I am a soldier 
ರಾಜ್ಯ

ದಳಮೆಂದೆನೆ ಸೈನ್ಯಮಕ್ಕು ಶಬ್ದಾಗಮದೊಳ್...

ಬಾಬುಪ್ರಸಾದ್​ ಮೋಡಿಸ್​
ಈಗೇಕೆ ಈ ಪ್ರಸ್ತಾವವೆಂದರೆ, ಕಳೆದ ಸಲ ಕೇಳಿದ್ದ Squad ಎಂಬ ಇಂಗ್ಲಿಷ್ ಪದಕ್ಕೆ ಸಮಾನಾರ್ಥಕವಾಗಿ ಅನೇಕರು ‘ದಳ’ವನ್ನು ಸೂಚಿಸಿದ್ದಾರೆ. ಇಂಗ್ಲಿಷ್​ನಲ್ಲಿ Squad ಪದದ ವ್ಯುತ್ಪತ್ತಿಯೇನು, ಎಲ್ಲಿಂದ ಬಂತು, ಈಗ ಹೇಗೆಲ್ಲ ಬಳಕೆಯಾಗುತ್ತದೆ ಎಂಬುದನ್ನು ಅವಲೋಕಿಸಿದರೆ ‘ದಳ’ ಸಂವಾದಿಯಾಗುತ್ತದೆಯೇ ಎಂದು ತೀರ್ವನಿಸಲಿಕ್ಕಾಗುತ್ತದೆ. ಸುಮಾರು 17ನೆಯ ಶತಮಾನದ ಕಾಲಘಟ್ಟದಲ್ಲಿ ಇಂಗ್ಲಿಷ್​ನ Squad ಎಂದರೆ "small number of military men detailed for some purpose' ಅಥವಾ ಸೈನ್ಯದ ಒಂದು ಚಿಕ್ಕ ತುಕಡಿ ಎಂಬ ಅರ್ಥ ಇದ್ದದ್ದಂತೆ. ಫ್ರೆಂಚ್​ನ esquade, ಸ್ಪಾನಿಷ್​ನ escuadra, ಅಥವಾ ಇಟಾಲಿಯನ್​ನ squadra ಪದಗಳಿಂದ ಆಮದಾಗಿ ಇಂಗ್ಲಿಷ್​ನಲ್ಲಿ ಆ ರೂಪವನ್ನು ಪಡೆದುಕೊಂಡಿದ್ದಂತೆ. ಮೂಲತಃ ಆ ಭಾಷೆಗಳಿಗೂ ಅದು ಲ್ಯಾಟಿನ್​ನ exquadra ಪದದಿಂದ ಬಂದದ್ದೆನ್ನುತ್ತಾರೆ. ಅಲ್ಲಿ ಅದರ ಅರ್ಥ exquadra ಎಂದು. ಚೌಕ ಮಾಡುವುದು ಎಂದರೇನು? ಆಧುನಿಕ ಸ್ವಯಂಚಾಲಿತ ಶಸ್ತ್ರಾಸ್ತ್ರಗಳು ವ್ಯಾಪಕವಾಗಿ ಬಳಕೆಗೆ ಬರುವುದಕ್ಕಿಂತ ಮೊದಲು, ಪದಾತಿ ಸೈನಿಕರು ಸಾಮಾನ್ಯವಾಗಿ ಚೌಕಾಕಾರದ ರಚನೆಯಲ್ಲಿ ಹೋರಾಡುತ್ತಿದ್ದರು. ಹಾಗೆ ನಿಲ್ಲುವುದರಿಂದ ಕುದುರೆಸವಾರರ ದಾಳಿ ಅಥವಾ ಹೆಚ್ಚು ಸಂಖ್ಯೆಯ ಶತ್ರುಪಡೆಗಳ ವಿರುದ್ಧ ಹೋರಾಡಲು ಅವರಿಗೆ ಸುಲಭವಾಗುತ್ತಿತ್ತು. ಈ ವ್ಯುತ್ಪತ್ತಿಯನ್ನು ಇನ್ನೂ ಸೂಕ್ಷ್ಮವಾಗಿ ಗಮನಿಸಿದರೆ ಲ್ಯಾಟಿನ್​ನ quadra (ಕ್ವಾಡ್ರಾ) ಪದದ ಅರ್ಥ ಚೌಕ ಎಂದಷ್ಟೇ ಅಲ್ಲ ನಾಲ್ಕು ಅಂತಲೂ ಗೊತ್ತಾಗುತ್ತದೆ. ಪೋ›ಟೊ-ಇಂಡೋ-ಯುರೋಪಿಯನ್ ಭಾಷೆಗಳ ಬೇರಿನಲ್ಲಿ kwetwer ಅಂದರೆ ನಾಲ್ಕು. ಸ್ಪಾನಿಷ್​ನ ಕ್ವಾತ್ರೊ, ಸಂಸ್ಕೃತದ ಚತ್ವಾರಿ ಅಥವಾ ಚತುಃ ಅದೇ ಬೇರಿನಿಂದ ಬಂದಂಥವು. ಚದುರಂಗ ಎಂದು ಸೈನ್ಯದ ನಾಲ್ಕು ಅಂಗಗಳು, ಚದುರಂಗ ಆಟದ ಚಚ್ಚೌಕ ಫಲಕ... ಯೋಚಿಸಿದರೆ ಎಲ್ಲದಕ್ಕೂ ನಂಟಿದೆ!
ಈ ಎಲ್ಲ ದೃಷ್ಟಿಕೋನಗಳಿಂದ Squad ಮೂಲತಃ ಸೈನ್ಯದ ತುಣುಕು ಎಂಬುದೇ ಆಗಿರುವುದರಿಂದ, ಮತ್ತು ದಳ ಶಬ್ದಕ್ಕೂ ಸೈನ್ಯ ಎಂಬ ಅರ್ಥವೂ ಇರುವುದರಿಂದ ಸರಿಯೇ ಆಗುತ್ತದೆ. ‘ದಳ’ ಎಂದು ಸೂಚಿಸಿದವರು: ಮಲ್ಲಿಕಾರ್ಜುನ ಕಾಗಿ, ಜಯಲಕ್ಷ್ಮಿ ಅಡಿಗ, ವೀರೇಶ ವಾಲಿ, ಅಂಜಲಿ ಬರ್ವೆ, ಸುಜನಾ ನಿಟ್ಟೂರ್, ಗಿರೀಶ ಕೆ.ಎಸ್., ಸತೀಶ ಕಬೇಕೋಡಿ, ಭಾಗ್ಯಶ್ರೀ ಕೆ.ಸಿ., ಡಾ. ಸಂಗಮೇಶ ಸುರಭಿ, ಚಿನ್ನಯ್ಯ ಹಿರೇಮಠ, ಎನ್.ವಿ. ಶಂಕರ್, ಪುಷ್ಪಲತಾ ಕೆ.ಎನ್., ಅಸೇನ ಸದಾಶಿವ ಶಿಂಧೆ, ಬೊ.ನಾ. ಕೃಷ್ಣಮೂರ್ತಿ, ಗಗನ, ಜ್ಯೋತಿಕಾ ಶಿವಮೊಗ್ಗ, ಎಸ್. ಕುಂಜಲ್, ಡಾ. ದಯಾನಂದ ಭಟ್ಟ, ಮಮತಾ ಕುಂದಾಪುರ, ವಿಶುಕುಮಾರ್ ಕೋಲಾರ ಮುಂತಾದವರು. ವಿಶೇಷಣ ಸೇರಿಸಿ ‘ಮಿಂಚುದಳ’ (ಕೃಷ್ಣ ಬರ್ವೆ), ‘ಜಾಗೃತದಳ’ (ಶಕುಂತಲಾ ಹೊನ್ನಾಳಿ, ದೇವೇಂದ್ರ ಕಡೂರು), ‘ಕಾರ್ಯದಳ’ (ಆರ್.ಎಸ್. ಶೆಟ್ಟಿ, ಪದ್ಮಾ ಬದರಿನಾಥ್, ಸಂತೋಷರಾವ್ ಕಡಬ), ‘ತನಿಖಾದಳ’ (ಎಂ.ಪಿ. ಶ್ರೀಧರ, ರಮೇಶ್ ಎನ್.), ‘ಗಸ್ತುದಳ’ (ವಿದ್ಯಾಶಂಕರ ಶರ್ಮ), ‘ಚತುರ್ದಿಶದಳ’ (ರಮ್ಯಶ್ರೀ ಬಿ.), ‘ಕಿರುದಳ’ (ಶಿವಶಂಕರ ಪ್ರಭು), ‘ವಿಚಕ್ಷಣದಳ’ (ಸತ್ಯ ಹರಿಹಳ್ಳಿ, ನಾಗೇಶ ಫಾಟಕ್), ‘ವಿಶೇಷದಳ’ (ಬಿ.ಎಸ್. ನಟರಾಜು, ಯು.ಎನ್. ಸಂಗನಾಳಮಠ, ಚಂಪಾವತಿ ಜೋಶಿ) ಮುಂತಾದವೂ ಬಂದಿವೆ.
ಕನ್ನಡದಲ್ಲಿ ‘ಪಡೆ’ ಸಹ ಸೈನ್ಯದ ಒಂದು ಚಿಕ್ಕ ಭಾಗ ಎಂಬರ್ಥದಲ್ಲಿ ಬಳಕೆಯಾಗುವ ಪದ. ಇದು ಕೂಡ Squadಗೆ ಸರಿಯಾಗುತ್ತದೆ. ಸೂಚಿಸಿದವರು: ಎನ್. ಸುಬ್ರಾಯ ಭಟ್, ಶಶಿಕಲಾ ನರೇಂದ್ರನಾಥ್, ಭಾಗ್ಯಶ್ರೀ ಕೆಕ್ಕಾರ, ರಂಗನಾಥ ಟಿ.ಕೆ., ವಿಜಯಕಲ ಬೆಂಗಳೂರು, ರೇವತಿ ಜೋಶಿ, ಜಿ.ಎಚ್. ಸಂಕಪ್ಪ ಮುಂತಾದವರು. ವಿಶೇಷಣ ಸೇರಿಸಿ ‘ಪ್ರವೀಣಪಡೆ’ (ಗೀತಾ ಪಾಟೀಲ), ‘ಕಾರ್ಯಪಡೆ’ (ಎಚ್.ಎಸ್. ಸಜ್ಜನ್, ಡಾ. ನಾ. ಸೋಮೇಶ್ವರ, ರಾಮಚಂದ್ರ ಐ.ಎಂ., ರಘು ಬಿ.), ‘ಶಿಸ್ತುಪಡೆ’ (ಆರ್.ವಿ. ಮೂರ್ತಿ), ‘ಗಸ್ತುಪಡೆ’ (ಶ್ರೀಹರಿ ಪೆಲ್ತಾಜೆ), ‘ಮಿಂಚುಪಡೆ’ (ಡಾ. ಗೌರಿ ಎಸ್.ವಿ.), ‘ತನಿಖಾಪಡೆ’ (ಸುನೀತಾ ನಿರಂಜನ) ಎಂದವರೂ ಇದ್ದಾರೆ. ಸೈನ್ಯದಲ್ಲಾಗಲಿ ಅಥವಾ ಈಗಿನ ಬಳಕೆಯಂತೆ ಸೈನ್ಯೇತರ ಸಂದರ್ಭಗಳಲ್ಲಾಗಲಿ Squadನಲ್ಲಿ ಹೆಚ್ಚು ಜನರಿರುವುದಿಲ್ಲ. ಇಂತಿಷ್ಟೇ ಜನರಿರಬೇಕೆಂತಲೂ ಇಲ್ಲ. ಉದ್ದೇಶವನ್ನವಲಂಬಿಸಿ ಸದಸ್ಯಸಂಖ್ಯೆ ನಿರ್ಧಾರವಾಗಬಹುದು. ಇಲ್ಲೊಂದು ಸ್ವಾರಸ್ಯಕರ ಹೋಲಿಕೆಯೂ ಇದೆ. ಕನ್ನಡದಲ್ಲಿ ನಾಲ್ಕು ಜನ, ನಾಲ್ಕು ದಿನ, ನಾಲ್ಕು ಕಾಸು ಮುಂತಾಗಿ ನಿರ್ದಿಷ್ಟವಾಗಿ ನಾಲ್ಕು ಎಂದಲ್ಲದೆ ಬೆರಳೆಣಿಕೆಯ ಒಂದಿಷ್ಟು ಎಂಬರ್ಥದಲ್ಲಿ ಬಳಸುವುದಿದೆಯಷ್ಟೆ? ಪಾ.ವೆಂ. ಆಚಾರ್ಯರೂ ‘ಪದಾರ್ಥ ಚಿಂತಾಮಣಿ’ಯಲ್ಲಿ ಈ ನಾಲ್ಕರ ಮಹಿಮೆಯನ್ನು ಪ್ರಸ್ತಾವಿಸಿದ್ದಾರೆ. ಅದರಂತೆ Squad ಸಹ ನಾಲ್ಕು ಜನರ ತಂಡ ಎನ್ನಬಹುದು. ಲ್ಯಾಟಿನ್ ಮೂಲದ quadra ಪದಕ್ಕೂ ನಾಲ್ಕು ಎಂಬರ್ಥ ಇರುವುದನ್ನು ಗಮನಿಸಿದರೆ ಪ್ರಪಂಚದ ಬೇರೆಬೇರೆ ಭಾಷೆಗಳು ಪರಸ್ಪರ ಭಾವತಂತಿಗಳನ್ನು ಹೇಗೆ ಮೀಟುತ್ತವೆಂದು ಆಶ್ಚರ್ಯವಾಗುತ್ತದೆ!
ಕಳೆದ ಸಲ ಕೇಳಿದ್ದ ಖಛಿಞಟ್ಝಚಠಿಛಿ ಪದದ ಮೂಲವನ್ನು ಅರಸುತ್ತ ಹೋದರೂ ಸ್ವಾರಸ್ಯಕರ ಅಂಶಗಳು ಗೋಚರಿಸುತ್ತವೆ. ಹಳೆಯ ಇಂಗ್ಲಿಷ್​ನಲ್ಲಿ Template ಎಂಬ ರೂಪವೂ ಇತ್ತು. ಕಟ್ಟಡ ನಿರ್ವಣದಲ್ಲಿ ಆಧಾರಕ್ಕೆಂದು ಅಡ್ಡವಾಗಿ ಇರಿಸುವ ಜಂತಿ ಅಥವಾ ತೊಲೆಗಳನ್ನು, ಆಡಿಪಾಯದಲ್ಲಿ ಕೂರಿಸುವ ಚೌಕಟ್ಟುಗಳನ್ನು ಕೂಡ templet ಎನ್ನಲಾಗುತ್ತಿತ್ತು. ದೇವಸ್ಥಾನ ಅಥವಾ ಗರ್ಭಗುಡಿ ಎಂಬರ್ಥದ temple(ಮೂಲ ಲ್ಯಾಟಿನ್ templum) ಸಹ ಇದಕ್ಕೆ ಸಂಬಂಧವುಳ್ಳದ್ದೇ. ಕ್ರಮೇಣ ವಿಶಾಲಾರ್ಥದಲ್ಲಿ pattern or gauge indicating the proper shape in a finished work ಎಂದಾಯಿತು. ಅಂಥದೊಂದು ಆಕಾರಕ್ಕೆ plate ಮೂಲಾಧಾರ ಆಗುವುದರಿಂದ template ಎಂದೇ ಜನಪ್ರಿಯವಾಯಿತು. ಈ ದೃಷ್ಟಿಯಿಂದ ‘ಅಚ್ಚುತಟ್ಟೆ’ (ವಸಂತ ಕುಮಾರ್ ಕಲ್ಯಾಣಿ) ಹೊಚ್ಚಹೊಸ, ಆಕರ್ಷಕ, ಅರ್ಥಪೂರ್ಣ ಸಂವಾದಿಪದ ಎನಿಸುತ್ತದೆ. ‘ಒತ್ತಚ್ಚು’ (ಪಿ.ಜೆ.ರಾಘವೇಂದ್ರ ಮೈಸೂರು) ಸಹ ಹೊಸತನದಿಂದ ಕೂಡಿದೆ. ಈಗಾಗಲೇ ಬಳಕೆಯಲ್ಲಿರುವ ‘ಪಡಿಯಚ್ಚು’ ಪದಕ್ಕೆ ಕಸಾಪ ನಿಘಂಟುವಿನಲ್ಲಿ ಕಟ್ಟಿಗೆಯಲ್ಲಿ ಅಥವಾ ಲೋಹದಲ್ಲಿ ಬೇಕಾದ ಆಕಾರವನ್ನು ಕೊರೆದು, ಅದರಲ್ಲಿ ಎರಕವನ್ನು ಅಥವಾ ಕರಗಿಸಿದ ದ್ರವವನ್ನು ಹೊಯ್ದು ಆ ಆಕಾರದ ಬಿಂಬವನ್ನು ಮಾಡಿಕೊಳ್ಳುವ ಸಾಧನ ಎಂಬ ಅರ್ಥವನ್ನು ಗಮನಿಸಿದರೆ ಇದೂ ಸೂಕ್ತವಾಗಬಲ್ಲದು. ಸೂಚಿಸಿದವರು: ನಂದಾ ಪ್ರೇಮಕುಮಾರ್, ರಚಿತಾ ಅಶ್ವತ್ಥಪುರ, ಸಂಜೀವ ಜೋಶಿ, ಕಂಪಲಾಪುರ ಶ್ರೀನಿವಾಸ್, ಸಾವಿತ್ರಿ ಬೇಡಕಿಹಾಳ, ಷಡಕ್ಷರಮುನಿ ಸ್ವಾಮೀಜಿ, ನಳಿನಿ ಭಟ್ ಸೇರಾಜೆ, ಎಂ.ಕೆ. ರಮೇಶ್, ತ್ರಿವೇಣಿ ಬೆಂಗಳೂರು, ನಾರಾಯಣ ಟಿ. ಹೆಗಡೆ, ವಿರೂಪಾಕ್ಷಪ್ಪ ಶಾಂತಗೇರಿ, ಅನಿಲಕುಮಾರ್ ಎಂ.ಕೆ., ಮಹಾಂತೇಶ ಗೋಲಪ್ಪನವರ, ಕಾರಣಂ ವೆಂಕಟೇಶ್ವರ, ಕಾಡೇಶ ವಿ.ಬಿ, ಸುಜಾತ ಕುರ್ಪಾಡ್, ಯಮನಪ್ಪ ಕೊಟ್ನಿಕಲ್ ಮುಂತಾದವರು. ‘ಮೂಲಾಕೃತಿ’ (ಮಿಥುನ್ ಗುಡ್ಡೆತೋಟ) ಅರ್ಥಪೂರ್ಣವಾಗಿದೆ. ‘ಬಗೆತೋರುಕ’ ಎಂಬ ಅಚ್ಚಕನ್ನಡ ಪದವನ್ನು ಜಿ.ನಾರಾಯಣ ರಾವ್, ಗೋಪಿನಾಥ ಭರಮಸಾಗರ, ಭಾರತಿ ಪ್ರಕಾಶ್, ವಿಜಯಲಕ್ಷ್ಮಿ ಎಸ್. ಮತ್ತು ಉಮೇಶ ಪ್ರಭು ಸೂಚಿಸಿದ್ದಾರೆ. ‘ರೂಪರೇಖೆ’ (ಅನ್ನಪೂರ್ಣ ಹೇಮಚಂದ್ರ, ಅಂಜನಾ ತುಮಕೂರು, ಮಧುಕರ ಸೊಪ್ಪಿನ) ಅಥವಾ ‘ಪ್ರರೂಪ’ (ನಿತ್ಯಾನಂದ ಬ್ರಹ್ಮಾವರ, ಕುಶಲ್ ಭಾರದ್ವಾಜ್) ಸಹ ಯೋಗ್ಯವೇ. ಅದಕ್ಕಿಂತಲೂ ‘ರೂಪಿಕೆ’ (ಪೂರ್ಣಿಮಾ ಭಟ್ ಹಾಸನ) ಚಿಕ್ಕ-ಚೊಕ್ಕ ಚಿತ್ತಾಕರ್ಷಕ.
ಕೊನೆಯದಾಗಿ Nodal ಪದಕ್ಕೆ ಸಮನ್ವಯ ಈಗಾಗಲೇ ಬಳಕೆಯಲ್ಲಿದೆ ಎಂದು ಸಿ.ಆರ್. ಮೋಹನಕುಮಾರ್, ಮಂಜುನಾಥ ಡಿ.ಎಸ್., ವೇದಾ ವಿ.ಪುರೋಹಿತ, ಬಿ.ಆರ್. ಚಂದ್ರಮೌಳಿ, ಸುಬ್ರಹ್ಮಣ್ಯ ಎಸ್., ಪ್ರಭುಪ್ರಸಾದ್ ನಡುತೋಟ, ಜಗದೀಶಚಂದ್ರ ಬಿ.ಎಸ್., ಶೋಭಾ ತಿಪಟೂರು ಮುಂತಾದವರು ತಿಳಿಸಿದ್ದಾರೆ. ಇಂಗ್ಲಿಷ್​ನಲ್ಲಿ Nodal ಎನ್ನುವುದು a knot or lump ಎಂಬರ್ಥದ Node ಪದದ ವಿಶೇಷಣರೂಪ. ಇದರ ಲ್ಯಾಟಿನ್ ಮೂಲ Nodus ಸಹ ಒಟ್ಟುಸೇರಿಸು, ಜತೆಗೂಡಿಸು, ಗಂಟುಹಾಕು ಎಂಬರ್ಥದ್ದೇ. ಸಂಸ್ಕೃತದಲ್ಲಿ ಸಮನ್ವಯ ಪದಕ್ಕೆ- ಸೇರಿಕೊಂಡಿರುವುದು, ಒಂದಕ್ಕೊಂದು ಬೆಸೆಯುವುದು ಎಂಬ ಅರ್ಥವೂ ಇದೆ. Nodal Officer ಎನ್ನುವಾಗಲೂ ಆ ಅಧಿಕಾರಿಯ ಕರ್ತವ್ಯವು ಮೇಲ್ವಿಚಾರಣೆ, ವರದಿ, ಸಮಸ್ಯೆ, ಪರಿಹಾರ ಇವೆಲ್ಲವನ್ನೂ ಒಟ್ಟುಗೂಡಿಸುವುದು ಮತ್ತು ಬೇರೆಬೇರೆ ವಿಭಾಗಗಳ ನಡುವೆ ಕೊಂಡಿಯಂತೆ ಕಾರ್ಯ ನಿರ್ವಹಿಸುವ ಸಂಪರ್ಕಬಿಂದು ಆಗಿರುವುದೇ ಆದ್ದರಿಂದ ಸಮನ್ವಯ ಚೆನ್ನಾಗಿ ಹೊಂದುತ್ತದೆ. ‘ಸಂಪರ್ಕಬಿಂದು’ (ಉಮಾ ಪ್ರಭು, ಶ್ರೀಕಾಂತ್ ಗೋಡಖಿಂಡಿ ದಾಂಡೇಲಿ, ವಿಜಯಕುಮಾರ್ ಬಗಡೇಕರ್, ವಿ.ವಿಜಯೇಂದ್ರ ರಾವ್, ಎನ್.ಆರ್. ರಮೇಶ್, ಆನಂದರಾಮ ಮಡಿ) ಸಹ ಸಂದಭೋಚಿತ ಬಳಕೆಗೆ ಸರಿಯಾಗುತ್ತದೆ. ನಾ.ಕಸ್ತೂರಿಯವರ ಪ್ರಸಿದ್ಧ ಅನರ್ಥಕೋಶದಂತೆ ಆಲೋಚಿಸಿ ಧಾರವಾಡದ ಅನಿಲ್ ಕುಸುಗಲ್ ತಮಾಷೆಗಾಗಿ ಬರೆದಿರುವುದರಲ್ಲೂ ಸತ್ಯಾಂಶ ಇದೆ: ಯಾವುದಾದರೂ ಒಂದು ಕೆಲಸದ ಮೇಲ್ವಿಚಾರಣೆಗಾಗಿ ನೇಮಿಸಿದ ಅಧಿಕಾರಿಯನ್ನು ನೋಡಲ್ ಆಫೀಸರ್ ಎನ್ನುತ್ತಾರೆ. ಆದರೆ ಕೆಲವೊಂದು ಬಾರಿ ಆ ಅಧಿಕಾರಿ ಏನನ್ನೂ ವೀಕ್ಷಿಸದೆ ತನ್ನ ಪಾಡಿಗೆ ತಾನು ಸುಮ್ಮನೆ ಇದ್ದರೆ ಅವನು ನಿಜವಾಗಿಯೂ ಏನೂ ‘ನೋಡಲ್ಲ’ ಎಂಬ ಅಧಿಕಾರಿ.
ಈ ವಾರದ ಮೂರು ಪದಗಳು
1.Cylinder: ಸಹಜವೋ ಕೃತಕವೋ ಅಂತೂ ಅಭಾವದಿಂದಾಗಿ ಸಾಕಷ್ಟು ಸುದ್ದಿಯಲ್ಲಿದೆ. ಇಷ್ಟುಕಾಲ ಕನ್ನಡ ಪದದ ಅಭಾವವೂ ಕಾಡಿದೆ!
2.Deja vu: ಈಗಾಗಲೇ ನೋಡಿದ್ದೀನೋ ಅನುಭವಿಸಿದ್ದೀನೋ ಎಂಬ ಭಾವನೆ. ಫ್ರೆಂಚ್ ಮೂಲದ್ದೇ ಇಂಗ್ಲಿಷಲ್ಲೂ ಬಳಕೆ. ಕನ್ನಡದಲ್ಲಿ ಏನನ್ನೋಣ?
3.Ping: ಅಂತರ್ಜಾಲದ ಮೂಲಕ ಸಂವಹನದಲ್ಲಿ ಸಾಮಾನ್ಯವಾಗಿ ಬಳಕೆ. ಪಿಂಗಾಣಿ ಅಲ್ಲ, ಪುಂಗಿಯೂ ಅಲ್ಲ. ಇಂಗಿತ ತಿಳಿಸುವ ಕನ್ನಡಪದ ಬೇಕು.
ಓದುಗರು ಪ್ರತಿಯೊಂದು ಆಂಗ್ಲ ಪದಕ್ಕೆ ತಲಾ ಒಂದರಂತೆ ಕನ್ನಡ ಪದ ತಿಳಿಸಬೇಕು. ತಮ್ಮ ಹೆಸರು ಮತ್ತು ಊರಿನ ಹೆಸರನ್ನೂ ಕನ್ನಡದಲ್ಲಿ ಬರೆಯಬೇಕು. ಪದಗಳನ್ನು ಕಳುಹಿಸಲಿಕ್ಕೆ ಗಡುವು: ಮುಂದಿನ ಶನಿವಾರ ಸಂಜೆ 6 ಗಂಟೆಯೊಳಗೆ. ವಾಟ್ಸ್​ಆಪ್ ಸಂಖ್ಯೆ: +12404010945
(ಲೇಖಕರು ಅಮೆರಿಕದಲ್ಲಿ ಸಾಫ್ಟ್​ವೇರ್ ಇಂಜಿನಿಯರ್
ಮತ್ತು ಅಂಕಣ ಬರಹಗಾರರು)