿದ ನಂತರ ಬೇಲೂರಿಗೆ ಹಿಂದಿರುಗಿದರು.
ನನ್ನ ಪೂರ್ವ ಜನ್ಮದ ಪುಣ್ಯದಿಂದ ನನಗೆ ಭಗವಂತನ ಬಲಭಾಗದಲ್ಲಿ ವಾಸ ಮಾಡುವ ಅವಕಾಶ ಸಿಕ್ಕಿದೆ. ಕ್ಷೇತ್ರದ ಸೇವೆ ಮಾಡಲು ದೇವರು ಅವಕಾಶ ಕೊಟ್ಟಿದ್ದಾನೆ. ಇದು ದೊಡ್ಡ ಷಡ್ಯಂತ್ರ. ಈ ಕ್ಷೇತ್ರಕ್ಕೆ ಪ್ರಧಾನಿ ಮೋದಿ ಅವರು ಬಂದು ಪ್ರಚಾರ ಮಾಡಿದ್ದರು. ಅವರಿಗೆ ಅನ್ಯಾಯ ಮಾಡಿದರೆ ಭಗವಂತ ನನ್ನನ್ನು ಕ್ಷಮಿಸಲ್ಲ. ವಿಪಕ್ಷ ನಾಯಕರು ಸೂಚಿಸಿದಂತೆ ನಾನು ಪ್ರಮಾಣಿಕವಾಗಿ ಮತ ಚಲಾಯಿಸಿದ್ದೇನೆ. ಯಾವುದೇ ಅಡ್ಡಮತದಾನ ಮಾಡಿಲ್ಲ. ಇದಕ್ಕೆ ಪರಮಾತ್ಮನೇ ಸಾಕ್ಷಿ.
ಎಚ್.ಕೆ.ಸುರೇಶ್ ಶಾಸಕ, ಬೇಲೂರು