- ಎಲ್ಲರ ಹೃದಯಗಳನ್ನು ಮುಟ್ಟಿದ ಬೆಂಗಳೂರು ಆಟೋ ಚಾಲಕನೊಬ್ಬನ ನಡೆ
- ಮಧ್ಯರಾತ್ರಿ 12 ಗಂಟೆಗೆ ರ್ಯಾಪಿಡೋ ಆಟೋದಲ್ಲಿ ಪ್ರಯಾಣಿಸಿದ ಮಹಿಳೆ
- ಆಟೋದಲ್ಲಿದ್ದ ಬರಹ ನೋಡಿ ತಾನು ಸಂಪೂರ್ಣ ಸುರಕ್ಷಿತ ಎಂದ ಮಹಿಳೆ
ಬೆಂಗಳೂರು: ಮಧ್ಯರಾತ್ರಿಯಲ್ಲಿ ಬೆಂಗಳೂರಿನಂತಗ ದೊಡ್ಡ ನಗರಗಳಲ್ಲಿ ಪ್ರಯಾಣಿಸುವುದೆಂದರೆ ಅನೇಕ ಮಹಿಳೆಯರಿಗೆ ಸಹಜವಾಗಿ ಭಯ ಇರುತ್ತದೆ. ಆದರೆ, ಈ ಆಟೋ ಚಾಲಕನೊಬ್ಬನ ( Auto driver ) ನಡೆ ಎಲ್ಲರ ಹೃದಯಗಳನ್ನು ಮುಟ್ಟಿದ್ದು, ಸಾಮಾಜಿಕ ಜಾಲತಾಣದಲ್ಲಿ ಪ್ರಶಂಸೆಯ ಸುರಿಮಳೆಯಾಗುತ್ತಿದೆ.
ಮಧ್ಯರಾತ್ರಿ 12 ಗಂಟೆಗೆ ರ್ಯಾಪಿಡೋ ಆಟೋದಲ್ಲಿ ಪ್ರಯಾಣಿಸಿದ ಮಹಿಳೆಯೊಬ್ಬರು, ಚಾಲಕ ತೋರಿಸಿದ ಆತ್ಮೀಯತೆಯಿಂದ ತಾನು ಸಂಪೂರ್ಣ ಸುರಕ್ಷಿತ ಎಂಬ ಭಾವನೆಯಲ್ಲಿ ತುಂಬಾ ಖುಷಿಯಿಂದ ತಮ್ಮ ಇನ್ಸ್ಟಾಗ್ರಾಂನಲ್ಲಿ ವಿಡಿಯೋ ಹಂಚಿಕೊಂಡಿದ್ದು, ಈಗ ವೈರಲ್ ಆಗಿದೆ.
@littlebengalurustories ಹೆಸರಿನ ಇನ್‌ಸ್ಟಾಗ್ರಾಮ್ ಹ್ಯಾಂಡಲ್‌ನಲ್ಲಿ ಹಂಚಿಕೊಂಡಿರುವ ವಿಡಿಯೋದಲ್ಲಿ, ಆಟೋದಲ್ಲಿ ಕುಳಿತ ಮಹಿಳೆಯೊಬ್ಬರು ತಮ್ಮ ಸಂಪೂರ್ಣ ಅನುಭವವನ್ನು ಹೇಳಿಕೊಂಡಿದ್ದಾರೆ. ಈಗ ಮಧ್ಯರಾತ್ರಿ 12 ಗಂಟೆ. ನಾನು ರ್ಯಾಪಿಡೋ ಆಟೋದಲ್ಲಿ ಪ್ರಯಾಣಿಸುತ್ತಿದ್ದೇನೆ. ಇದನ್ನು ಓದಿದ ನಂತರ, ನಾನು ನಿಜವಾಗಿಯೂ ಸುರಕ್ಷಿತವಾಗಿರುತ್ತೇನೆಂಬ ವಿಶ್ವಾಸ ಬಂದಿದೆ ಎಂದು ಮಹಿಳೆ ಹೇಳಿದ್ದಾಳೆ. ಇದೇ ವೇಳೆ ತಮ್ಮ ಕ್ಯಾಮೆರಾವನ್ನು ಚಾಲಕನ ಕಡೆಗೆ ತಿರುಗಿಸಿ ಆಟೋದಲ್ಲಿ ಅಂಟಿಸಲಾದ ಕೈಬರಹದ ಫಲಕನ್ನು ತೋರಿಸಿದರು. ಅದರಲ್ಲಿ, "ನಾನು ಕೂಡ ತಂದೆ, ಸಹೋದರ.. ನಿಮ್ಮ ಸುರಕ್ಷತೆಯೇ ನನಗೆ ಮುಖ್ಯ.. ಆರಾಮವಾಗಿ ಕುಳಿತುಕೊಳ್ಳಿ ಎಂದು ಬರೆಯಲಾಗಿದೆ.
ಈ ವಿಡಿಯೋ ವೈರಲ್ ಆಗಿದ್ದು, ಈಗಾಗಲೇ ಲಕ್ಷಾಂತರ ವೀಕ್ಷಣೆಗಳನ್ನು ಪಡೆದುಕೊಂಡಿದೆ. ಬೆಂಗಳೂರಿನ ನೂರಾರು ನಿವಾಸಿಗಳು ವಿಡಿಯೋಗೆ ಪ್ರತಿಕ್ರಿಯಿಸುತ್ತಿದ್ದು, ಇವರೇ ನೋಡಿ ನಮ್ಮ ಬೆಂಗಳೂರಿನ ನಿಜವಾದ ಚೇತನ ಎಂದು ಹೊಗಳುತ್ತಿದ್ದಾರೆ. ನಾನು ಈ ನಗರವನ್ನು 20 ವರ್ಷಗಳಿಂದ ನೋಡುತ್ತಿದ್ದೇನೆ. ಇದು ಎಲ್ಲರಿಗೂ ಸುರಕ್ಷಿತ ನಗರ ಎಂದು ನೆಟ್ಟಿಗನೊಬ್ಬ ಕಾಮೆಂಟ್ ಮಾಡಿದ್ದಾನೆ. ಮತ್ತೊಬ್ಬ ನೆಟ್ಟಿಗ, ಮೇಡಂ ನೀವು ಯಾವಾಗಲೂ ಬೆಂಗಳೂರಿನಲ್ಲಿ ಸುರಕ್ಷಿತವಾಗಿರುತ್ತೀರಿ ಮತ್ತು ಸ್ಥಳೀಯರು ಯಾರಿಗೂ ತೊಂದರೆ ಕೊಡುವುದಿಲ್ಲ ಎಂದು ಭರವಸೆಯ ಕಾಮೆಂಟ್ ಮಾಡಿದ್ದಾರೆ.
ಇದು ಒಂದೇ ಘಟನೆ ಅಲ್ಲ, ಕಳೆದ ತಿಂಗಳು ಓರ್ವ ಮಹಿಳೆ ತನ್ನ ರ್ಯಾಪಿಡೋ ಸವಾರಿ ಅನುಭವವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು. ಮಧ್ಯರಾತ್ರಿಯಲ್ಲಿ 38 ಕಿ.ಮೀ ಪ್ರಯಾಣದ ಸಮಯದಲ್ಲಿ ಬೈಕ್ ಚೈನ್ ಮುರಿದುಹೋಯಿತು. ಈ ವೇಳೆ ಸವಾರ, ಚಿಂತಿಸಬೇಡಿ ನಾನಿದನ್ನು ಸರಿಪಡಿಸಿ ಮನೆಗೆ ಬಿಡುತ್ತೇನೆ ಎಂಬ ಮಾತುಗಳನ್ನು ಆಡಿದ್ದರು. ಈ ಮಾತು ನನಗೆ ಸಾಕಷ್ಟು ಧೈರ್ಯ ನೀಡಿತು ಎಂದು ಮಹಿಳೆ ಹೇಳಿಕೊಂಡಿದ್ದಳು.