husband murder wife 
ರಾಜ್ಯ

ಪತ್ನಿ ಹೆತ್ಯೆಗೈದು ಬೆಡ್‌ಶೀಟ್‌ನಲ್ಲಿ ಮೃತದೇಹ ಸುತ್ತಿಟ್ಟು ಪತಿ ಪರಾರಿ

ಪ್ರಮುಖ ಮುಖ್ಯಾಂಶಗಳು

  • ಎಂಟು ತಿಂಗಳ ಹಿಂದೆ ಇಬ್ಬರ ವಿವಾಹ
  • ಬಿಹಾರಕ್ಕೆ ತೆರಳಿದ ಪೊಲೀಸರ ತಂಡ
ಬೆಂಗಳೂರು: ಕೌಟುಂಬಿಕ ವಿಚಾರಕ್ಕೆ ಪತ್ನಿಯನ್ನು ಪತಿಯೇ ಹತ್ಯೆಗೈದು ಮೃತದೇಹವನ್ನು ಬೆಡ್‌ಶೀಟ್‌ನಲ್ಲಿ ಸುತ್ತಿಟ್ಟು ಪರಾರಿಯಾಗಿರುವುದು ಕುಂಬಳಗುಡು ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಬಿಹಾರ ಮೂಲದ ರೀಯಾಕುಮಾರಿ (21) ಹತ್ಯೆಯಾದ ಮಹಿಳೆ. ಕೃತ್ಯ ಎಸಗಿದ ಈಕೆಯ ಪತಿ ಧೀರಜ್ ಕುಮಾರ್ ನಾಪತ್ತೆಯಾಗಿದ್ದಾನೆ. ಆರೋಪಿ ಪತ್ತೆಗೆ ಪೊಲೀಸರು ಶೋಧ ಕಾರ್ಯ ನಡೆಸಿದ್ದಾರೆ. ನಾಲ್ಕೈದು ದಿನಗಳ ಹಿಂದೆ ಗೇರುಪಾಳ್ಯದಲ್ಲಿ ಘಟನೆ ನಡೆದಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಧೀರಜ್ ಕುಮಾರ್ ಮತ್ತು ರೀಯಾಕುಮಾರಿ 8 ತಿಂಗಳ ಹಿಂದಷ್ಟೇ ಮದುವೆಯಾಗಿದ್ದರು. 2025ರ ಡಿಸೆಂಬರ್‌ನಲ್ಲಿ ಬೆಂಗಳೂರಿಗೆ ಬಂದು ಗೇರುಪಾಳ್ಯದ ಬಾಡಿಗೆ ಮನೆಯಲ್ಲಿ ವಾಸವಾಗಿದ್ದ ದಂಪತಿ. ಧೀರಜ್ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ. ರೀಯಾಕುಮಾರಿ ಕೂಡ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡಿಕೊಂಡಿದ್ದಳು. ಇತ್ತೀಚಿಗೆ ಇಬ್ಬರ ನಡುವೆ ಸಣ್ಣ ವಿಚಾರಕ್ಕೆ ಗಲಾಟೆ ನಡೆದಿತ್ತು. ಸ್ನೇಹಿತರು ಸಂಧಾನ ಮಾಡಿ ದಂಪತಿಗೆ ಬುದ್ಧಿವಾದ ಹೇಳಿದ್ದರು ಎಂಬುದು ಪೊಲೀಸರ ಪ್ರಾಥಮಿಕ ತನಿಖೆಯಿಂದ ತಿಳಿದಿದೆ.
ಕೆಲ ದಿನಗಳ ಹಿಂದೆ ಯಾವ ವಿಚಾರಕ್ಕೆ ಜಗಳ ನಡೆದಿದೆ ಎಂಬುದು ತಿಳಿದು ಬಂದಿಲ್ಲ. ಗಲಾಟೆ ವಿಕೋಪಕ್ಕೆ ತಿರುಗಿ ಕೋಪಗೊಂಡ ಆರೋಪಿ, ಪತ್ನಿಯನ್ನು ಉಸಿರುಗಟ್ಟಿಸಿ ಹತ್ಯೆಗೈದು, ಪ್ಲಾಸ್ಟಿಕ್ ಚೀಲದಲ್ಲಿ ಮೃತದೇಹ ಇರಿಸಿದ್ದಾನೆ. ನಂತರ ಅದಕ್ಕೆ ಬೆಡ್‌ಶೀಟ್‌ನಿಂದ ಸುತ್ತಿ ಪರಾರಿಯಾಗಿದ್ದ.
ಮರು ದಿನ ಬೆಳಗ್ಗೆ ರೀಯಾ ಸ್ನೇಹಿತೆ ಹಲವು ಬಾರಿ ಕರೆ ಮಾಡಿದರೂ ಸ್ವೀಕರಿಸಿಲ್ಲ. ಅನುಮಾನಗೊಂಡ ಆಕೆ ಮನೆ ಬಳಿ ಹೋದಾಗ ಕಿಟಕಿ ಬಳಿ ದುವಾರ್ಸನೆ ಬಂದಿದೆ. ಕೂಡಲೇ ಮನೆ ಮಾಲೀಕರಿಗೆ ಮಾಹಿತಿ ನೀಡಿದ್ದಾಳೆ. ಬಾಗಿಲು ತೆರೆದು ನೋಡಿದಾಗ ಬೆಡ್‌ಶಿಟ್‌ನಲ್ಲಿ ರೀಯಾ ಕುಮಾರಿ ಮೃತದೇಹ ಪತ್ತೆಯಾಗಿದೆ. ವಿಷಯ ತಿಳಿದು ಪೊಲೀಸರು ಸ್ಥಳಕ್ಕೆ ಆಗಮಿಸಿ ಮೃತದೇಹವನ್ನು ಆರ್.ಆರ್.ನಗರ ಆಸ್ಪತ್ರೆಗೆ ರವಾನಿಸಿದ್ದಾರೆ. ಆರೋಪಿ ಪತ್ತೆಗೆ ಒಂದು ತಂಡ ಬಿಹಾರಕ್ಕೆ ತೆರಳಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದರು. ಈ ಸಂಬಂಧ ಕುಂಬಳಗುಡು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಘಟನಾ ಸ್ಥಳಕ್ಕೆ ನೈರುತ್ಯ ವಿಭಾಗದ ಡಿಸಿಪಿ ಅನಿತಾ ಬಿ.ಹದಣ್ಣನವರ್, ಕೆಂಗೇರಿ ಎಸಿಪಿ ಸತ್ಯವತಿ ಹಾಗೂ ಠಾಣಾಧಿಕಾರಿ ಕುಮಾರ್ ಭೇಟಿ ನೀಡಿ ಪರಿಶೀಲಿಸಿದ್ದಾರೆ.