ವಿಧಾನ ಪರಿಷತ್ತಿನ ಸಭಾಪತಿ ಸಲೀಂ ಅಹ್ಮದ್  
ರಾಜ್ಯ

ಚರ್ಚೆ ಇಲ್ಲದೆ ವಿಧೇಯಕ ಅಂಗೀಕಾರ ಇಷ್ಟ ಇರಲಿಲ್ಲ

ಬೆಂಗಳೂರು: ಸದನದಲ್ಲಿ ಚರ್ಚೆ ಇಲ್ಲದೆ 16 ವಿಧೇಯಕಗಳು ಅಂಗೀಕಾರ ಆಗಿರುವುದು ನನಗೂ ನೋವಿದೆ. ಪ್ರಮುಖ ಬಿಲ್‌ಗಳು ಬಂದಾಗ ಸರ್ಕಾರಕ್ಕೆ ಸಲಹೆ-ಸೂಚನೆ ನೀಡಲು ವಿಪಕ್ಷ ನಾಯಕರು ಸಹಕಾರ ನೀಡಲಿಲ್ಲ ಎಂದು ವಿಧಾನ ಪರಿಷತ್ತಿನ ಸಭಾಪತಿ ಸಲೀಂ ಅಹ್ಮದ್ ಬೇಸರ ವ್ಯಕ್ತಪಡಿಸಿದ್ದಾರೆ.
ವಿಧಾನಸೌಧದಲ್ಲಿ ಅಧಿವೇಶನ ಕುರಿತು ಸುದ್ದಿಗೋಷ್ಠಿ ನಡೆಸಿದ ಸಲೀಂ ಅಹ್ಮದ್, ಪರಿಷತ್ತಿನ ಸಭಾಪತಿಯಾಗಿ ಇದು ನನ್ನ ಮೊದಲ ಅಧಿವೇಶನ. ಸದನವನ್ನು ನಿಷ್ಪಕ್ಷಪಾತ ಮತ್ತು ಸಂವಿಧಾನಬದ್ಧವಾಗಿ ನಡೆಸಿದ ತೃಪ್ತಿ ಇದೆ. ಚಿಂತಕರ ಚಾವಡಿ ಎನಿಸಿದ ಮೇಲ್ಮನೆಯಲ್ಲಿ ಜನಹಿತಕ್ಕಾಗಿ ಅರ್ಥಪೂರ್ಣ ಚರ್ಚೆ ನಡೆಯಲು ಪ್ರತಿಪಕ್ಷಗಳ ಸದಸ್ಯರು ಸಹಕಾರ ನೀಡಲಿಲ್ಲ. ಸರ್ಕಾರ ವಿಧೇಯಕರನ್ನು ತಂದಾಗ ಪ್ರತಿಪಕ್ಷದ ನಾಯಕರ ಹೆಸರು ಕರೆದು ಚರ್ಚೆ ಮಾಡುತ್ತೀರಾ ಎಂದು ಕೇಳಿದ್ದೇನೆ. ಆದರೆ, ಆಸಕ್ತಿ ತೋರಲಿಲ್ಲ. ಆಡಳಿತ ಪಕ್ಷದ ಕೆಲ ಸದಸ್ಯರು ಚರ್ಚೆಯಲ್ಲಿ ಭಾಗವಹಿಸಿದರು. ನಿಯಮಾನುಸಾರ ಬಿಲ್‌ಗಳನ್ನು ಪಾಸ್ ಮಾಡಬೇಕಾಯಿತು ಎಂದರು.
ರಾಜ್ಯದ ಬರ ಪರಿಸ್ಥಿತಿ, ಕುಡಿಯುವ ನೀರು, ರೈತರ ಮತ್ತು ನೀರಾವರಿ ಸಮಸ್ಯೆ ಕುರಿತು ಚರ್ಚಿಸಲು ವಿಪಕ್ಷಗಳಿಗೆ ಮುಕ್ತ ಅವಕಾಶ ನೀಡಲಾಗಿತ್ತು. ಆದರೆ, ಸಚಿವ ನಾಗೇಂದ್ರ ರಾಜೀನಾಮೆ ಪ್ರಸ್ತಾಪಿಸಿ ಪ್ರತಿಭಟನೆ ನಡೆಸಿದರು. ನಿಯಮಾನುಸಾರ ನೋಟಿಸ್ ಸಲ್ಲಿಸಿ ಚರ್ಚಿಸಲು ಅವಕಾಶ ನೀಡುವುದಾಗಿ ಭರವಸೆ ನೀಡಿದೆ. ಆದರೂ ಬಿಎಸ್‌ಸಿ ಸಭೆ ನಿರ್ಧಾರ ಮೀರಿ ವಿಪಕ್ಷಗಳು ಕಲಾಪಕ್ಕೆ ಅಡ್ಡಿಪಡಿಸಿದರು. ಪ್ರತಿಭಟನೆ ಮಾಡುವುದು ಪ್ರತಿಪಕ್ಷದ ಹಕ್ಕಾಗಿದ್ದರೂ, ಕಲಾಪವೇ ನಡೆಯದಂತೆ ಮಾಡುವುದು ಸಂಸದೀಯ ವ್ಯವಸ್ಥೆಗೆ ಸೂಕ್ತವಲ್ಲ. ವಿಪಕ್ಷದವರನ್ನು ನಿಲ್ಲಿಸಿಕೊಂಡು ಕಾರ್ಯಕಲಾಪ ನಡೆಸುವುದು ಸಭಾಪತಿ ಪೀಠಕ್ಕೂ ಗೌರವವಲ್ಲ ಎಂದು ಸಲೀಂ ಅಹ್ಮದ್ ಅಭಿಪ್ರಾಯ ವ್ಯಕ್ತಪಡಿಸಿದರು.
"

ಅಲ್ಪಸಂಖ್ಯಾತ ಸಮುದಾಯದ ಸಭಾಪತಿ ಎಂದು ಸದನಕ್ಕೆ ಅಡ್ಡಿಪಡಿಸಿಲ್ಲ. ನನ್ನೊಂದಿಗೆ ವಿಪಕ್ಷದ ಶಾಸಕರು ಆತ್ಮೀಯ ಸ್ನೇಹ ಸಂಬಂಧ ಹೊಂದಿದ್ದಾರೆ.

— ಸಲೀಂ ಅಹ್ಮದ್, ವಿಧಾನ ಪರಿಷತ್ತಿನ ಸಭಾಪತಿ

694 ಪ್ರಶ್ನೆಗಳಿಗೆ ಉತ್ತರ

ವಿಧಾನಸಭೆಯಿಂದ ಅಂಗೀಕೃತ ರೂಪದಲ್ಲಿರುವ 16 ವಿಧೇಯಕಗಳಿಗೆ ವಿಧಾನಪರಿಷತ್ ಸಹಮತಿ ನೀಡಿದೆ. 1,210 ಪ್ರಶ್ನೆಗಳನ್ನು ಸ್ವೀಕರಿಸಿ 120 ಪ್ರಶ್ನೆಗಳನ್ನು ಚುಕ್ಕೆ ಗುರುತಿನ ಪ್ರಶ್ನೆಗಳನ್ನಾಗಿ ಹಾಗೂ 1,090 ಪ್ರಶ್ನೆಗಳನ್ನು ಚುಕ್ಕೆರಹಿತ ಪ್ರಶ್ನೆಗಳನ್ನಾಗಿ ಅಂಗೀಕರಿಸಿದೆ. ಈ ಪೈಕಿ 84 ಚುಕ್ಕೆ ಗುರುತಿನ ಪ್ರಶ್ನೆಗಳಿಗೆ ಉತ್ತರಿಸಲಾಗಿದೆ. ಲಿಖಿತ ಮೂಲಕ 610 ಪ್ರಶ್ನೆಗಳಿಗೆ ಉತ್ತರ ಮಂಡಿಸಲಾಗಿದೆ. ನಿಯಮ 72ರಲ್ಲಿ 105 ಸೂಚನೆಗಳನ್ನು ಸ್ವೀಕರಿಸಿದ್ದು, 7ಕ್ಕೆ ಉತ್ತರಿಸಲಾಗಿದೆ. ಶೂನ್ಯ ವೇಳೆ 34 ಸೂಚನೆಗಳ ಪೈಕಿ 4ಕ್ಕೆ ಉತ್ತರಿಸಿದ್ದು, 10 ಸೂಚನೆಗಳಿಗೆ ಉತ್ತರ ಸದನದಲ್ಲಿ ಮಂಡಿಸಲಾಗಿದೆ ಎಂದು ಸಭಾಪತಿ ಮಾಹಿತಿ ನೀಡಿದರು.