ದೊಡ್ಡಬಳ್ಳಾಪುರದ ಮುತ್ಯಾಲಮ್ಮದೇವಿ ದೇಗುಲದ ಬಳಿ ಮರ ಬಿದ್ದು ಬೈಕ್ ಸಂಪೂರ್ಣ ಜಖಂಗೊಂಡಿರುವುದು.
ದೊಡ್ಡಬಳ್ಳಾಪುರ : ಬೇಸಿಗೆಯಿಂದ ಕೆಂಗೆಟ್ಟಿದ್ದ ತಾಲೂಕಿನ ಜನತೆಗೆ ವರ್ಷದ ಮೊದಲ ಮಳೆ ಭಾರಿ ಅವಾಂತರ ಸೃಷ್ಟಿಸಿದೆ. ಬಿರುಗಾಳಿ ಸಹಿತ ಸುರಿದ ಭಾರಿ ಮಳೆಗೆ ಜನ ಕಂಗಾಲಾಗಿದ್ದಾರೆ. ಯುಗಾದಿ ಎರಡು ದಿನ ಇರುವಂತೆಯೇ ತಾಲೂಕಿನಾದ್ಯಂತ ಬಿರುಗಾಳಿಗೆ ಮರಗಳು ಬಿದ್ದು ರಸ್ತೆ ಸಂಚಾರ ಅಸ್ತವ್ಯಸ್ಥವಾಗಿತ್ತು. ನಗರ ಹಾಗೂ ಗ್ರಾಮೀಣ ಪ್ರದೇಶದಲ್ಲಿ ವಿದ್ಯುತ್ ಕಂಬಗಳು ಮುರಿದು ಬಿದ್ದಿರುವುದರಿಂದ ವಿದ್ಯುತ್ ಕಡಿತವಾಗಿದೆ.
ನಗರದ ಜಾಲಪ್ಪ ಕಾಲೇಜು ರಸ್ತೆಯಲ್ಲಿ ಮುತ್ಯಾಲಮ್ಮ ದೇವಾಲಯ ಸಮೀಪ ಬೃಹತ್ ಮರ ಮುರಿದು ಬಿದ್ದಿದ್ದು, ಕೆಳಗಿದ್ದ ಬೈಕ್ ಸಂಪೂರ್ಣ ಜಖಂ ಆಗಿದೆ. ಕೆಲವೆಡೆ ವಿದ್ಯುತ್ ಕಂಬಗಳು ಮುರಿದು ಬಿದ್ದಿವೆ. ಗಾಳಿಪೂಜೆ ಗ್ರಾಮದಲ್ಲಿ ರೈತ ಚಂದನ್ ಎಂಬುವರಿಗೆ ಸೇರಿದ ಅಡಕೆ ತೋಟ ಸಂಪೂರ್ಣ ನೆಲಕಚ್ಚಿದೆ. 1500ಕ್ಕೂ ಹೆಚ್ಚು ಅಡಕೆ ಮರಗಳು ನೆಲಕ್ಕುರುಳಿವೆ. ನೇರಳಘಟ್ಟ ಗ್ರಾಮದಲ್ಲಿ ಲಕ್ಷ್ಮೀನಾರಾಯಣ ಎಂಬುವರಿಗೆ ಸೇರಿದ ಬಾಳೆ ತೋಟ ನಾಶವಾಗಿದೆ. ಎರಡು ಎಕರೆಯಲ್ಲಿ ಬೆಳೆದಿದ್ದ ಬಾಳೆಗಿಡಗಳು ಬಾರಿ ಗಾಳಿಗೆ ನೆಲಕ್ಕೆ ಬಿದ್ದಿವೆ. ಹಲವೆಡೆ ತೆಂಗು, ಅಡಕೆ, ಬಾಳೆ ಮರಗಳು ಗಾಳಿಗೆ ಮುರಿದು ಬಿದಿದ್ದು, ಬೆಳೆಗಳಿಗೆ ಮಳೆ ಸಂಕಷ್ಟ ತಂದೊಡ್ಡಿದೆ.
ಎರಡು ದಿನ ಮಳೆ : ತಾಲೂಕಿನಲ್ಲಿ ಮಂಗಳವಾರ ಹಾಗೂ ಬುಧವಾರ ಎರಡು ದಿನದ ಸಂಜೆ ಮಳೆ ಸುರಿಯಿತು. ಮಂಗಳವಾರದ ಸಂಜೆಗಿಂತ ಬುಧವಾರ ಸಂಜೆ ಗುಡುಗು ಸಹಿತ ಭಾರಿ ಮಳೆ ಗಾಳಿ ಬೀಸಿದ್ದರಿಂದ ವಿದ್ಯುತ್ ಕೆಲ ಗಂಟೆ ಕಡಿತವಾಗಿತ್ತು.