ಕಲಬುರಗಿ ಹೊರವಲಯದ ಸಿಯುಕೆನಲ್ಲಿ ಬುಧವಾರ ಆಯೋಜಿಸಿದ್ದ ರಾಷ್ಟ್ರೀಯ ವಿಚಾರ ಸಂಕಿರಣ ಸಮಾರೋಪದಲ್ಲಿ ವಿದ್ಯಾರ್ಥಿ, ಅಧ್ಯಾಪಕರೊಂದಿಗೆ ಹೈಕೋರ್ಟ್ ನ್ಯಾಯಾಧೀಶ ಕೆ.ವಿ.ಅರವಿಂದ, ಕುಲಪತಿ ಪ್ರೊ.ಬಟ್ಟು ಸತ್ಯನಾರಾಯಣ, ಪ್ರೊ.ಬಸವರಾಜ ಕುಬಕಡ್ಡಿ, ಮಹಾದೇವಯ್ಯ ಕರದಳ್ಳಿ ಇತರರಿದ್ದಾರೆ.
- ಹೈಕೋರ್ಟ್ ನ್ಯಾಯಾಧೀಶ ಕೆ.ವಿ.ಅರವಿಂದ ಹೇಳಿಕೆ
- ಸಿಯುಕೆನಲ್ಲಿ ರಾಷ್ಟ್ರೀಯ ವಿಚಾರ ಸಂಕಿರಣ ಸಮಾರೋಪ
ಕಲಬುರಗಿ: ವೈವಾಹಿಕ ಕಾನೂನು ಕೇವಲ ಕಾನೂನಿನ ವಿಭಾಗ, ಉಪ-ವಿಭಾಗ ಹಾಗೂ ನಿಬಂಧನೆಗಳಿಗೆ ಸೀಮಿತವಾಗಿಲ್ಲ. ಅದು ಮನುಷ್ಯನ ಬದುಕು, ದಾಂಪತ್ಯದ ಒಡನಾಟ, ವಾತ್ಸಲ್ಯ, ಘನತೆಯ ರಕ್ಷಣೆ, ಮಕ್ಕಳ ಹಿತ, ಭಾವನಾತ್ಮಕ ನೋವು ಹಾಗೂ ಆರ್ಥಿಕ ಅವಲಂಬನೆಯಂತಹ ಮಾನವೀಯ ಆಯಾಮ ಒಳಗೊಂಡಿದೆ ಹೈಕೋರ್ಟ್ ನ್ಯಾಯಾಧೀಶ ಕೆ.ವಿ.ಅರವಿಂದ ಹೇಳಿದರು.
ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದಲ್ಲಿ ಕಾನೂನು ವಿಭಾಗ, ಮರತೂರಿನ ವಿಜ್ಞಾನೇಶ್ವರ ಪ್ರತಿಷ್ಠಾನ ಟ್ರಸ್ಟ್ ಸಹಯೋಗದೊಂದಿಗೆ ಸಹಜೀವನ ವಿಕಸನ: ವಿವಾಹದಲ್ಲಿ ಪಾವಿತ್ರ, ಕಾನೂನುಬದ್ಧತೆ ಮತ್ತು ಸಾಮಾಜಿಕ ಆಯಾಮ ಕುರಿತು ಬುಧವಾರ ಆಯೋಜಿಸಿದ್ದ ರಾಷ್ಟ್ರೀಯ ವಿಚಾರ ಸಂಕಿರಣದ ಸಮಾರೋಪದಲ್ಲಿ ಮಾತನಾಡಿ, ಹಿಂದೂ ವಿವಾಹವು ಸಾಂಪ್ರದಾಯಿಕವಾಗಿ ಸಂಸ್ಕಾರವೆಂದು ಪರಿಗಣಿಸಲ್ಪಟ್ಟಿದ್ದು, ಅದು ಕೇವಲ ಕಾನೂನು ಬಾಂಧವ್ಯವಲ್ಲದೆ, ವ್ಯಕ್ತಿ ಮತ್ತು ಕುಟುಂಬಗಳ ನಡುವಿನ ಸಾಮಾಜಿಕ, ಸಾಂಸ್ಕೃತಿಕ ಹಾಗೂ ನೈತಿಕ ಬದ್ಧತೆಯ ಪ್ರತಿಕ ಎಂದು ತಿಳಿಸಿದರು.
ಕುಲಪತಿ ಪ್ರೊ.ಬಟ್ಟು ಸತ್ಯನಾರಾಯಣ ಅಧ್ಯಕ್ಷತೆ ವಹಿಸಿ ಮಾತನಾಡಿ, ವೈವಾಹಿಕ ಪ್ರಕರಣಗಳು ಇತರ ಹಲವು ಬಗೆಯ ಮೊಕದ್ದಮೆಗಳಿಗಿಂತ ಭಿನ್ನವಾಗಿವೆ. ಆಳವಾದ ವೈಯಕ್ತಿಕ ಸಂಬಂಧ, ಭಾವನೆ ಹಾಗೂ ಕುಟುಂಬದ ಭವಿಷ್ಯ ಒಳಗೊಂಡಿರುತ್ತದೆ. ಪಾಲಕರು ಬೇರ್ಪಡುವಿಕೆಯಲ್ಲಿ ಯಾವುದೇ ತಪ್ಪಿಲ್ಲದಿದ್ದರೂ ಮಕ್ಕಳು ಅದರ ಪರಿಣಾಮ ಎದುರಿಸಬೇಕಾಗುತ್ತದೆ. ವೈವಾಹಿಕ ವಿವಾದಗಳಿಗೆ ಸಂಬಂಧಿಸಿದ ನಿರ್ಧಾರಗಳಲ್ಲಿ ಮಕ್ಕಳ ಕಲ್ಯಾಣ, ಘನತೆ ಮತ್ತು ಭಾವನಾತ್ಮಕ ಯೋಗೇಮಕ್ಕೆ ಆದ್ಯತೆ ನೀಡಬೇಕು ಎಂದರು.
ಕಾನೂನು ಅಧ್ಯಯನ ನಿಕಾಯದ ಡೀನ್ ಪ್ರೊ.ಬಸವರಾಜ ಕುಬಕಡ್ಡಿ, ಕಾನೂನು ವಿಭಾಗದ ಮುಖ್ಯಸ್ಥ ಡಾ.ಅನಂತ ಚಿಂಚೂರೆ, ವಿಜ್ಞಾನೇಶ್ವರ ಪ್ರತಿಷ್ಠಾನ ಟ್ರಸ್ಟ್ನ ಟ್ರಸ್ಟಿ ಮಹಾದೇವಯ್ಯ ಕರದಳ್ಳಿ, ಸಂಚಾಲಕಿ ಡಾ.ರೇಣುಕಾ ಗುಬ್ಬೇವಾಡ್ ಇತರರಿದ್ದರು.
ಮಾನಸಿಕ ಸಲಹೆಗಾರರ ವೃತ್ತಿಪರ ನೆರವಿನೊಂದಿಗೆ ಕುಟುಂಬದ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಹಾಗೂ ಸಂಬಂಧ ಮರು ಸ್ಥಾಪಿಸಲು ಬೆಂಗಳೂರಿನ ಮಧ್ಯಸ್ಥಿಕೆ ಕೇಂದ್ರ ಸಹಾಯವಾಗುತ್ತಿದೆ. ವೈವಾಹಿಕ ವಿಷಯಗಳಲ್ಲಿ ವಕೀಲರು ಮಹತ್ವದ ಜವಾಬ್ದಾರಿ ಹೊಂದಿದ್ದು, ಕೇವಲ ತೀರ್ಪು ಪಡೆಯುವುದಕ್ಕೆ ಸೀಮಿತವಾಗಬಾರದು. ಸಮನ್ವಯ, ಸಂಬಂಧಗಳ ಮರುಸ್ಥಾಪನೆ ಮತ್ತು ಕುಟುಂಬಗಳ ಯೋಗೇಮಕ್ಕೆ ಆದ್ಯತೆ ನೀಡಿ ಕಾರ್ಯನಿರ್ವಹಿಸಬೇಕು.
— > ಕೆ.ವಿ.ಅರವಿಂದ, ನ್ಯಾಯಾಧೀಶ, ಕರ್ನಾಟಕ ಹೈಕೋರ್ಟ್