ಶ್ರೀಕಾಂತ್ ಶೇಷಾದ್ರಿ ಬೆಂಗಳೂರು
ಜನಸಂಖ್ಯಾ ನಿಯಂತ್ರಣದ ಶಿಸ್ತಿಗೆ ಪಾತ್ರವಾದ ಕರುನಾಡು, ಸಂಸತ್ತಿನ ಸಭಾಂಗಣದಲ್ಲಿ ತನ್ನ ದನಿ ಕ್ಷೀಣಿಸೀತೆಂಬ ದೀರ್ಘಕಾಲದ ಹಳಹಳಿಕೆಯ ನಡುವೆ, ಕೇಂದ್ರದ ಬಹುರ್ಚಚಿತ ಮರುವಿಂಗಡಣೆ ಸೂತ್ರ ಹೊಸ ಲೆಕ್ಕಾಚಾರದ ಬಾಗಿಲು ತೆರೆದಿದೆ.
ದೇಶದ ಸಂಸದೀಯ ಇತಿಹಾಸದಲ್ಲಿಯೇ ಅತ್ಯಂತ ಮಹತ್ವದ ಮೈಲಿಗಲ್ಲಾಗಲಿರುವ ಲೋಕಸಭಾ ಕ್ಷೇತ್ರಗಳ ಮರುವಿಂಗಡಣೆ ಪ್ರಕ್ರಿಯೆಗೆ ಕೇಂದ್ರ ಸರ್ಕಾರ ಮುಂದಾಗಿದ್ದು, ಹಾಲಿ ಪ್ರತಿ ರಾಜ್ಯದಲ್ಲಿರುವ ಕ್ಷೇತ್ರಗಳಿಗೆ ಹೆಚ್ಚುವರಿಯಾಗಿ ಶೇ. 50ರಷ್ಟು ಸ್ಥಾನಗಳನ್ನು ಸೇರಿಸುವ ಸೂತ್ರವನ್ನು ಮುಂದಿಟ್ಟಿದೆ. ಈ ಪ್ರಯತ್ನ ನಿರೀಕ್ಷೆಯಂತೆ ತುದಿ ಮುಟ್ಟಿದರೆ ರಾಜ್ಯದಲ್ಲೂ ಲೋಕಸಭಾ ಕ್ಷೇತ್ರಗಳ ಸಂಖ್ಯೆ ಹಾಲಿ 28ರಿಂದ 42ಕ್ಕೆ ಏರಿಕೆಯಾಗಲಿದೆ.
ಈ ನಡುವೆ ಇದು ಕನ್ನಡಿಗರ ಪಾಲಿಗೆ ವರದಾನದ ಹೊಸ ಮುನ್ನುಡಿಯೋ, ಕಟ್ಟೆಚ್ಚರದ ಕರೆಗಂಟೆಯೋ ಎಂಬ ಜಿಜ್ಞಾಸೆ ಈಗ ರಾಜಕೀಯ ವಲಯದ ಚರ್ಚೆಗೆ ಆಹಾರವಾಗಿದೆ. ರಾಜ್ಯದೊಳಗಿನ ಕ್ಷೇತ್ರ ಮರುವಿನ್ಯಾಸವೂ ಮಹತ್ವದ್ದು. ಹೊಸ ಮಾದರಿಯಲ್ಲಿ ಎರಡು ಕ್ಷೇತ್ರಗಳು ತಲಾ ಎರಡಾಗಿ, ಆರು ಕ್ಷೇತ್ರಗಳು ತಲಾ ಮೂರಾಗಿ ವಿಭಜನೆಯಾಗಲಿದ್ದು, 20 ಕ್ಷೇತ್ರಗಳು ಹಾಗೆಯೇ ಉಳಿಯುತ್ತವೆ ಎಂದು ರಾಜ್ಯದ ಹಿರಿಯ ಅಧಿಕಾರಿಗಳು ವಿಶ್ಲೇಷಣೆ ಮುಂದಿಡುತ್ತಾರೆ. ಇನ್ನು ಯಾವ ಕ್ಷೇತ್ರ ಒಡೆಯುತ್ತದೆ, ಯಾವುದು ಉಳಿಯುತ್ತದೆ ಎಂಬ ನಿರ್ಧಾರ ರಾಜಕೀಯ ಸಮೀಕರಣಗಳನ್ನು ಬದಲಿಸಬಹುದು. ಬೆಂಗಳೂರಿನಂತಹ ನಗರ ಕ್ಷೇತ್ರಗಳು, ಉತ್ತರ ಕರ್ನಾಟಕ ಮತ್ತು ಕರಾವಳಿಯ ಬಲಾಬಲದ ಮೇಲೆ ಇದರ ಪರಿಣಾಮ ಕಾದು ನೋಡಬೇಕಿದೆ ಎನ್ನುತ್ತಾರೆ ರಾಜಕೀಯ ನಾಯಕರು.
ಇನ್ನು ಜಾತಿ- ಸಮುದಾಯಗಳ ಸಮತೋಲನದ ಬಗ್ಗೆ ಚರ್ಚೆ ಇದೆ. ರಾಜ್ಯದ ಮಟ್ಟಿಗೆ ಹೇಳುವುದಾದರೆ ಲಿಂಗಾಯತ, ಒಕ್ಕಲಿಗ, ಹಿಂದುಳಿದ ವರ್ಗಗಳು, ದಲಿತ ಮತ್ತು ಅಲ್ಪಸಂಖ್ಯಾತ ಸಮುದಾಯಗಳ ನಡುವೆ ಟಿಕೆಟ್ ಹಂಚಿಕೆಯ ಸಮೀಕರಣಗಳು ಬದಲಾಗುತ್ತವೆ. ಹೆಚ್ಚಿನ ಸಮುದಾಯಗಳಿಗೆ ಅವಕಾಶ ಸಿಗಬಹುದು. ವಿಧಾನಸಭಾ ಟಿಕೆಟ್ ಅಥವಾ ಸ್ಥಳೀಯ ಸಂಸ್ಥೆಗಳ ಮಟ್ಟದಲ್ಲಿ ದುಡಿಯುತ್ತಿದ್ದ ಎರಡನೇ ಹಂತದ ನಾಯಕರಿಗೆ ಹೊಸ ಸಂಸದೀಯ ಕ್ಷೇತ್ರಗಳು ಅವಕಾಶ ತೆರೆಯುತ್ತವೆ.
ಪ್ರಸ್ತುತ ಕರ್ನಾಟಕದ ಪ್ರತಿ ಲೋಕಸಭಾ ಕ್ಷೇತ್ರದಲ್ಲಿ ಸರಾಸರಿ 18ರಿಂದ 22 ಲಕ್ಷ ಮತದಾರರಿದ್ದಾರೆ. ಕ್ಷೇತ್ರಗಳ ಸಂಖ್ಯೆ 42ಕ್ಕೆ ಏರಿದರೆ, ಪ್ರತಿ ಕ್ಷೇತ್ರದ ಮತದಾರರ ಸಂಖ್ಯೆ ಸರಾಸರಿ 12ರಿಂದ 15 ಲಕ್ಷಕ್ಕೆ ಇಳಿಯಲಿದೆ. ಇದು ಅಭ್ಯರ್ಥಿಗಳಿಗೆ ಮತದಾರನನ್ನು ತಲುಪಲು ಮತ್ತು ಬೂತ್ ಮಟ್ಟದ ಸಂಘಟನೆ ಬಲಪಡಿಸಲು ನೆರವಾಗುತ್ತದೆ.
ಸಮಗ್ರವಾಗಿ ನೋಡಿದರೆ 5-6 ವಿಧಾನಸಭಾ ಕ್ಷೇತ್ರಕ್ಕೊಬ್ಬರು ಸಂಸದರು ಆಯ್ಕೆಯಾಗುತ್ತಾರೆ.
ಸಂಪುಟದ ಸಂಖ್ಯೆ ಹಿಗ್ಗುವುದರಿಂದ ರಾಜ್ಯದಿಂದ ಸಚಿವರಾಗುವ ಸಂಖ್ಯೆ ಹೆಚ್ಚಬಹುದು.
ರಾಜ್ಯದಿಂದ 14 ಮಹಿಳಾ ಸಂಸದರು ಲೋಕಸಭೆಯಲ್ಲಿ ಪ್ರತಿನಿಧಿಸುವರು.
ರಾಜ್ಯದಲ್ಲಿ ಎಸ್ಸಿ ಎಸ್ಟಿ ಮೀಸಲು ಕ್ಷೇತ್ರಗಳ ಸಂಖ್ಯೆ ಹಿಗ್ಗಲಿದೆ.
ಸಂಸದರ ಜನ ಸಂಪರ್ಕ ಕೊಂಚ ಸುಧಾರಿಸಬಹುದು.
ರಾಜಕೀಯ ಪಕ್ಷಗಳಿಗೆ ಜಾತಿವಾರು ಪ್ರಾತಿನಿಧ್ಯ ಹೆಚ್ಚಿಸಲು ಅನುಕೂಲ.
ಕಳೆದ ಎರಡು ದಶಕಗಳಲ್ಲಿ ಬೆಂಗಳೂರಿನ ಜನಸಂಖ್ಯೆ ತೀವ್ರವಾಗಿ ಬೆಳೆದಿದೆ. ಪ್ರಸ್ತುತ ಬೆಂಗಳೂರು ನಗರ ವ್ಯಾಪ್ತಿಯಲ್ಲಿರುವ 3 ಕ್ಷೇತ್ರಗಳು (ಉತ್ತರ, ದಕ್ಷಿಣ, ಕೇಂದ್ರ) ಮತ್ತು ಬೆಂಗಳೂರು ಗ್ರಾಮಾಂತರ ಸೇರಿ ಒಟ್ಟು 5ರಿಂದ 6 ಲೋಕಸಭಾ ಕ್ಷೇತ್ರಗಳಾಗಿ ವಿಸ್ತರಣೆಯಾಗುವ ಸಾಧ್ಯತೆಯಿದೆ. ಇದರಿಂದ ರಾಜ್ಯದ ರಾಷ್ಟ್ರೀಯ ರಾಜಕಾರಣದಲ್ಲಿ ನಗರ ಮತದಾರರ ಪ್ರಭಾವ ಗಮನಾರ್ಹವಾಗಿ ಏರಿಕೆಯಾಗಲಿದೆ.
ಭೌಗೋಳಿಕವಾಗಿ ವಿಶಾಲವಾಗಿರುವ ಹಾಗೂ ಹೆಚ್ಚಿನ ಜನಸಂಖ್ಯೆ ಹೊಂದಿರುವ ಬೆಳಗಾವಿ, ಕಲಬುರಗಿ, ವಿಜಯಪುರ, ಬಳ್ಳಾರಿ ಹಾಗೂ ರಾಯಚೂರು ಭಾಗಗಳಲ್ಲಿ ಹೆಚ್ಚುವರಿ ಕ್ಷೇತ್ರಗಳು ಸೃಷ್ಟಿಯಾಗಲಿವೆ. ಪ್ರಸ್ತುತ ಒಬ್ಬ ಸಂಸದರು 8 ವಿಧಾನಸಭಾ ಕ್ಷೇತ್ರಗಳನ್ನು ಪ್ರತಿನಿಧಿಸುತ್ತಿದ್ದು, ಹೊಸ ವ್ಯವಸ್ಥೆಯಲ್ಲಿ ಸರಾಸರಿ 5ರಿಂದ 6 ವಿಧಾನಸಭಾ ಕ್ಷೇತ್ರಗಳಿಗೆ ಒಬ್ಬ ಸಂಸದರು ಪ್ರತಿನಿಧಿಸಬಹುದು.
ರಾಜ್ಯದಲ್ಲಿ 2008ರಲ್ಲಿ ಕ್ಷೇತ್ರ ಮರುವಿಂಗಡಣೆಯಾಗಿತ್ತು. 2028ರ ವಿಧಾನಸಭೆ ಚುನಾವಣೆಗೆ ಮರುವಿಂಗಡಣೆ ಸ್ವರೂಪದಲ್ಲಿ ಚುನಾವಣೆ ನಡೆಯಬಹುದೇ ಎಂಬ ಚರ್ಚೆ ನಡೆದಿರುವಾಗಲೇ ಕೇಂದ್ರ ಸರ್ಕಾರ ಪ್ರಸ್ತಾಪಿಸಿರುವ ಮಸೂದೆಯಲ್ಲಿ ಆ ವಿಚಾರ ಪ್ರಸ್ತಾಪವಾಗಿದೆ.
ಅಂದಹಾಗೆ ಸಂವಿಧಾನದ 170ನೇ ವಿಧಿಯ ಪ್ರಕಾರ, ಪ್ರತಿ ಜನಗಣತಿಯ ನಂತರ ಲೋಕಸಭಾ ಕ್ಷೇತ್ರಗಳ ಮರುವಿಂಗಡಣೆ ನಡೆದಾಗಲೇ, ಅದೇ ಪ್ರಾಧಿಕಾರ (ಡೀಲಿಮಿಟೇಶನ್ ಕಮಿಷನ್) ಆಯಾ ರಾಜ್ಯಗಳ ವಿಧಾನಸಭಾ ಕ್ಷೇತ್ರಗಳ ಸಂಖ್ಯೆ ಮತ್ತು ಗಡಿಗಳನ್ನೂ ಮರುನಿಗದಿಪಡಿಸಬೇಕು.
ಭಾರತದ ಚುನಾವಣಾ ವ್ಯವಸ್ಥೆಯಲ್ಲಿ ಒಂದು ಲೋಕಸಭಾ ಕ್ಷೇತ್ರವು ಪೂರ್ಣ ಪ್ರಮಾಣದ ವಿಧಾನಸಭಾ ಕ್ಷೇತ್ರಗಳ ಗುಂಪಾಗಿರುತ್ತದೆ. ಉದಾಹರಣೆಗೆ, ಕರ್ನಾಟಕದಲ್ಲಿ ಪ್ರಸ್ತುತ ಒಂದು ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಸಾಮಾನ್ಯವಾಗಿ ಎಂಟು ವಿಧಾನಸಭಾ ಕ್ಷೇತ್ರಗಳಿವೆ. ಒಂದು ವಿಧಾನಸಭಾ ಕ್ಷೇತ್ರವನ್ನು ತುಂಡರಿಸಿ ಎರಡು ಲೋಕಸಭಾ ಕ್ಷೇತ್ರಗಳಿಗೆ ಹಂಚುವಂತಿಲ್ಲ. ಹೀಗಾಗಿ, ಲೋಕಸಭಾ ಕ್ಷೇತ್ರಗಳ ಗಡಿ ಬದಲಾದಾಗ ವಿಧಾನಸಭಾ ಕ್ಷೇತ್ರಗಳ ಗಡಿಗಳನ್ನೂ ಏಕಕಾಲದಲ್ಲಿ ಮರುವಿಂಗಡಣೆ ಮಾಡಬೇಕಾಗುತ್ತದೆ.
ವಿಧಾನಸಭಾ ಕ್ಷೇತ್ರವೇ ಚುನಾವಣಾ ವ್ಯವಸ್ಥೆಯ ಮೂಲ ಘಟಕ. ಲೋಕಸಭೆ ಮತ್ತು ವಿಧಾನಸಭೆ ಎರಡಕ್ಕೂ ಒಂದೇ ಮತದಾರರ ಪಟ್ಟಿ ಮತ್ತು ಮತಗಟ್ಟೆ ವ್ಯವಸ್ಥೆ ಇರುವುದರಿಂದ ಎರಡನ್ನೂ ಪ್ರತ್ಯೇಕವಾಗಿ ಮಾಡುವುದು ಅಸಾಧ್ಯ ಎಂಬುದು ತಜ್ಞರ ಅಭಿಪ್ರಾಯ.
ಹೆಚ್ಚಳ ಮಾಡಲು ಅವಕಾಶ ನೀಡಿದರೆ 224 ಸದಸ್ಯ ಬಲದ ಕರ್ನಾಟಕ ವಿಧಾನಸಭೆಯ ಬಲಾಬಲ 336ರವರೆಗೆ ವೃದ್ಧಿಸಲು ಅವಕಾಶ ಆಗಲಿದೆ. ಈ ಸಂಖ್ಯೆಯ ಆಧಾರದಲ್ಲಿ ಪುನಾರಚಿಸಿದರೆ ಬೆಂಗಳೂರು ಸೇರಿದಂತೆ ಪ್ರಮುಖ ಜಿಲ್ಲಾ ಕೇಂದ್ರದಲ್ಲಿ ಸ್ಥಾನಗಳು ಹೆಚ್ಚಾಗಲಿವೆ.
ಕ್ಷೇತ್ರ ಮರುವಿಂಗಡಣೆ ಎಂಬುದು ನ್ಯಾಯಬದ್ಧ ಪ್ರಾತಿನಿಧ್ಯ ಕೊಡಲು ಅವಕಾಶ ಆಗಲಿದೆ. ಆದರೆ, ಪ್ರಸ್ತುತ ರಾಜಕೀಯ ಸನ್ನಿವೇಶದಲ್ಲಿ ಉದ್ದೇಶ ಈಡೇರಲು ಸಾಧ್ಯವೇ ಎಂಬ ಪ್ರಶ್ನಾರ್ಥಕ ಚಿಹ್ನೆ ನಮ್ಮ ಮುಂದಿದೆ.
ಯಾವುದೇ ಪಕ್ಷ ಅಧಿಕಾರದಲ್ಲಿ ಇರುವವರು ತಮ್ಮ ಅನುಕೂಲಕ್ಕೆ ತಕ್ಕಂತೆ ಬಳಸಿಕೊಳ್ಳುವುದು ಇತಿಹಾಸದ ಪುಟ ತಿರುವಿ ನೋಡಿದಾಗ ಕಾಣ ಸಿಗುತ್ತದೆ. ಈಗಲೂ ಅದೇ ಪರಿಸ್ಥಿತಿ ಎಂದು ನಿಷ್ಠುರವಾಗಿ ಹೇಳಬಹುದು.
ಇದಕ್ಕೊಂದು ಉದಾಹರಣೆ ಎಂದರೆ ಶಿವಮೊಗ್ಗ ಜಿಲ್ಲೆಯಲ್ಲಿದ್ದ ಚನ್ನಗಿರಿಯನ್ನು ದಾವಣಗೆರೆ ಜಿಲ್ಲೆಗೆ ಸೇರಿಸಿದರು, ಬಳ್ಳಾರಿ ಜತೆಗಿದ್ದ ಹರಪನಹಳ್ಳಿಯನ್ನೂ ಬೇರ್ಪಡಿಸಿದರು. ಇದು ತಮ್ಮ ಪ್ರದೇಶವನ್ನು ಗಟ್ಟಿ ಮಾಡಿಕೊಳ್ಳುವ, ತಮ್ಮ ರಾಜಕೀಯ ನೆಲೆಯನ್ನು ಭದ್ರಪಡಿಸಿಕೊಳ್ಳುವ ಪ್ರಯತ್ನ.
ಇನ್ನು ಒಟ್ಟಾರೆ ಇಡೀ ದೇಶದ ಚಿತ್ರಣ ತೆಗೆದುಕೊಂಡರೆ ಉತ್ತರ ಮತ್ತು ದಕ್ಷಿಣದ ನಡುವಿನ ಕಂದಕ ಸುಧಾರಿಸುವುದಿಲ್ಲ, ಅಪಾಯವೇ ಹೆಚ್ಚು. ಉತ್ತರ ಪ್ರದೇಶಕ್ಕೆ ಲಾಟರಿ ಹೊಡೆದಂತೆ, ಮುಖ್ಯವಾಗಿ ಆಡಳಿತದಲ್ಲಿ ಹಿಂದಿ ಭಾಷಿಕರ ಪ್ರದೇಶದ ಹಿಡಿತ ಇನ್ನಷ್ಟು ಬಿಗಿಯಾಗಲಿದೆ. ದಕ್ಷಿಣಕ್ಕೆ ಅನುಕೂಲ ಆಗುವ ಸಾಧ್ಯತೆ ಕ್ಷೀಣ. ಅಮೆರಿಕದಲ್ಲಿ ಸೆನೆಟ್ ವ್ಯವಸ್ಥೆ ಇದೆ. ಇದರಿಂದ ಪ್ರಾತಿನಿಧ್ಯ ಸಮಾನವಾಗಿರುತ್ತದೆ. ಅಂತಹದ್ದೇ ಸಮಾನ ವ್ಯವಸ್ಥೆಯ ಅಗತ್ಯ ಇಲ್ಲೂ ಇದೆ. ದಕ್ಷಿಣದ ನರಸಿಂಹರಾವ್, ದೇವೇಗೌಡರು ಪ್ರಧಾನಿಯಾದರು. ಇನ್ನು ಮುಂದೆ ದಕ್ಷಿಣದವರಿಗೆ ಅವಕಾಶ ಇನ್ನಷ್ಟು ಕಡಿಮೆಯಾಗುವುದು ನಿಶ್ಚಿತ.
ಕ್ಷೇತ್ರ ಮರುವಿಂಗಡಣೆಯನ್ನು ಮಹಿಳಾ ಮೀಸಲು ವಿಚಾರದ ಜತೆ ಸೇರಿಸಿರುವುದು ವಿರೋಧಾಭಾಸವೇ ಸರಿ. ಮಹಿಳಾ ಮೀಸಲು ಎಂದೋ ಜಾರಿಗೆ ಬರಬೇಕಾಗಿತ್ತು.
ಕೊನೆಯದಾಗಿ ಕ್ಷೇತ್ರ ಮರುವಿಂಗಡಣೆಯಿಂದ ಸಂಸದರ ಸಂಖ್ಯೆ ಹೆಚ್ಚಾಗುತ್ತದೆ. ಹಾಗೆಯೇ ಅವರ ಸೌಲಭ್ಯ ಭತ್ಯೆಗೆ ಹೆಚ್ಚು ಖರ್ಚಾಗಲಿದೆ. ಕೇಂದ್ರದ ಮೇಲೆ ಹೊರೆ ಬೀಳಲಿದೆ. ರಾಜ್ಯದಲ್ಲಿ ವಿಧಾನಸಭಾ ಕ್ಷೇತ್ರ ಮರುವಿಂಗಡಣೆ ಮಾಡಿದರೆ ಅಷ್ಟೊಂದು ದೊಡ್ಡ ಪರಿಣಾಮ ಬೀರುತ್ತದೆ ಎನ್ನಿಸುವುದಿಲ್ಲ. ಲೋಕಸಭೆ ಇರಲಿ, ವಿಧಾನಸಭೆ ಇರಲಿ ಸತತವಾಗಿ ಎರಡು ಬಾರಿ ಮಾತ್ರ ಆಯ್ಕೆ ಆಗಲು ಅವಕಾಶ ಎಂಬುದಾಗಿ ಕಾನೂನು ಮಾಡಲಿ. ಈ ತೀರ್ವನದಿಂದ ಒಂದು ಬದಲಾವಣೆ ನಿರೀಕ್ಷೆ ಮಾಡಬಹುದು. ಹೊಸಬರ ಪ್ರವೇಶಕ್ಕೆ ಅವಕಾಶ ಒದಗಿಬರಲಿದೆ.
| ಪ್ರೊ. ಚಂಬಿ ಪುರಾಣಿಕ್ ರಾಜಕೀಯ ವಿಶ್ಲೇಷಕರು
ಭಾರತದ ಜನಸಂಖ್ಯಾ ಸ್ಥಿರೀಕರಣ ನೀತಿಗಳನ್ನು ಯಶಸ್ವಿಯಾಗಿ ಜಾರಿಗೆ ತಂದ ಕರ್ನಾಟಕ ಮತ್ತು ಇತರ ರಾಜ್ಯಗಳ ರಾಜಕೀಯ ಧ್ವನಿಯನ್ನು ಪ್ರಸ್ತಾವಿತ ಕ್ಷೇತ್ರ ಮರುವಿಂಗಡಣೆ ಪ್ರಕ್ರಿಯೆಯು ಹೇಗೆ ಬಲಪಡಿಸುತ್ತದೆ ಎಂಬುದಕ್ಕೆ ಪ್ರಧಾನಿ ನರೇಂದ್ರ ಮೋದಿ ಉತ್ತರಿಸಬೇಕು. ಕರ್ನಾಟಕಕ್ಕೆ ರಾಜಕೀಯ ಪ್ರಾತಿನಿಧ್ಯವೆಂದರೆ ಕೇವಲ ಸಂಸದರ ಸಂಖ್ಯೆಯಲ್ಲ, ಅದು ನಮ್ಮ ರಾಜಕೀಯ ಅಸ್ಮಿತೆ, ನಮ್ಮ ಸಾಂವಿಧಾನಿಕ ಹಕ್ಕುಗಳು, ರಾಷ್ಟಿ್ರಯ ನೀತಿಗಳ ಮೇಲೆ ಪ್ರಭಾವ ಬೀರುವ ನಮ್ಮ ಸಾಮರ್ಥ್ಯ ಮತ್ತು ಭಾರತೀಯ ಒಕ್ಕೂಟದಲ್ಲಿ ನಮಗಿರುವ ನ್ಯಾಯಯುತ ಸ್ಥಾನಮಾನದ ಪ್ರಶ್ನೆ.
| ಸಿದ್ದರಾಮಯ್ಯ ಮಾಜಿ ಮುಖ್ಯಮಂತ್ರಿ