Huliyaru is certain to become the taluk headquarters.
ಹುಳಿಯಾರು: ಸಾರ್ವಜನಿಕರ ಸಮಸ್ಯೆಗಳಿಗೆ ಸ್ಥಳದಲ್ಲೇ ಪರಿಹಾರ ಒದಗಿಸುವ ನಿಟ್ಟಿನಲ್ಲಿ ಶಾಸಕ ಸಿ.ಬಿ.ಸುರೇಶ್ ಬಾಬು ಅವರ ನೇತೃತ್ವದಲ್ಲಿ ಹಮ್ಮಿಕೊಂಡಿರುವ ಮನೆ ಬಾಗಿಲಿಗೆ ಮನೆ ಮಗ ವಿನೂತನ ಜನಸ್ಪಂದನಾ ಕಾರ್ಯಕ್ರಮವು ಶುಕ್ರವಾರ ಹುಳಿಯಾರು ಪಪಂ ವ್ಯಾಪ್ತಿಯಲ್ಲಿ ಯಶಸ್ವಿಯಾಗಿ ನೆರವೇರಿತು.
ಪಟ್ಟಣದ 5, 6 ಮತ್ತು 7ನೇ ವಾರ್ಡ್ಗಳಿಗೆ ಭೇಟಿ ನೀಡಿದ ಶಾಸಕರು, ಅಧಿಕಾರಿಗಳ ಸಮ್ಮುಖದಲ್ಲಿ ನೂರಾರು ಅಹವಾಲು ಸ್ವೀಕರಿಸಿ ಮಾತನಾಡಿದ ಶಾಸಕರು, ಹುಳಿಯಾರು ಪಟ್ಟಣವು ಭೌಗೋಳಿಕವಾಗಿ ಹಾಗೂ ಆಡಳಿತಾತ್ಮಕವಾಗಿ ತಾಲೂಕು ಕೇಂದ್ರವಾಗಲು ಸರ್ವ ಅರ್ಹತೆಗಳನ್ನು ಹೊಂದಿದೆ. ಈ ಬಗ್ಗೆ ಈಗಾಗಲೇ ಸದನದಲ್ಲಿ ಸರ್ಕಾರಕ್ಕೆ ಒತ್ತಾಯ ಮಾಡಲಾಗಿದೆ. ಭವಿಷ್ಯದಲ್ಲಿ ಹುಳಿಯಾರು ತಾಲೂಕು ಕೇಂದ್ರವಾಗುವುದು ನಿಶ್ಚಿತ ಎಂದರು.
ವಿಜಯನಗರ ಬಡಾವಣೆ ಸೇರಿದಂತೆ ಹುಳಿಯಾರಿನ 16 ವಾರ್ಡ್ಗಳಲ್ಲಿ ವಾಸವಿರುವ ನಿವೇಶನ ರಹಿತರನ್ನು ಗುರುತಿಸುವಂತೆ ಪಂಚಾಯಿತಿಗೆ ಸೂಚಿಸಿ, ಈ ಹಿಂದೆ ಆಸ್ಪತ್ರೆಗೆ ಮೀಸಲಿಟ್ಟಿದ್ದ ಕಂಪನಹಳ್ಳಿ ಬಳಿಯ ಜಾಗವನ್ನು ಈಗ ಹೌಸಿಂಗ್ ಬೋರ್ಡ್ಗೆ ಬಿಟ್ಟುಕೊಡುವ ಕುರಿತು ತಹಸೀಲ್ದಾರ್ ಜತೆ ಚರ್ಚಿಸಿ, ಶೀಘ್ರವೇ ಸೈಟ್ ಹಂಚಿಕೆಗೆ ಪ್ಲಾನ್ ಮಾಡಲಾಗುವುದು ಎಂದು ಭರವಸೆ ನೀಡಿದರು.
ಹುಳಿಯಾರು ಹೋಬಳಿಯಲ್ಲಿ 10 ಪಂಚಾಯಿತಿಗಳಿದ್ದು, ತುರ್ತು ಸಂದರ್ಭಗಳಲ್ಲಿ ಅಗ್ನಿಶಾಮಕ ವಾಹನ ಚಿಕ್ಕನಾಯಕನಹಳ್ಳಿಯಿಂದಲೇ ಬರಬೇಕಿದೆ. ಈ ಸಮಸ್ಯೆಯನ್ನು ನೀಗಿಸಲು ಹುಳಿಯಾರಿನಲ್ಲಿ ಎರಡು ಎಕರೆ ಜಾಗ ಗುರುತಿಸಿ, ಕ್ವಾರ್ಟಸ್ ಸೇರಿದಂತೆ ಸುಸಜ್ಜಿತ ಅಗ್ನಿಶಾಮಕ ಠಾಣೆ ನಿರ್ಮಿಸಲು ಕ್ರಮ ಕೈಗೊಳ್ಳಲಾಗುವುದು ಎಂದರು.
ಪಟ್ಟಣದ ಕಸ ವಿಲೇವಾರಿಗೆ ಶಾಶ್ವತ ಪರಿಹಾರ ಕಂಡುಕೊಳ್ಳಲಾಗುತ್ತಿದ್ದು, ಪಪಂನ ನೂತನ ಅಧ್ಯಕ್ಷರ ಅಧಿಕಾರಾವಧಿಯಲ್ಲಿ ಪಟ್ಟಣದ ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ನೀಡಲಾಗಿದ್ದು, ಪ್ರತಿದಿನ ವಾರ್ಡ್ಗಳಲ್ಲಿ ಕಸ ಸಂಗ್ರಹಣಾ ವಾಹನ ಬಂದಾಗ ಸಾರ್ವಜನಿಕರು ಹಸಿ ಕಸ ಹಾಗೂ ಒಣ ಕಸವನ್ನು ವಿಂಗಡಿಸಿ ನೀಡುವ ಮೂಲಕ ಪಟ್ಟಣದ ನೈರ್ಮಲ್ಯ ಕಾಪಾಡಲು ಸಹಕರಿಸಬೇಕು ಎಂದು ಮನವಿ ಮಾಡಿದರು.
ಪಪಂ ಸದಸ್ಯರಾದ ರತ್ನಮ್ಮ, ಹೇಮಂತ್ ಕುಮಾರ್, ದಯಾನಂದ್, ಬಿ.ಬಿ.ಫಾತಿಮಾ, ಅಬೂಬಕ್ಕರ್ ಸಿದ್ದೀಕ್, ರಾಜು ಬಡಗಿ, ಮಹ್ಮದ್ ಜುಬೇರ್, ಮಂಜಾನಾಯ್ಕ, ಕಿರುತರೆ ಕಲಾವಿದ ಗೌಡಿ, ಜಿಪಂ ಮಾಜಿ ಸದಸ್ಯೆ ಮಂಜುಳಮ್ಮಇದ್ದರು.