ಭಟ್ಕಳ ದುರಂತ ಸಂಭವಿಸಿದ್ದು ಹೇಗೆ? ಅಪಾಯದ ಅರಿವಿದ್ದರೂ ಹೊಟ್ಟೆಪಾಡಿಗಾಗಿ ಹೋದವರು ಹೆಣವಾದರು! Bhatkal Tragedy  
ರಾಜ್ಯ

ಭಟ್ಕಳ ದುರಂತ ಸಂಭವಿಸಿದ್ದು ಹೇಗೆ? ಅಪಾಯದ ಅರಿವಿದ್ದರೂ ಹೊಟ್ಟೆಪಾಡಿಗಾಗಿ ಹೋದವರು ಹೆಣವಾದರು! Bhatkal Tragedy

ಪ್ರಮುಖ ಮುಖ್ಯಾಂಶಗಳು

  • ಹೊಟ್ಟೆಪಾಡಿಗಾಗಿ ಹೋದವರು ಹೆಣವಾಗಿ ಮರಳಿದ ದಾರುಣ ಘಟನೆ ಉತ್ತರ ಕನ್ನಡ ಜಿಲ್ಲೆಯನ್ನೇ ಕಣ್ಣೀರ ಕಡಲಲ್ಲಿ ಮುಳುಗಿಸಿದೆ
  • ಭಟ್ಕಳ ತಾಲೂಕಿನ ತಟ್ಟೆಹಕ್ಕಲು ನದಿಗೆ ಕಪ್ಪೆಚಿಪ್ಪು ಹೆರಲು ತೆರಳಿದ್ದ ಒಂದೇ ಕುಟುಂಬದ ಎಂಟು ಜೀವಗಳು ವಿಧಿಯಾಟಕ್ಕೆ ಬಲಿ
  • ಆಸ್ಪತ್ರೆಯ ಶವಗಾರದಲ್ಲಿಟ್ಟಿರುವ ಮೃತದೇಹಗಳನ್ನು ನೋಡಿ ಮುಗಿಲು ಮುಟ್ಟಿದ ಕುಟುಂಬಸ್ಥರ ಆಕ್ರಂದನ
  • ನಾಲ್ವರನ್ನು ಪವಾಡಸದೃಶ ರೀತಿಯಲ್ಲಿ ರಕ್ಷಣೆ ಮಾಡಲಾಗಿದ್ದು, ಉಳಿದವರಿಗೆ ಶೋಧ ಕಾರ್ಯ ಮುಂದುವರಿದಿದೆ
Bhatkal Tragedy : ಹೊಟ್ಟೆಪಾಡಿಗಾಗಿ ಹೋದವರು ಹೆಣವಾಗಿ ಮರಳಿದ ದಾರುಣ ಘಟನೆಯೊಂದು ಇಡೀ ಉತ್ತರ ಕನ್ನಡ ಜಿಲ್ಲೆಯನ್ನೇ ಕಣ್ಣೀರ ಕಡಲಲ್ಲಿ ಮುಳುಗಿಸಿದೆ. ಭಟ್ಕಳ ತಾಲೂಕಿನ ತಟ್ಟೆಹಕ್ಕಲು ನದಿಗೆ ಕಪ್ಪೆಚಿಪ್ಪು ಹೆರಲು ತೆರಳಿದ್ದ ಒಂದೇ ಕುಟುಂಬದ ಎಂಟು ಜೀವಗಳು ವಿಧಿಯ ಕ್ರೂರ ಆಟಕ್ಕೆ ಸಿಲುಕಿ ಜಲಸಮಾಧಿಯಾಗಿವೆ. ಪತ್ತೆಯಾದ ಶವಗಳನ್ನು ಸಮೀಪದ ಆಸ್ಪತ್ರೆಯ ಶವಗಾರದಲ್ಲಿಟ್ಟಿದ್ದು, ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಈ ಒಂದು ಘಟನೆ ಇಡೀ ಗ್ರಾಮದ ಕರುಳನ್ನೇ ಹಿಂಡುವಂತಿದೆ.

ಏನಿದು ಘಟನೆ?

ಭಾನುವಾರ ಒಟ್ಟು 14 ಜನರಿದ್ದ ತಂಡವೊಂದು ಅಳಿವೆಕೋಡಿ ನದಿಗೆ ತೆರಳಿತ್ತು. ಈ ವೇಳೆ ನದಿಯಲ್ಲಿ ಕಪ್ಪೆಚಿಪ್ಪು ತೆಗೆಯಲು ನೀರಿನಲ್ಲಿ ಇಳಿದಾಗ, ಏಕಾಏಕಿ ಬಂದ ಭಾರಿ ನೀರಿನ ಸೆಳೆತಕ್ಕೆ ಸಿಲುಕಿ ನೋಡನೋಡುತ್ತಿದ್ದಂತೆಯೇ ನೀರಿನ ಪಾಲಾಗಿದ್ದಾರೆ. ಈ ಅವಘಡದಲ್ಲಿ 8 ಮಂದಿಯ ಮೃತ ದೇಹಗಳು ಪತ್ತೆಯಾಗಿವೆ. ಎಲ್ಲರೂ ಒಂದೇ ಕುಟುಂಬದವರು ಎಂಬುದು ದೃಢಪಟ್ಟಿದೆ. ನಾಲ್ವರನ್ನು ರಕ್ಷಣೆ ಮಾಡಲಾಗಿದ್ದು, ಉಳಿದವರಿಗಾಗಿ ನದಿಯಲ್ಲಿ ತೀವ್ರ ಶೋಧ ಕಾರ್ಯ ನಡೆಯುತ್ತಿದೆ. ಮೃತರು ಹಾಗೂ ನಾಪತ್ತೆಯಾದವರು ಭಟ್ಕಳ ತಾಲೂಕಿನ ಸಾರದಹೊಳೆಯ ಹೆರಿಹಿತ್ಲು ಮೂಲದ ನಿವಾಸಿಗಳು ಎಂದು ತಿಳಿದುಬಂದಿದೆ.  

ಕಪ್ಪೆ ಚಿಪ್ಪು ದುರಂತ ಸಂಭವಿಸಿದ್ದು ಹೇಗೆ?

ಕಪ್ಪೆಚಿಪ್ಪು ತರಲು ಒಟ್ಟು  14 ಮಂದಿ ತಟ್ಟೆಹಕ್ಕಲು ನದಿಗೆ ತೆರಳಿದ್ದರು. ಆದರೆ, ಕಳೆದ ಎರಡ್ಮೂರು ದಿನಗಳಿಂದ ಭಾರಿ ಮಳೆ ಹಿನ್ನೆಲೆಯಲ್ಲಿ ನದಿಯಲ್ಲಿ ನೀರಿನ ಹರಿವು ಎಂದಿಗಿಂತ ಜಾಸ್ತಿ ಇತ್ತು. ನೀರು ಹೆಚ್ಚಾಗಿರುವುದನ್ನು ಮೃತರು ಕೂಡ ಅಂದಾಜಿಸಿದ್ದರು. ಅಲ್ಲದೆ, ನಿನ್ನೆ ರಾತ್ರಿಯೂ ಭಾರಿ ಮಳೆಯಾಗಿತ್ತು. ಹೀಗಾಗಿ, 14 ಮಂದಿ ಕೈಕೈ ಹಿಡಿದುಕೊಂಡು ಒಬ್ಬೊಬ್ಬರಾಗಿ ನದಿಗೆ ಇಳಿದರು. ಆದರೆ, ನೀರಿನ ಹರಿವನ್ನು ಸರಿಯಾಗಿ ಊಹಿಸದೇ 14 ಮಂದಿ ನೀರಿನ ಆಳಕ್ಕೆ ಇಳಿದಿದ್ದರು. ಪರಸ್ಪರ ಕೈಕೈ ಹಿಡಿದುಕೊಂಡು ಹೋಗುತ್ತಿದ್ದವರು ಏಕಾಏಕಿ ನೀರು ಪಾಲಾದರು. ನೀರಿನ ಸೆಳೆತಕ್ಕೆ ಸಿಲುಕಿ 8 ಮಂದಿ ಬಲಿಯಾದರೆ, ನಾಲ್ವರನ್ನು ಪವಾಡಸದೃಶ ರೀತಿಯಲ್ಲಿ ರಕ್ಷಣೆ ಮಾಡಲಾಗಿದೆ. ಉಳಿದವರಿಗೆ ಶೋಧ ಕಾರ್ಯ ಇನ್ನೂ ಮುಂದುವರಿದಿದೆ. 
ಅಂದಹಾಗೆ, ಕಳೆದ ಎರಡ್ಮೂರು ದಿನಗಳಿಂದ ಸುರಿಯುತ್ತಿದ್ದ ಮುಂಗಾರಿನ ಭಾರಿ ಮಳೆಗೆ ನದಿಯು ಎಂದಿಗಿಂತಲೂ ಹೆಚ್ಚು ರೌದ್ರಾವತಾರ ತಾಳಿತ್ತು. ನೀರಿನ ಅಪಾಯದ ಅರಿವಿದ್ದರೂ, ಹೊಟ್ಟೆಪಾಡಿಗಾಗಿ ವಿಧಿಯಿಲ್ಲದೆ ಒಬ್ಬರ ಕೈಯನ್ನು ಮತ್ತೊಬ್ಬರು ಗಟ್ಟಿಯಾಗಿ ಹಿಡಿದುಕೊಂಡು 14 ಮಂದಿ ನದಿಗೆ ಇಳಿದಿದ್ದರು. ಆದರೆ, ಕ್ಷಣಾರ್ಧದಲ್ಲಿ ನದಿಯ ಭೀಕರ ಸೆಳೆತಕ್ಕೆ ಸಿಲುಕಿದ ಇವರೆಲ್ಲರೂ ಏಕಾಏಕಿ ನೀರಿನ ಆಳಕ್ಕೆ ಕೊಚ್ಚಿ ಹೋಗಿದ್ದಾರೆ. ನದಿಯ ಅಬ್ಬರಕ್ಕೆ ಸಿಲುಕಿ ಎಂಟು ಜೀವಗಳು ದುರಂತ ಅಂತ್ಯ ಕಂಡಿವೆ.

ಸಿಎಂ ಸಿದ್ದರಾಮಯ್ಯ ಸಂತಾಪ

ತಮ್ಮ ಎಕ್ಸ್​ ಖಾತೆಯಲ್ಲಿ ಬರೆದುಕೊಂಡಿರುವ ಸಿಎಂ ಸಿದ್ದರಾಮಯ್ಯ, ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ಸಮೀಪದ ತಟ್ಟೆಹಕ್ಕಲು ಕಡಲ ತೀರದಲ್ಲಿ ಕಪ್ಪೆಚಿಪ್ಪು ತರಲು ಹೋದವರ ಪೈಕಿ ಒಂದೇ ಕುಟುಂಬದ ಎಂಟು ಮಂದಿ ನೀರಿನಲ್ಲಿ ಮುಳುಗಿ ಸಾವಿಗೀಡಾಗಿದ ಸುದ್ದಿ ತಿಳಿದು ಸಂಕಟವಾಯಿತು. ಮೃತರ ಆತ್ಮಕ್ಕೆ ಚಿರಶಾಂತಿ ಸಿಗಲಿ ಎಂದು ಪ್ರಾರ್ಥಿಸುತ್ತೇನೆ ಎಂದಿದ್ದಾರೆ.
ಪರಿಹಾರ ಘೋಷಣೆ
ಇದೊಂದು ಅತ್ಯಂತ ದುರದೃಷ್ಟಕರ ಮತ್ತು ನೋವಿನ ಘಟನೆ ಎಂದಿರುವ ಸಿಎಂ ಸಿದ್ದರಾಮಯ್ಯ, ದುರಂತದಲ್ಲಿ ಮಡಿದವರ ಕುಟುಂಬಕ್ಕೆ ಮಾನವೀಯ ನೆಲೆಯಲ್ಲಿ ರಾಜ್ಯ ಸರ್ಕಾರದಿಂದ ತಲಾ 5 ಲಕ್ಷ ರೂಪಾಯಿ ಪರಿಹಾರ ನೀಡಲಾಗುವುದು. ಇನ್ನೂ ಕೆಲವರು ಈ ದುರ್ಘಟನೆಯಲ್ಲಿ ಕಾಣೆಯಾಗಿರುವ ಮಾಹಿತಿಯಿದ್ದು, ಅವರಿಗಾಗಿ ತೀವ್ರ ಹುಡುಕಾಟ ನಡೆಸಲಾಗುತ್ತಿದೆ. ಕಾಣೆಯಾದವರು ಬದುಕಿಬಂದು ತಮ್ಮವರನ್ನು ಕೂಡಿಕೊಳ್ಳಲಿ‌ ಎಂದು ನಾವೆಲ್ಲರೂ ದೇವರಲ್ಲಿ ಪ್ರಾರ್ಥಿಸೋಣ ಎಂದು ಹೇಳಿದ್ದಾರೆ.
ಮೃತರ ಪೈಕಿ ಏಳು ಮಹಿಳೆಯರು ಹಾಗೂ ಒಬ್ಬ ಪುರುಷ ಸೇರಿದ್ದು, ಇವರಲ್ಲಿ ಆರು ಮೃತದೇಹಗಳನ್ನು ಭಟ್ಕಳದ ಸರ್ಕಾರಿ ಆಸ್ಪತ್ರೆಗೆ ಹಾಗೂ ಇಬ್ಬರ ಮೃತದೇಹಗಳನ್ನು ಮುರುಡೇಶ್ವರ ಸರ್ಕಾರಿ ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗಾಗಿ ತರಲಾಗಿದೆ. ಭಟ್ಕಳ ಆಸ್ಪತ್ರೆಯಲ್ಲಿರುವ ಮೃತರನ್ನು ಲಕ್ಷ್ಮಿ ಮಾದೇವ ನಾಯ್ಕ (38 ವರ್ಷ), ಲಕ್ಷ್ಮಿ ಮಹಾದೇವ ನಾಯ್ಕ, ಲಕ್ಷ್ಮಿ ಶಿವರಾಂ ನಾಯ್ಕ (39 ವರ್ಷ), ಉಮೇಶ್ ಮಂಜುನಾಥ್ ನಾಯ್ಕ (42 ವರ್ಷ), ಮಾಸ್ತಮ್ಮ ಮಂಜುನಾಥ್ ನಾಯ್ಕ (43 ವರ್ಷ) ಮತ್ತು ಲಕ್ಷ್ಮಿ ಅಣ್ಣಪ್ಪ ನಾಯ್ಕ (44 ವರ್ಷ) ಎಂದು ಗುರುತಿಸಲಾಗಿದೆ. ಹಾಗೆಯೇ ಮುರುಡೇಶ್ವರ ಆಸ್ಪತ್ರೆಗೆ ತರಲಾದ ಮೃತದೇಹಗಳು ಜ್ಯೋತಿ ನಾಗಪ್ಪ ನಾಯ್ಕ (37 ವರ್ಷ) ಹಾಗೂ ಮಾಲತಿ ಜಟ್ಟಪ್ಪ ನಾಯ್ಕ (38 ವರ್ಷ) ಅವರದ್ದಾಗಿವೆ ಎಂದು ತಿಳಿದುಬಂದಿದೆ. ಸದ್ಯ ಸ್ಥಳದಲ್ಲಿ ರಕ್ಷಣಾ ಕಾರ್ಯಾಚರಣೆ ಮುಂದುವರಿದಿದ್ದು, ಈ ದಾರುಣ ಘಟನೆಯಿಂದಾಗಿ ಇಡೀ ಗ್ರಾಮದಲ್ಲಿ ಕಣ್ಣೀರಿನ ವಾತಾವರಣ ನಿರ್ಮಾಣವಾಗಿದೆ.

ಆಸ್ಪತ್ರೆಗೆ ಮುಖಂಡರ ದೌಡು

ದುರಂತದ ಸುದ್ದಿ ತಿಳಿಯುತ್ತಿದ್ದಂತೆಯೇ ಭಟ್ಕಳ ಸರ್ಕಾರಿ ಆಸ್ಪತ್ರೆಗೆ ಸ್ಥಳೀಯ ಜನಪ್ರತಿನಿಧಿಗಳು ಹಾಗೂ ಮುಖಂಡರು ದೌಡಾಯಿಸಿದ್ದಾರೆ. ಮಾಜಿ ಶಾಸಕ ಸುನಿಲ್ ನಾಯ್ಕ್, ಪಶ್ಚಿಮ ಘಟ್ಟಗಳ ಕಾರ್ಯಪಡೆಯ ಮಾಜಿ ಅಧ್ಯಕ್ಷ ಗೋವಿಂದ ನಾಯ್ಕ್, ಹಿಂದೂ ಜಾಗರಣಾ ವೇದಿಕೆಯ ಜಿಲ್ಲಾ ಮುಖಂಡ ದಿನೇಶ್ ನಾಯ್ಕ್ ಮುಂಡಳ್ಳಿ, ಕಾಂಗ್ರೆಸ್ ಬ್ಲಾಕ್ ಅಧ್ಯಕ್ಷ ವೆಂಕಟೇಶ ನಾಯ್ಕ್, ವಿಶ್ವ ಹಿಂದೂ ಪರಿಷತ್ ಹಾಗೂ ಬಜರಂಗದಳದ ಮುಖಂಡ ದೀಪಕ್ ನಾಯ್ಕ್ ಸೇರಿದಂತೆ ಹಲವು ಪ್ರಮುಖರು ಆಸ್ಪತ್ರೆಗೆ ಭೇಟಿ ನೀಡಿ, ಮೃತರ ಕುಟುಂಬಸ್ಥರಿಗೆ ಸಾಂತ್ವನ ಹೇಳುತ್ತಿದ್ದಾರೆ.
ಘಟನೆ ಕುರಿತಂತೆ ಪೊಲೀಸ್ ಹಾಗೂ ಕಂದಾಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿದ್ದು, ನಾಪತ್ತೆಯಾದವರಿಗಾಗಿ ಶೋಧ ಕಾರ್ಯಾಚರಣೆ ಹಾಗೂ ಹೆಚ್ಚಿನ ತನಿಖೆ ಮುಂದುವರಿದಿದೆ.