ಮೆಕ್ಕಾ ಪ್ರವಾಸದಲ್ಲಿರುವ ವಿಜಯಪುರದ ಜಾವೀದ್‌ಅಹ್ಮದ್ ಕರ್ನಾಳ ಕುಟುಂಬ. 
ರಾಜ್ಯ

ಹೌತಿ ಬಂಡುಕೋರರ ದಾಳಿ, ಸೌದಿಯಲ್ಲಿ ವಿಜಯಪುರದ ಕರ್ನಾಳ ಕುಟುಂಬ ಸುರಕ್ಷಿತ

ವಿಮಾನಯಾನದಲ್ಲಿ ಕೊಂಚ ವಿಳಂಬ * ಭಾರತೀಯರಿಗಿಲ್ಲ ಸದ್ಯಕ್ಕೆ ಸಮಸ್ಯೆ

ವಿಜಯಪುರ: ಯೆಮೆನ್‌ನ ಹೌತಿ ಬಂಡುಕೋರರ ದಾಳಿ ನಡುವೆಯೂ ಸೌದಿ ಅರೇಬಿಯಾ ಪ್ರವಾಸದಲ್ಲಿರುವ ವಿಜಯಪುರದ ನಿವಾಸಿಗಳು ಸುರಕ್ಷಿತವಾಗಿದ್ದಾರೆ.

ಇಲ್ಲಿನ ಜಾವೀದಅಹ್ಮದ್ ಕರ್ನಾಳ ಎಂಬುವರ ಕುಟುಂಬದ 20ಕ್ಕೂ ಅಧಿಕ ಸದಸ್ಯರು ಸೌದಿ ಅರೇಬಿಯಾದ ಪ್ರವಾಸದಲ್ಲಿದ್ದಾರೆ. ಕಳೆದ ಅ.16ರಂದೇ ‘ಉಮ್ರಾ’ ಕೈಗೊಳ್ಳಲಾಗಿದ್ದು, ಸುರಕ್ಷಿತವಾಗಿ ಪ್ರವಾಸ ಕೈಗೊಂಡಿರುವುದಾಗಿ ತಿಳಿಸಿದ್ದಾರೆ. ಈಗಾಗಲೇ ಮೆಕ್ಕಾ ಪ್ರವಾಸ ಪೂರ್ಣಗೊಳಿಸಿದ್ದು, ಅಲ್ಲಿನ ಮ್ಯೂಸಿಯಂ, ಮಸೀದಿ ಸೇರಿ ಅನೇಕ ಧಾರ್ಮಿಕ ಸ್ಥಳಗಳನ್ನು ಕಣ್ತುಂಬಿಕೊಂಡಿದ್ದಾಗಿ ತಿಳಿಸಿದ್ದಾರೆ. ಝಂಝಂ (ಪವಿತ್ರ) ನೀರು ಎಲ್ಲಿಂದ ಬಂತು ಎಂಬುದನ್ನು ಕಂಡು ಶನಿವಾರ ಮದೀನಾಗೆ ಪ್ರಯಾಣ ಬೆಳೆಸಿದ್ದಾಗಿ ಜಾವೀದ್‌ಅಹ್ಮದ್ ಕರ್ನಾಳ್ ತಿಳಿಸಿದ್ದಾರೆ.

ಯೆಮೆನ್ ಬಂಡುಕೋರರ ದಾಳಿಯಿಂದ ಸುಮಾರು 800 ಕಿಮೀ ಅಂತರದಲ್ಲಿರುವುದಾಗಿ ಜಾವೀದ್ ತಿಳಿಸಿದ್ದು, ಸದ್ಯಕ್ಕೆ ಯಾವುದೇ ಅಪಾಯ ಮತ್ತು ಆತಂಕ ಇಲ್ಲವೆಂದಿದ್ದಾರೆ. ಕೆಲವು ವಿಮಾನಯಾನ ಸೌಲಭ್ಯಗಳಲ್ಲಿ ತೊಂದರೆ ಇರುವುದಾಗಿ ತಿಳಿಸಿದ್ದಾರಲ್ಲದೇ ತಾವು ಮುಂಗಡ ಟಿಕೆಟ್ ಕಾಯ್ದಿರಿಸಿದ ವಿಮಾನಯಾನಕ್ಕೆ ಯಾವುದೇ ಸಮಸ್ಯೆ ಇಲ್ಲ. ಅ. 31ಕ್ಕೆ ಭಾರತಕ್ಕೆ ಮರಳಲು ವಿಮಾನ ಯಾನ ಸೌಲಭ್ಯ ಇರುವುದಾಗಿ ‘ವಿಜಯವಾಣಿ’ಗೆ ತಿಳಿಸಿದ್ದಾರೆ.