ಹುಣಸಗಿಯಿಂದ ಕಕ್ಕೇರಾ ಪಟ್ಟಣಕ್ಕೆ ಹೋಗುವ ರಸ್ತೆಯಲ್ಲಿ ಬಿದ್ದಿರುವ ದೊಡ್ಡ ಗುಂಡಿಗಳು. 
ರಾಜ್ಯ

ಹುಣಸಗಿ-ಕಕ್ಕೇರಾ ಸಂಚಾರ ಬಲು ಹೈರಾಣ

ಹುಣಸಗಿ: ಪಟ್ಟಣದಿಂದ ಕಕ್ಕೇರಾಕ್ಕೆ ಸಂಪರ್ಕ ಕಲ್ಪಿಸುವ ಪ್ರಮುಖ ರಸ್ತೆ ಸಂಪೂರ್ಣ ಹದಗೆಟ್ಟಿದ್ದು, ರಸ್ತೆಯುದ್ದಕ್ಕೂ ದೊಡ್ಡ ದೊಡ್ಡ ಗುಂಡಿ ಬಿದ್ದ ಪರಿಣಾಮ ವಾಹನ ಸವಾರರು ಹಾಗೂ ಸಾರ್ವಜನಿಕರು ನಿತ್ಯ ಸಂಚಾರಕ್ಕೆ ಬಲು ಕಷ್ಟ ಅನುಭವಿಸುವಂತಾಗಿದೆ.
ಸುತ್ತಲಿನ ಗ್ರಾಮಸ್ಥರು ಪಟ್ಟಣಕ್ಕೆ ಬರಲು ಹಾಗೂ ವಿವಿಧ ಕೆಲಸ ಕಾರ್ಯಕ್ಕಾಗಿ ಸಂಚರಿಸಲು ಪ್ರಮುಖ ಸಂಪರ್ಕ ಮಾರ್ಗ ಇದಾಗಿದ್ದು, ನಿತ್ಯ ದ್ವಿಚಕ್ರ ವಾಹನಗಳು, ಕಾರು, ಆಟೋ ಬಸ್ ಮತ್ತು ಲಾರಿ ಸೇರಿ ನೂರಾರು ವಾಹಗಳು ಈ ರಸ್ತೆ ಮಾರ್ಗವೇ ಸಂಚರಿಸುತ್ತವೆ. ಆದರೆ ದಾರಿಯುದ್ದಕ್ಕೂ ದೊಡ್ಡ ದೊಡ್ಡ ಗುಂಡಿಗಳು ಬಿದ್ದ ಕಾರಣ ಸವಾರರು ತೀವ್ರ ತೊಂದರೆ ಅನುಭವಿಸಬೇಕಾಗಿದೆ.
ರಾಯಚೂರು, ಲಿಂಗಸಗೂರು, ಬೆಂಗಳೂರು, ದೇವದುರ್ಗ ಮತ್ತು ತಿಂಥಣಿ ಮೌನೇಶ್ವರ ಸೇರಿ ಅಂತರ್ ಜಿಲ್ಲೆ-ತಾಲೂಕು ಹಾಗೂ ಪ್ರೇಕ್ಷಣಿಯ ಸ್ಥಳಗಳಿಗೆ ತೆರಳಲು ಈ ರಸ್ತೆ ಕೊಂಡಿಯಾಗಿದೆ. ಆದರೆ ಸಮರ್ಪಕ ನಿರ್ವಹಣೆ ಕೊರತೆಯಿಂದ ಸಂಪೂರ್ಣ ಹದಗೆಟ್ಟಿದ್ದು, ಸಂಚಾರಕ್ಕೆ ಬಾರದಂತಾಗಿದೆ. ಮಳೆ ಬಂದರೆ ಗುಂಡಿ ತುಂಬ ಮಳೆ ನೀರು ತುಂಬಿ ವಾಹನ ಸವಾರರು ಬಿದ್ದ ಉದಾಹರಣೆಗಳಿವೆ. ರಾತ್ರಿ ವೇಳೆಯಂತೂ ಈ ಗುಂಡಿಗಳು ಮತ್ತಷ್ಟು ಅಪಾಯ ತಂದೊಡ್ಡಿವೆ. ವಾಹನ ಸವಾರರು ಜೀವ ಕೈಯಲ್ಲಿ ಹಿಡಿದು ಸಂಚರಿಸಬೇಕಾದ ಅನಿವಾರ್ಯ ನಿರ್ಮಾಣವಾಗಿದೆ. ಇಂತಹ ಹದಗೆಟ್ಟ ರಸ್ತೆಯಿಂದ ವಾಹಗಳು ಕೂಡ ಹಾನಿಯಾಗುತ್ತಿವೆ ಎಂದು ಕಾರ್ ಚಾಲಕ ಶಿವಕುಮಾರ ಬಿರಾದಾರ ಆರೋಪಿಸಿದ್ದಾರೆ.
ವಿಶೇಷವಾಗಿ ಶಾಲಾ-ಕಾಲೇಜು ವಿದ್ಯಾರ್ಥಿಗಳು, ಮಹಿಳೆಯರು ಮತ್ತು ವೃದ್ಧರು ತೀವ್ರ ಸಂಕಷ್ಟ ಅನುಭವಿಸುವಂತಾಗಿದ್ದು, ಈ ರಸ್ತೆ ಮಾರ್ಗದ ಸಂಚಾರವೇ ಬೇಡವೇ ಬೇಡ ಎಂದು ನಿತ್ಯ ಹಿಡಿಶಾಪ ಹಾಕುತ್ತಿದ್ದಾರೆ. ಇಷ್ಟೇಲ್ಲ ಇದ್ದರೂ ಸಂಬಂದಿಸಿದ ಇಲಾಖೆ ಮತ್ತು ಜನಪ್ರತಿನಿಧಿಗಳು ನಮಗೆ ಸಂಬಂಧವಿಲ್ಲದಂತೆ ವರ್ತಿಸುತ್ತಿದ್ದಾರೆ.
ಈಗಲಾದರೂ ಜನಪ್ರತಿನಿಗಳು ಸರ್ಕಾರದ ಮೇಲೆ ಒತ್ತಡ ಹಾಕಿ ಕೂಡಲೇ ರಸ್ತೆ ದುರಸ್ತಿಗೆ ಕ್ರಮ ಕೈಗೊಳ್ಳಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ. ಹಾಗೊಂದು ವೇಳೆ ವಿಳಂಬ ಮಾಡಿದ್ದಲ್ಲಿ ಉಗ್ರ ಹೋರಾಟ ಮಾಡುವುದಾಗಿ ಎಚ್ಚರಿಕೆ ನೀಡಿದ್ದಾರೆ.
"

ಇಂದಿನ ರಸ್ತೆಯ ಸ್ಥಿತಿ ಬಲು ಅಪಾಯಕಾರಿಯಾಗಿದ್ದು, ಸಾರ್ವಜನಿಕರ ಸುರಕ್ಷತೆ ಗಮನದಲ್ಲಿಟ್ಟುಕೊಂಡು ಸಂಬಂಧಪಟ್ಟ ಇಲಾಖೆ ತಕ್ಷಣ ಕ್ರಮ ಕೈಗೊಳ್ಳಬೆಕು.| ಚನ್ನಕುಮಾರ ದಿಂಡವಾರಸಮಾಜ ಸೇವಕ ಹುಣಸಗಿ

"

ರಸ್ತೆ ಸಂಪೂರ್ಣ ಗದಗೆಟ್ಟಿರುವುದರಿಂದ ನಿತ್ಯ ವಿದ್ಯಾಭ್ಯಾಸಕ್ಕಾಗಿ ಹುಣಸಗಿ ಪಟ್ಟಣಕ್ಕೆ ಬರಲು ತೀವ್ರ ಅನಾನೂಕುಲವಾಗಿದೆ. ರಸ್ತೆ ಬೇಗ ದುರಸ್ತಿ ಮಾಡಿ ಎಲ್ಲರಿಗೂ ಅನುಕೂಲ ಮಾಡಿಕೊಡಬೇಕು.| ಪವನ್ ಕುಲಕರ್ಣಿವಿದ್ಯಾರ್ಥಿ