ಆನೇಕಲ್ ತಾಲೂಕಿನ ಹುಲಿಮಂಗಲ ರಸ್ತೆಯ ಕೆರೆ ಏರಿ ಮೇಲೆ ಬೆಳೆದು ನಿಂತಿದ್ದ ನೂರಾರು ವರ್ಷಗಳ ಮರಕ್ಕೆ ಬಿದ್ದ ಬೆಂಕಿ ನಂದಿಸುವ ಕಾರ್ಯದಲ್ಲಿ ತೊಡಗಿರುವ ಜಿಗಣಿ ಪುರಸಭೆ ಸಿಬ್ಬಂದಿ.
ಆನೇಕಲ್ : ತಾಲೂಕಿನ ಜಿಗಣಿ ಪುರಸಭೆ ವ್ಯಾಪ್ತಿಯ ಜಿಗಣಿ ಹಾಗೂ ಹುಲಿಮಂಗಲ ರಸ್ತೆಯ ಕೆರೆ ಏರಿ ಮೇಲೆ ಬೆಳೆದು ನಿಂತಿದ್ದ ನೂರಾರು ವರ್ಷಗಳ ಹಳೆಯದಾದ ಮರವೊಂದಕ್ಕೆ ಕಿಡಿಗೇಡಿಗಳು ಬೆಂಕಿ ಹಚ್ಚಿದ್ದಾರೆ.
ಎರಡು ದಿನಗಳಹಿಂದೆ ಕಿಡಿಗೇಡಿಗಳು ಮರದ ಬುಡದಲ್ಲಿ ಕಸ ತಂದು ಸುರಿದು ಬೆಂಕಿ ಹಚ್ಚಿದ್ದು ಮರದ ಬುಡದ ಅರ್ಧದಷ್ಟು ಭಾಗ ಸುಟ್ಟು ಹೋಗಿದೆ. ಪ್ರತಿದಿನ ಇದೇ ರಸ್ತೆಯಲ್ಲಿ ಜಿಗಣಿ ಪುರಸಭೆ ಅಧಿಕಾರಿಗಳು, ಸಿಬ್ಬಂದಿ ಹಾಗೂ ಸಾರ್ವಜನಿಕರು ಸಂಚರಿಸುತ್ತಾರೆ. ಆದರೆ, ಮರದ ಬುಡದಲ್ಲಿ ಬೆಂಕಿಹೊತ್ತಿ ಉರಿಯುತ್ತಿದ್ದರೂ ಯಾರೊಬ್ಬರೂ ನಂದಿಸುವ ಗೋಜಿಗೆ ಹೋಗದೆ ರ್ನಿಲಕ್ಷ$್ಯ ತೋರಿದ್ದಾರೆ.
ಈ ಸಂಬಂಧ ಸಾರ್ವಜನಿಕರು ವಿಜಯವಾಣಿ ಪತ್ರಿಕೆಗೆ ಕರೆ ಮಾಡಿ ವಿಷಯ ತಿಳಿಸಿದ್ದು, ತಕ್ಷಣ ವರದಿಗೆಂದು ಸ್ಥಳಕ್ಕೆ ತೆರಳಿ, ಅಧಿಕಾರಿಗಳಿಗೆ ವಿಷಯ ಮುಟ್ಟಿಸಲಾಯಿತು. ಜಿಗಣಿ ಪುರಸಭೆ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಉರಿಯುತ್ತಿದ್ದ ಬೆಂಕಿಗೆ ನೀರು ಹಾಯಿಸಿ ನಂದಿಸಿದರು.
ಪುರಸಭೆ ವ್ಯಾಪ್ತಿಯ ಜಿಗಣಿ ಕೆರೆ ಏರಿ ಮೇಲೆ ಕಳೆದ ಐದಾರು ತಿಂಗಳುಗಳಿಂದ ನಿರಂತರವಾಗಿ ಕಸದ ವಾಹನಗಳು ರಾಶಿ ರಾಶಿ ಕಸವನ್ನು ತಂದು ಸುರಿಯುತ್ತಿವೆ. ಕೆರೆ ಏರಿ ಈಗಾಗಲೇ ಸಂಪೂರ್ಣವಾಗಿ ಮಲಿನಗೊಂಡಿದೆ.ಇದನ್ನೇ ಬಂಡವಾಳ ಮಾಡಿಕೊಂಡ ಕಿಡಿಗೇಡಿಗಳು ನೂರಾರು ವರ್ಷಗಳಿಂದ ಬೆಳೆದು ನಿಂತಿದ್ದ ಮರದ ಬುಡದಲ್ಲಿ ಕಸದ ರಾಶಿ ಹಾಕಿ ಯಾರಿಗೂ ಗೊತ್ತಾಗದಂತೆ ಬೆಂಕಿ ಹಚ್ಚಿದ್ದಾರೆ. ಮರದ ಬುಡದಲ್ಲಿ ಕಸದ ರಾಶಿಗೆ ಬೆಂಕಿ ಹೊತ್ತಿಕೊಂಡು ಎರಡು ದಿನ ಉರಿದಿದ್ದು ಮರದ ಬುಡ ಅರ್ಧದಷ್ಟು ಸುಟ್ಟು ಹೋಗಿದೆ.
ಕಿಡಿಗೇಡಿಗಳು ನೂರಾರು ವರ್ಷ ಇತಿಹಾಸ ಇರುವ ಮರದ ಬುಡಕ್ಕೆ ಬೆಂಕಿ ಹಚ್ಚಿದ್ದಾರೆ. ನಮಗೆ ವಿಜಯವಾಣಿ ಪ್ರತಿನಿಧಿ ಕರೆ ಮಾಡಿ ವಿಷಯ ತಿಳಿಸಿದರು. ಪುರಸಭೆಯಿಂದ ಬೆಂಕಿ ನಂದಿಸಿದ್ದೇವೆ.
ಬೆಂಕಿ ಹಚ್ಚಿರುವ ಮಾಹಿತಿ ನಮಗೆ ಗೊತ್ತಾಗುತ್ತಿದ್ದಂತೆ ಸ್ಥಳಕ್ಕೆ ಸಿಬ್ಬಂದಿಗಳನ್ನು ಕಳುಹಿಸಿ ನೀರು ಹಾಕಿ ಆರಿಸಲಾಗಿದೆ. ಮರಕ್ಕೆ ಬೆಂಕಿ ಹಚ್ಚಿರುವುದು ಅಕ್ಷಮ್ಯಅಪರಾಧ. ಇನ್ನು ಮುಂದಿನ ದಿನಗಳಲ್ಲಿ ಎಚ್ಚರ ವಹಿಸಲಾಗುವುದು.