ಹೊಸಕೋಟೆ ತಾಲೂಕು ಕಚೇರಿಯಲ್ಲಿ ಹಮ್ಮಿಕೊಂಡಿದ್ದ ಜನಸ್ಪಂದನಾ ಸಭೆಯಲ್ಲಿ ಶಾಸಕ ಶರತ್ ಬಚ್ಚೇಗೌಡ ಮಾತನಾಡಿದರು.
ಹೊಸಕೋಟೆ : ಸಾರ್ವಜನಿಕರ ಸಮಸ್ಯೆ ಪರಿಹಾರಕ್ಕಾಗಿ ಜನಸ್ಪಂದನದ ಮೂಲಕ ಅಹವಾಲು ಸ್ವೀಕರಿಸಿ ಒಂದೇ ವೇದಿಕೆಯಲ್ಲಿ ಅಧಿಕಾರಿಗಳಿಗೆ ಸಮಗ್ರ ಸೂಚನೆ ನೀಡಿದರೂ ಕೇವಲ ಹಿಂಬರಹ, ತಿಳುವಳಿ ಪತ್ರ ಬರೆಯುತ್ತ ಕಾಲಹರಣ ಮಾಡಿದರೆ ಸಭೆಗೆ ಅರ್ಥವೇನು?. ಮುಂದಿನ ಸಭೆಗಳಿಗೆ ಸಾರ್ವಜನಿಕರು ಸಮಸ್ಯೆ ಹೇಳಲು ಮುಂದೆ ಬರುತ್ತಾರೆಯೇ? ಎಂದು ಶಾಸಕ ಶರತ್ ಬಚ್ಚೇಗೌಡ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.
ನಗರದ ತಾಲೂಕು ಕಚೇರಿಯಲ್ಲಿ ಹಮ್ಮಿಕೊಂಡಿದ್ದ 3ನೇ ಜನಸ್ಪಂದನ ಸಭೆಯಲ್ಲಿ ಮಾತನಾಡಿದ ಅವರು, ಸಾರ್ವಜನಿಕರ ಅಹವಾಲು ಸ್ವೀಕರಿಸುವ ಮುನ್ನ ಕಳೆದ ಬಾರಿ ಸ್ವೀಕರಿಸಿದ್ದ 104 ಅಹವಾಲುಗಳು ಹಾಗೂ ಅದಕ್ಕೂ ಮುನ್ನ 73 ಅಹವಾಲುಗಳ ಪೈಕಿ ಶೇ.74ರಷ್ಟು ಸಮಸ್ಯೆ ಬಗೆಹರಿದಿದ್ದು, ಇನ್ನೂ ಶೇ.26ರಷ್ಟು ಅಹವಾಲುಗಳು ವಿವಿಧ ಕಾರಣಗಳಿಂದ ಬೇರೆ ಬೇರೆ ಇಲಾಖೆಯಲ್ಲಿ ಉಳಿದಿವೆ. ಸಭೆಯಲ್ಲಿ ಹೆಚ್ಚಾಗಿ ಜಮೀನು ಸಂಬಂಧಿತ ಅಹವಾಲುಗಳ ಸಂಖ್ಯೆ ಹೆಚ್ಚಾಗಿದೆ. ಸರ್ವರ್, ಟೆಕ್ನಿಕಲ್ ಸಮಸ್ಯೆ ಜತೆಗೆ ಎಸ್ಐಆರ್ ಎಂಬ ಉತ್ತರಗಳು ಗ್ರಾಮ ಲೆಕ್ಕಾಧಿಕಾರಿಗಳು ಹಾಗೂ ಕಂದಾಯಾಧಿಕಾರಿಗಳಿಂದ ಬರುತ್ತಿದ್ದು, ಇದು ಸಮಂಜಸವಲ್ಲ. ಸರ್ವರ್ ಹಾಗೂ ಟೆಕ್ನಿಕಲ್ ಸಮಸ್ಯೆಗೆ ಸಂಬಂಧಪಟ್ಟ ಇಲಾಖೆಗೆ ಪತ್ರ ಬರೆಯಲು ತಹಸೀಲ್ದಾರ್ ಶೀತಲ್ಗೆ ತಿಳಿಸಿದರು.
ತಾಲೂಕಿನ ಹಲವು ಗ್ರಾಮಗಳಲ್ಲಿ ಬೆಂಗಳೂರಿನ ಕಸ ತಂದು ವಿಲೇವಾರಿ ನೆಪದಲ್ಲಿ ಪರಿಸರ ಮಾಲಿನ್ಯಕ್ಕೆ ಕಾರಣರಾಗುತ್ತಿದೆ. ಇದರಲ್ಲಿ ವಿದ್ಯುತ್ ಕೇಬಲ್ ಸುಟ್ಟು ಅದರಲ್ಲಿನ ತಾಂಬ್ರ ಸಂಗ್ರಹಿಸುವುದು, ಕೋಳಿ ಕಸ ಬಿಸಾಡಿ ಬೆಂಕಿ ಹಚ್ಚುತ್ತಿರುವ ದೂರುಗಳು ಬಂದಿದ್ದು, ಈ ಭಾಗದ ರೈತರ ಬೆಳೆಗಳಿಗೆ ಹಾನಿಯಾಗುತ್ತಿದೆ. ಇದನ್ನು ಪ್ರಶ್ನಿಸಿದಲ್ಲಿ ಕಿಡಿಗೇಡಿಗಳಿಂದ ಜೀವ ಬೆದರಿಕೆ ಒಡ್ಡಲಾಗುತ್ತಿದೆ ಎಂಬ ಆರೋಪಗಳಿವೆ. ತಾಲೂಕಿನ ಚೀಮಂಡಹಳ್ಳಿ, ಸೂಲಿಬೆಲೆ, ಇಂಜನಹಳ್ಳಿ, ಗಣಗಲು ಕೆರೆ ಭಾಗದಲ್ಲಿ ಹಾಗೂ ಮೇಡಿ ಮಲ್ಲಸಂದ್ರ ಗ್ರಾಮಗಳ ಆಸು ಪಾಸಿನಲ್ಲಿ ಈ ಕೃತ್ಯ ನಡೆಯುತಿದ್ದು, ರಾತ್ರೋರಾತ್ರಿ ಕಸದ ಲಾರಿಗಳು ಬಂದು ಕಸ ಸುರಿದು ಹೋಗುತ್ತಿವೆ. ಈ ಬಗ್ಗೆ ಪೊಲೀಸ್ ಇಲಾಖೆ ರಾತ್ರಿ ಗಸ್ತನ್ನು ಹೆಚ್ಚಿಸಿ ಕಸ ಸುರಿಯುವವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಡಿವೈಎಸ್ಪಿ ಮಲ್ಲೇಶ್ಗೆ ಶಾಸಕರು ಸೂಚಿಸಿದರು.
ಈ ಬಾರಿ ಒಟ್ಟು 60 ಅಹವಾಲುಗಳು ಬಂದಿದ್ದು, ಮುಂದಿನ ಸಭೆಯಲ್ಲಿ ಸಮಸ್ಯೆ ಬಗೆಹರಿದಿರುವ ಸಂಖ್ಯೆ ಹೆಚ್ಚಿರಬೇಕು. ಯಾವುದೇ ಕಾರಣ ಹೇಳುವಂತಿಲ್ಲ ಎಂದು ಎಚ್ಚರಿಸಿದ ಶಾಸಕರು, ಆಡಳಿತದಲ್ಲಿ ವೇಗ ಹೆಚ್ಚಾಗಬೇಕು, ಸಾರ್ವಜನಿಕರು ಸರ್ಕಾರಿ ಕಚೇರಿಗಳಿಗೆ ಅಲೆದಾಡುವುದು ಕಡಿಮೆಯಾಗಬೇಕು ಎಂದು ನಿರ್ದೇಶನ ನೀಡಿದರು.
ತಹಸೀಲ್ದಾರ್ ಶೀತಲ್, ಇಒ ಮುನಿಯಪ್ಪ, ಡಿವೈಎಸ್ಪಿ ಮಲ್ಲೇಶ್, ನಗರಸಭೆ ಆಯುಕ್ತ ನೀಲಾ ಲೋಚನ ಪ್ರಭು, ಕ್ಷೇತ್ರ ಶಿಕ್ಷಣಾಧಿಕಾರಿ ಪದ್ಮನಾಭ್, ಗ್ರಾಮ ಲೆಕ್ಕಾಧಿಕಾರಿಗಳು, ಕಂದಾಯಾಧಿಕಾರಿಗಳು, ಶಿರಸ್ತೇದಾರ್ ಹಾಗೂ ಇತರರು ಇದ್ದರು.