ಇಂಡಿ ತಾಲೂಕಿನ ಸಾತಲಗಾಂವ ಗ್ರಾಮದ ಶಿವಯೋಗೇಶ್ವರ ದೇವಸ್ಥಾನದ ಆವರಣದಲ್ಲಿ ಶ್ರಾವಣ ಮಾಸದ ನಿಮಿತ್ತ ಹಮ್ಮಿಕೊಂಡಿದ್ದ ಮನ ಮನೆಗಳಲ್ಲಿ ಕೂಡಲಸಂಗಮ ಹಾಗೂ ಸಾಮೂಹಿಕ ಇಷ್ಟಲಿಂಗ ಪೂಜೆ-ದೀಕ್ಷಾ ಅಭಿಯಾನ ಕಾರ್ಯಕ್ರಮದಲ್ಲಿ ಪಂಚಮಸಾಲಿ ಪೀಠದ ಜಗದ್ಗುರು ಬಸವ ಜಯಮೃತ್ಯುಂಜಯ ಸ್ವಾಮೀಜಿ ಮಾತನಾಡಿದರು.
- ಪಂಚಮಸಾಲಿ ಸಮಾಜದ ಜಗದ್ಗುರು ಬಸವಜಯ ಮೃತ್ಯುಂಜಯ ಸ್ವಾಮೀಜಿ ಹೇಳಿಕೆ
- 2ಎ ಮೀಸಲಾತಿಗಾಗಿ ರಾಜ್ಯಾದ್ಯಂತ ಇಷ್ಟಲಿಂಗ ಪೂಜೆ
ಇಂಡಿ: ಲಿಂಗಾಯತ ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿ ನೀಡುವಂತೆ ಆಗ್ರಹಿಸಿ ರಾಜ್ಯಾದ್ಯಂತ ಇಷ್ಟಲಿಂಗ ಪೂಜೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು, ಸಮಾಜದ ಹಕ್ಕಿನ ಹೋರಾಟವನ್ನು ಮತ್ತಷ್ಟು ತೀವ್ರಗೊಳಿಸಲು ನಿರ್ಧರಿಸಲಾಗಿದೆ ಎಂದು ಪಂಚಮಸಾಲಿ ಸಮಾಜದ ಜಗದ್ಗುರು ಬಸವಜಯ ಮೃತ್ಯುಂಜಯ ಸ್ವಾಮೀಜಿ ಹೇಳಿದರು.
ತಾಲೂಕಿನ ಸಾತಲಗಾಂವ ಗ್ರಾಮದ ಶಿವಯೋಗೇಶ್ವರ ದೇವಸ್ಥಾನದ ಆವರಣದಲ್ಲಿ ಶ್ರಾವಣ ಮಾಸದ ನಿಮಿತ್ತ ಹಮ್ಮಿಕೊಂಡಿದ್ದ ಮನ ಮನೆಗಳಲ್ಲಿ ಕೂಡಲಸಂಗಮ ಹಾಗೂ ಸಾಮೂಹಿಕ ಇಷ್ಟಲಿಂಗ ಪೂಜೆ-ದೀಕ್ಷಾ ಅಭಿಯಾನ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದರು.
ಪಂಚಮಸಾಲಿ ಸಮಾಜ ಹಲವು ವರ್ಷಗಳಿಂದ 2ಎ ಮೀಸಲಾತಿಗಾಗಿ ಹೋರಾಟ ನಡೆಸುತ್ತಿದ್ದು, ಸರ್ಕಾರ ಸಮಾಜದ ನ್ಯಾಯಯುತ ಬೇಡಿಕೆ ಈಡೇರಿಸುವಲ್ಲಿ ವಿಲವಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಇಷ್ಟಲಿಂಗ ಪೂಜೆ ಮೂಲಕ ಭಕ್ತರು ಹಾಗೂ ಸಮಾಜದ ಮುಖಂಡರು ಮೀಸಲಾತಿಗಾಗಿ ಪ್ರಾರ್ಥನೆ ಸಲ್ಲಿಸುತ್ತಿದ್ದು, ಸರ್ಕಾರದ ಮೇಲೆ ಒತ್ತಡ ಹೆಚ್ಚಿಸುವ ಉದ್ದೇಶದಿಂದ ಈ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ ಎಂದು ತಿಳಿಸಿದರು.
ಕಳೆದ ಡಿಸೆಂಬರ್ 10ರಂದು ಬೆಳಗಾವಿಯ ಸುವರ್ಣಸೌಧದ ಎದುರು ಮೀಸಲಾತಿಗಾಗಿ ಶಾಂತಿಯುತ ಪ್ರತಿಭಟನೆ ನಡೆಸುತ್ತಿದ್ದ ಪಂಚಮಸಾಲಿ ಸಮಾಜದ ಹೋರಾಟಗಾರರ ಮೇಲೆ ಪೊಲೀಸರು ನಡೆಸಿದ ಲಾಠಿಚಾರ್ಜ್ ಅನ್ನು ತೀವ್ರವಾಗಿ ಖಂಡಿಸುತ್ತೇವೆ.
ಸಮಾಜದ ಹಕ್ಕಿಗಾಗಿ ಹೋರಾಟ ನಡೆಸುತ್ತಿದ್ದ ಮಹಿಳೆಯರು, ಯುವಕರು ಹಾಗೂ ಭಕ್ತರ ಮೇಲೆ ನಡೆದ ದೌರ್ಜನ್ಯ ಸಮಾಜದ ಮನಸ್ಸಿಗೆ ನೋವುಂಟು ಮಾಡಿದೆ. ಸರ್ಕಾರ ಸಮಾಜದ ಬೇಡಿಕೆಯನ್ನು ಗೌರವಿಸಿ ನ್ಯಾಯ ಒದಗಿಸಬೇಕಾದರೆ ಹೊರತು, ಹೋರಾಟವನ್ನು ಹತ್ತಿಕ್ಕುವ ಪ್ರಯತ್ನ ಮಾಡಬಾರದು ಎಂದು ಎಚ್ಚರಿಸಿದರು.
ಲಕ್ಷಾಂತರ ಭಕ್ತರ ಸಮಾವೇಶ: ಮೀಸಲಾತಿ ಹೋರಾಟಕ್ಕೆ ಹೊಸ ದಿಕ್ಕು ನೀಡುವ ಉದ್ದೇಶದಿಂದ ಡಿಸೆಂಬರ್ 10ರಂದು ಬೆಳಗಾವಿ ಸುವರ್ಣಸೌಧದ ಎದುರು ಲಕ್ಷಾಂತರ ಪಂಚಮಸಾಲಿ ಭಕ್ತರ ಬೃಹತ್ ಸಮಾವೇಶ ಹಾಗೂ ಹೋರಾಟ ನಡೆಸಲು ತೀರ್ಮಾನಿಸಲಾಗಿದೆ.
ಅಂದು ಒಂದು ದಿನ ಸಂಪೂರ್ಣವಾಗಿ ಉಪವಾಸ ಇದ್ದು ಉಪವಾಸ ಸತ್ಯಾಗ್ರಹ ಮಾಡೋಣ ಎಂದು ಶ್ರೀಗಳು ಘೋಷಿಸಿದರು. ರಾಜ್ಯದ ಮೂಲೆ ಮೂಲೆಗಳಿಂದ ಸಮಾಜದ ಜನರು, ಮಠಾಧೀಶರು, ಯುವಕರು ಹಾಗೂ ಮಹಿಳೆಯರು ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದು, ಸರ್ಕಾರಕ್ಕೆ ಮತ್ತೊಮ್ಮೆ ಸಮಾಜದ ಒಗ್ಗಟ್ಟಿನ ಶಕ್ತಿ ಪ್ರದರ್ಶಿಸಲಾಗುವುದು ಎಂದರು.
ಸಮಾಜದ ತಾಲೂಕಾಧ್ಯಕ್ಷ ವಿ.ಎಚ್. ಬಿರಾದಾರ, ಉಮೇಶ ಬಳಬಟ್ಟಿ, ಶಿವಾನಂದ ಚಾಳೀಕಾರ, ಬಾಳು ಮುಳಜಿ, ಶರಣಗೌಡ ಬಂಡಿ, ಅನೀಲ ಏಳಗಿ, ಈರನಗೌಡ ಪಾಟೀಲ, ಶ್ಯಾಮಗೌಡ ಬಿರಾದಾರ, ಶಂಕರಗೌಡ ಪಾಟೀಲ, ನೀಲಕಂಠ ಬಿರಾದಾರ, ನಾಗೇಶ ಖಣದಾಳ, ರಮೇಶ ಬಿರಾದಾರ, ಶಿವಯೋಗೆಪ್ಪ ಬಿರಾದಾರ, ಶಿವಕುಮಾರ ಬಿರಾದಾರ, ರಾಜು ಕಾಮಗೊಂಡ, ರಾಜು ಬಿರಾದಾರ, ಉಮೇಶ ಖಣದಾಳ, ಆನಂದ ಪಾರಶೆಟ್ಟಿ, ಎಸ್.ಕೆ. ಕಾಮಗೊಂಡ, ಶ್ರೀಶೈಲ ಕೋರಳ್ಳಿ, ರಮೇಶ ಬರಡೋಲ ಇತರರಿದ್ದರು.