ಬೆಂಗಳೂರು: ಮಾನವನ ಜೀವನದ ಪ್ರತಿ ಕ್ಷೇತ್ರದಲ್ಲೂ ಕೃತಕ ಬುದ್ಧಿಮತ್ತೆ (ಎಐ) ತಂತ್ರಜ್ಞಾನ ಕ್ರಾಂತಿಕಾರಕ ಬದಲಾವಣೆ ತರುತ್ತಿದೆ ಎಂದು ಆದಿಚುಂಚನಗಿರಿ ಮಠದ ಪೀಠಾಧ್ಯಕ್ಷ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಅಭಿಪ್ರಾಯಪಟ್ಟರು.
‘ಅಸೋಸಿಯೇಷನ್ ಆಫ್ ಕನ್ಸಲ್ಟಿಂಗ್ ಸಿವಿಲ್ ಇಂಜಿನಿಯರ್ಸ್ ಬೆಂಗಳೂರು ಕೇಂದ್ರ, ನಿಮ್ಹಾನ್ಸ್ ಕನ್ವೆನ್ಷನ್ ಸೆಂಟರ್‌ನಲ್ಲಿ ಆಯೋಜಿಸಿದ್ದ ‘ಇಂಜಿನಿಯರ್ಸ್ ಡೇ’ ಕಾರ್ಯಕ್ರಮದಲ್ಲಿ ಶ್ರೀಗಳು ಆಶೀರ್ವಚನ ನೀಡಿದರು.
ದಿನೇದಿನೆ ತಂತ್ರಜ್ಞಾನದಲ್ಲಿ ಬದಲಾವಣೆಯಾಗುತ್ತಿದೆ. ಎಐ ತಂತ್ರಜ್ಞಾನವು ಮನುಷ್ಯರು ಗಂಟೆಗಟ್ಟಲೆ ಮಾಡುವ ಕೆಲಸಗಳನ್ನು ಕೆಲ ಸೆಕೆಂಡುಗಳಲ್ಲಿ ಮಾಡುತ್ತದೆ. ಇದನ್ನು ಅರ್ಥಪೂರ್ಣವಾಗಿ ಸಾರ್ವಜನಿಕರ ಒಳತಿಗಾಗಿ ಹೇಗೆ ಬಳಸಿಕೊಳ್ಳಬೇಕು ಎಂಬುದು ಮುಖ್ಯವಾಗುತ್ತದೆ. ದೇಶದ ಪ್ರಗತಿ ಮತ್ತು ಅಭಿವೃದ್ಧಿಯಲ್ಲಿ ಇಂಜಿನಿಯರ್‌ಗಳ ಕೊಡುಗೆ ಅತ್ಯಮೂಲ್ಯವಾಗಿದೆ. ಭಾರತದಂತಹ ವೇಗವಾಗಿ ಬೆಳೆಯುತ್ತಿರುವ ರಾಷ್ಟ್ರದಲ್ಲಿ ಮೂಲಸೌಕರ್ಯದಿಂದ ಹಿಡಿದು ಆಧುನಿಕ ತಂತ್ರಜ್ಞಾನದವರೆಗೆ ಪ್ರತಿಯೊಂದು ಕ್ಷೇತ್ರದಲ್ಲೂ ಇಂಜಿನಿಯರ್‌ಗಳು ಪ್ರಮುಖ ಪಾತ್ರ ವಹಿಸುತ್ತಿದ್ದಾರೆ ಎಂದು ಶ್ರೀಗಳು ತಿಳಿಸಿದರು.
ಸರ್ ಎಂ. ವಿಶ್ವೇಶ್ವರಯ್ಯ ಅವರು ಭಾರತ ಕಂಡ ಶ್ರೇಷ್ಠ ಇಂಜಿನಿಯರ್, ಆಡಳಿತಗಾರ ಮತ್ತು ದಾರ್ಶನಿಕ. ಕರ್ನಾಟಕದ ಪ್ರಗತಿ ಹಾಗೂ ಭಾರತದ ಕೈಗಾರಿಕಾ ರಂಗಕ್ಕೆ ಅವರು ನೀಡಿದ ಕೊಡುಗೆ ಅನನ್ಯವಾದದ್ದು. ಭಾರತವನ್ನು ಜಾಗತಿಕ ಐಟಿ ಹಬ್ (ಐಟಿ ಹಬ್) ಆಗಿ ಪರಿವರ್ತಿಸುವಲ್ಲಿ ಇಂಜಿನಿಯರ್‌ಗಳ ಶ್ರಮ ದೊಡ್ಡದಿದೆ. ಬೆಂಗಳೂರು ಇಂದು ವಿಶ್ವದ ಸಿಲಿಕಾನ್ ವ್ಯಾಲಿ ಎಂದು ಗುರುತಿಸಿಕೊಳ್ಳಲು ಇವರೇ ಕಾರಣ. ಸುಸ್ಥಿರ ನಗರಗಳ ಬೆಳವಣಿಗೆ ಒತ್ತು ಕೊಡುವ ಮೂಲಕ ಪರಿಸರ ಸಂರಕ್ಷಿಸುವ ಕೆಲಸಕ್ಕೆ ಇಂಜಿನಿಯರ್‌ಗಳು ಒತ್ತು ನೀಡುವ ಅಗತ್ಯವಿದೆ ಎಂದು ಶ್ರೀಗಳು ಹೇಳಿದರು.
ಇದೇ ಸಂದರ್ಭದಲ್ಲಿ ಇಂಜಿನಿಯರಿಂಗ್ ಕ್ಷೇತ್ರದಲ್ಲಿ ಸಾಧನೆಗೈದ ಸಾಧಕರನ್ನು ಸನ್ಮಾನಿಸಲಾಯಿತು. ಅಸೋಸಿಯೇಷನ್ ಆಫ್ ಕನ್ಸಲ್ಟಿಂಗ್ ಸಿವಿಲ್ ಇಂಜಿನಿಯರ್ಸ್ ( ಎಸಿಸಿಇ) ಅಧ್ಯಕ್ಷ ರಾಜೇಂದ್ರ ಕಲ್ಬಾವಿ ರಾವ್, ಉಪಾಧ್ಯಕ್ಷ ಜೆ.ಪ್ರೇಮ್‌ಕುಮಾರ್, ಎಸಿಸಿಇ ಬೆಂಗಳೂರು ಕೇಂದ್ರದ ಅಧ್ಯಕ್ಷ ಸವೀನ ತೀರ್ಥಹಳ್ಳಿ ಸೇರಿ ಮತ್ತಿತರರು ಉಪಸ್ಥಿತರಿದ್ದರು.
ದೇಶಕ್ಕೆ ಇಂಜಿನಿಯರ್‌ಗಳ ಕೊಡುಗೆ ಅಪಾರವಾದದ್ದು. ನಿರಂತರ ಒತ್ತಡದಿಂದ ಕಾರ್ಯ ನಿರ್ವಹಿಸುತ್ತಿರುವ ಇಂಜಿನಿಯರ್‌ಗಳು ತಮ್ಮ ಆರೋಗ್ಯದ ಕಡೆಗೆ ವಿಶೇಷ ಗಮನ ಹರಿಸಬೇಕಿದೆ. ದೈಹಿಕ ಮತ್ತು ಮಾನಸಿಕ ಆರೋಗ್ಯ ನಿರ್ವಹಣೆಗೆ ಹೆಚ್ಚಿನ ಒತ್ತು ಕೊಡಬೇಕು.
- ಡಾ.ಸಿ.ಎನ್. ಮಂಜುನಾಥ್, ಸಂಸದ.