ಚರ್ಮದಾನ ಮಾಡುವಂತೆ ಸಾರ್ವಜನಿರಿಗೆ ಅರಿವು
ಬೆಂಗಳೂರು: ವಿಕ್ಟೋರಿಯಾ ಆಸ್ಪತ್ರೆ ಸಹಯೋಗದಲ್ಲಿ ರೋಟರಿ ಬೆಂಗಳೂರು ಮಿಡ್‌ಟೌನ್, ಟಸ್ಕರ್ ಹಾರ್ಲೆ ಓನರ್ಸ್ ಗ್ರೂಪ್, ಜಂಟಿಯಾಗಿ ವಿಕ್ಟೋರಿಯಾ ಆಸ್ಪತ್ರೆಯಿಂದ ವಿಧಾನಸೌಧ ಮುಂಭಾಗದವರೆಗೆ ಆಯೋಜಿಸಿದ್ದ ‘ಬೈಕ್ ರ್ಯಾಲಿಯಲ್ಲಿ ಬಿತ್ತಿಪತ್ರ ಹಿಡಿದು ಸುಟ್ಟಗಾಯಗಳಿಗೆ ತುತ್ತಾದ ರೋಗಿಗಳ ಚಿಕಿತ್ಸೆಗೆ ಚರ್ಮದಾನ ಮಾಡುವಂತೆ ಸಾರ್ವಜನಿರಿಗೆ ಅರಿವು ಮೂಡಿಸಲಾಯಿತು.
ಮರಣಾನಂತರ ಚರ್ಮ ದಾನ ಮಾಡುವುದರಿಂದ ತೀವ್ರವಾಗಿ ಸುಟ್ಟಗಾಯಗಳಿಗೆ ಒಳಗಾದವರ ಜೀವವನ್ನು ಉಳಿಸಬಹುದು. ದಾನ ಮಾಡಿದ ಚರ್ಮವು ರೋಗಿಯ ದೇಹದ ಗಾಯಗಳಿಗೆ ನೈಸರ್ಗಿಕ ಬ್ಯಾಂಡೇಜ್‌ನಂತೆ ಕೆಲಸ ಮಾಡುವ ಮೂಲಕ ಸೋಂಕು ತಡೆಗಟ್ಟಲು ಮತ್ತು ಜೀವ ಉಳಿಸುವ ಸಂಭವನೀಯತೆಯನ್ನು ಶೇ.50 ರಷ್ಟು ಹೆಚ್ಚಿಸಲು ಸಹಾಯ ಮಾಡುತ್ತದೆ. ವ್ಯಕ್ತಿಯ ಮರಣಾನಂತರ 6 ಗಂಟೆಗಳ ಒಳಗಾಗಿ ಚರ್ಮ ದಾನ ಮಾಡಬಹುದು. ಚರ್ಮದಾನ ಮಾಡುವುದಕ್ಕೆ ನೂರಾರು ಜನರು ಹೆಸರು ನೋಂದಾಯಿಸಿಕೊಂಡಿದ್ದೇವೆ ಎಂದು ಟಸ್ಕರ್ ಹಾರ್ಲೆ ಓನರ್ಸ್ ಗ್ರೂಪ್ನ ಮಿಥನ್ ಅಶೋಕ್ ಹೇಳಿದ್ದಾರೆ.
ವರ್ಷದಿಂದ ವರ್ಷಕ್ಕೆ ಸರ್ಕಾರಿ ಆಸ್ಪತ್ರೆಗಳಲ್ಲಿ ಚರ್ಮ ಕೊರತೆ ಕಾಡುತ್ತಿದೆ. ಸುಟ್ಟಗಾಯಗಳಿಗೆ ತುತ್ತಾಗಿರುವ ರೋಗಿಗಳಿಗೆ ರಕ್ತದಂತೆ ಚರ್ಮವೂ ಅಗತ್ಯವಿದೆ. ಅಗತ್ಯ ಇರುವಷ್ಟು ಚರ್ಮ ಸಿಕ್ಕರೆ ಪರಿಣಾಮಕಾರಿಯಾಗಿ ಚಿಕಿತ್ಸೆ ನೀಡುವ ಮೂಲಕ ರೋಗಿಗಳ ಪ್ರಾಣವನ್ನು ಬಳಸಬಹುದು. ಐಟಿ-ಬಿಟಿ ಕಂಪನಿಗಳಲ್ಲಿ ಕೆಲಸ ಮಾಡುತ್ತಿರುವ ನಾವೆಲ್ಲರೂ ಒಟ್ಟುಗೂಡಿ ವಿವಿಧ ಸಂಸ್ಥೆಗಳ ಸಹಯೋಗದಲ್ಲಿ ಚರ್ಮದಾನ ಬಗ್ಗೆ ಅರಿವು ಮೂಡಿಸುವ ಕೆಲಸ ಮಾಡಿದ್ದೇವೆ ಎಂದರು.
ವಿಕ್ಟೋರಿಯಾ ಆಸ್ಪತ್ರೆಯ ಪ್ಲಾಸ್ಟಿಕ್ ಸರ್ಜರಿ ವಿಭಾಗದ ಪ್ರಾಧ್ಯಾಪಕಿ ಡಾ.ಸ್ಮಿತಾ ಸೇಗು, ಡಾ.ಜಾರ್ ಮತ್ತಿತರರಿದ್ದರು.