ಮಾಸ್ತಿ ಗ್ರಾಮದಲ್ಲಿ Kuvempu ಆಯೋಜಿಸಿದ್ದ ಕುವೆಂಪು ಜಯಂತಿಯಲ್ಲಿ ಕಸಾಪ ತಾಲೂಕು ಅಧ್ಯಕ್ಷ ಎಂ.ವಿ.ಹನುಮಂತಯ್ಯ ಇದ್ದರು.
- ಕಸಾಪ ತಾಲೂಕು ಅಧ್ಯಕ್ಷ ಎಂ.ವಿ.ಹನುಮಂತಯ್ಯ ಹೇಳಿಕೆ
ಮಾಸ್ತಿ: ಕನ್ನಡ ಸಾಹಿತ್ಯ ಚರಿತ್ರೆಯ ಶಿಖರಪ್ರಾಯ ವ್ಯಕ್ತಿತ್ವ, ಯುಗದ ಕವಿ, ಜಗದ Kuvempu ಗುರು ರಾಷ್ಟ್ರಕವಿ ಕುವೆಂಪು ಅವರ ಜನ್ಮದಿನವು ಕೇವಲ ಒಂದು ದಿನಾಂಕವಲ್ಲ, ಅದು ಪ್ರತಿಯೊಬ್ಬ ಮನುಷ್ಯನ ಅಂತರಂಗವನ್ನು ಬಡಿದೆಬ್ಬಿಸುವ ವೈಚಾರಿಕ ಜಾಗೃತಿಯ ದಿನ ಎಂದು ಕಸಾಪ ತಾಲೂಕು ಅಧ್ಯಕ್ಷ ಎಂ.ವಿ.ಹನುಮಂತಯ್ಯ ಹೇಳಿದರು.
ಗ್ರಾಮದಲ್ಲಿ ಕಸಾಪ, ವಿದ್ಯಾಪನಾ ಸಮೂಹ ಸಂಸ್ಥೆಗಳ ಸಹಯೋಗದಲ್ಲಿ ಆಯೋಜಿಸಿದ್ದ ಕುವೆಂಪು ಅವರ ಜಯಂತಿಯಲ್ಲಿ ಮಾತನಾಡಿ, ಕುವೆಂಪು ಅವರು ಮನುಷ್ಯರಲ್ಲಿ ಮಾನವತ್ವ ಮುಖ್ಯ. ಅದನ್ನು ಇಂದಿನ ವಿದ್ಯಾರ್ಥಿಗಳು ಮೈಗೂಡಿಸಿಕೊಳ್ಳಲು ಕುವೆಂಪು ಅವರ ಸಾಹಿತ್ಯವನ್ನು ಓದಬೇಕು ಎಂದರು.
ಕಸಾಪ ಮಾಜಿ ಜಿಲ್ಲಾ ಗೌರವ ಕಾರ್ಯದರ್ಶಿ ಎ.ಅಶ್ವತ್ಥರೆಡ್ಡಿ ಮಾತನಾಡಿ, ಮನುಜಮತ ಮತ್ತು ಸಮನ್ವಯದ ಹಾದಿ ಇಂದಿನ ಧ್ರುವಿಕೃತ ಜಗತ್ತಿನಲ್ಲಿ, ಧರ್ಮ ಮತ್ತು ವಿಜ್ಞಾನದ ನಡುವೆ ಸಂಘರ್ಷ ನಡೆಯುತ್ತಿರುವಾಗ ಕುವೆಂಪು ಅವರ "ಪೂರ್ಣದೃಷ್ಟಿ' ನಮಗೆ ದಾರಿದೀಪವಾಗಿದೆ. ಎಲ್ಲರಲ್ಲೂ ವೈಚಾರಿಕ ಪ್ರಜ್ಞೆ ಬೆಳೆಯಬೇಕು. ಮೂಢನಂಬಿಕೆ, ಜಾತಿ, ಧರ್ಮ, ಅಂಧತ್ವ ದೂರವಿಡಲು ಕುವೆಂಪು ಸಾಹಿತ್ಯ ನೆರವಾಗುತ್ತದೆ ಎಂದರು.
ನಾಡಗೀತೆಗೆ 100ವರ್ಷಗಳ ಸಂಭ್ರಮ ಕುರಿತು ಸಾಹಿತಿ ಡಾ.ನಾ.ಮುನಿರಾಜು ಮಾತನಾಡಿದರು. ಕುವೆಂಪು ಅವರ ಬಗ್ಗೆ ಪ್ರಬಂಧ ಸ್ಪರ್ಧೆಯಲ್ಲಿ ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ನೀಡಲಾಯಿತು.
ವ್ಯವಸ್ಥಾಪಕ ಮಂಜುನಾಥ್, ಪ್ರಾಂಶುಪಾಲ ಡಿ.ಎಂ.ನಾರಾಯಣಪ್ಪ, ಲಾವಣ್ಯಾ ಬಾಯಿ, ಉಪನ್ಯಾಸಕ ಆಂಜನೇಯಲು, ಕಸಾಪ ಮಾಸ್ತಿ ಹೊಬಳಿ ಘಟಕದ ಅಧ್ಯಕ್ಷ ಬೆಡಿಶೆಟ್ಟಹಳ್ಳಿ ರಮೇಶ್, ಕವಿ ನಾಗರಾಜ್, ರೋಣೂರು ವೆಂಕಟೇಶ್ ಇದ್ದರು.