ಹೊಯ್ಸಳ ಸಿಬ್ಬಂದಿ ಸಮಯ ಪ್ರಜ್ಞೆಗೆ ಬದುಕಿತು ಬಡ ಜೀವ
- ಎಎಸ್‌ಐ ಸಚ್ಚಿದಾನಂದ ಮೂರ್ತಿ, ಪಿಸಿ ಬಸವರಾಜು ಕಾರ್ಯಕ್ಕೆ ಶ್ಲಾಘನೆ
ಪೊಲೀಸರು ಸಮಯಕ್ಕೆ ಸರಿಯಾಗಿ ಸ್ಪಂದಿಸಿದರೆ ಸಾವು ಬಾಗಿಲಿಗೆ ಬಂದರೂ ಹಿಂದಕ್ಕೆ ತಿರುಗಿ ಹೋಗುತ್ತದೆ ಎಂಬುದನ್ನು ಬೆಂಗಳೂರು ಪೊಲೀಸರ ಹೊಯ್ಸಳ ಸಿಬ್ಬಂದಿ ಸಾಬೀತುಪಡಿಸಿದ್ದಾರೆ.
ಬೈಕಿನಲ್ಲಿ ಹೋಗುತ್ತಿದ್ದ ವೇಳೆ ತೀವ್ರ ಎದೆ ನೋವಿನಿಂದ ರಸ್ತೆ ಬದಿಗೆ ಬೈಕ್ ನಿಲ್ಲಿಸಿ ನೆಲಕಚ್ಚಿದ್ದ ರವಿ (34) ಎಂಬ ವ್ಯಕ್ತಿಯನ್ನು ‘ಹೊಯ್ಸಳ-88’ ವಾಹನದ ಸಿಬ್ಬಂದಿ ಎಎಸ್‌ಐ ಸಚ್ಚಿದಾನಂದ ಮೂರ್ತಿ ಹಾಗೂ ಕಾನ್‌ಸ್ಟೇಬಲ್ ಬಸವರಾಜು ರಕ್ಷಿಸಿದ್ದಾರೆ.
‘ಹೊಯ್ಸಳ-88’ ವಾಹನದ ಸಿಬ್ಬಂದಿ ಎಎಸ್‌ಐ ಸಚ್ಚಿದಾನಂದ ಮೂರ್ತಿ ಹಾಗೂ ಕಾನ್‌ಸ್ಟೇಬಲ್ ಬಸವರಾಜು
ತೀವ್ರ ಎದೆ ನೋವಿನಿಂದ ರಸ್ತೆ ಬದಿಗೆ ಬೈಕ್ ನಿಲ್ಲಿಸಿ ನೆಲಕಚ್ಚಿದ್ದ ರವಿ (34) ಎಂಬ ವ್ಯಕ್ತಿಯನ್ನು
ಮಾಗಡಿ ರಸ್ತೆ ಪೊಲೀಸ್ ಠಾಣೆ ವ್ಯಾಪ್ತಿಯ ಅಗ್ನಿಶಾಮಕ ಠಾಣೆ ಬಳಿ ಘಟನೆ ಸಂಭವಿಸಿದೆ. ರವಿ ಎದೆ ನೋವಿನಿಂದ ನೆಲಕಚ್ಚಿದ ಕೆಲವೇ ಸೆಕೆಂಡುಗಳಲ್ಲಿ ಅದೇ ಮಾರ್ಗದಲ್ಲಿ ಗಸ್ತಿನಲ್ಲಿದ್ದ ‘ಹೊಯ್ಸಳ-88’ ಸಿಬ್ಬಂದಿ ಆತನನ್ನು ಗಮನಿಸಿ, ಆತನಿಗೆ ಹೃದಯಾಘಾತವಾಗಿರಬಹುದೆಂದು ತಮ್ಮದೇ ವಾಹನದಲ್ಲಿ ಸಮೀಪದ ಆಸ್ಪತ್ರೆಗೆ ಕರೆದೊಯ್ದರು.
ಸಿಬ್ಬಂದಿ ತೋರಿದ ಅಪ್ರತಿಮ ಕಾಳಜಿ ಮತ್ತು ಸಮಯೋಚಿತ ಚಿಕಿತ್ಸೆಯಿಂದ ರವಿ ಅವರ ಪ್ರಾಣಕ್ಕೆ ಇದ್ದ ಆಪತ್ತು ತಪ್ಪಿದ್ದು, ಅವರು ಪ್ರಜ್ಞೆ ಮರಳಿ ಪಡೆದಿದ್ದಾರೆ. ತದನಂತರ ಸಿಬ್ಬಂದಿಯೇ ಹೆಚ್ಚಿನ ಚಿಕಿತ್ಸೆಗಾಗಿ ಅವರನ್ನು ಹತ್ತಿರದ ಆಸ್ಪತ್ರೆಗೆ ದಾಖಲಿಸಿದ್ದು, ಸದ್ಯ ರವಿ ಅವರು ಚೇತರಿಸಿಕೊಳ್ಳುತ್ತಿದ್ದಾರೆ ಎಂದು ತಿಳಿದುಬಂದಿದೆ.
ಕೇವಲ ಕಾನೂನು ಸುವ್ಯವಸ್ಥೆ ಪಾಲನೆ ಮಾತ್ರವಲ್ಲದೆ, ನಾಗರಿಕರ ಜೀವ ರಕ್ಷಣೆಯಲ್ಲೂ ಪೊಲೀಸ್ ಇಲಾಖೆ ಮುಂಚೂಡಿಯಲ್ಲಿದೆ ಎಂಬುದನ್ನು ಈ ಘಟನೆ ಮತ್ತೊಮ್ಮೆ ಸಾಕ್ಷೀಕರಿಸಿದೆ. ಸಂಕಷ್ಟದಲ್ಲಿದ್ದ ವ್ಯಕ್ತಿಗೆ ಸಮಯಕ್ಕೆ ಸರಿಯಾಗಿ ನೆರವಾಗುವ ಮೂಲಕ ‘ಖಾಕಿ’ಯ ಮಾನವೀಯ ಮುಖವನ್ನು ಮೆರೆದ ಹೊಯ್ಸಳ-88 ಸಿಬ್ಬಂದಿಯ ಈ ಸಾಹಸಕ್ಕೆ ಸಾರ್ವಜನಿಕ ವಲಯದಿಂದ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ.