ಆಲೂರು ತಾಲೂಕಿನ ಕಣದಹಳ್ಳಿ ಗ್ರಾಮದಲ್ಲಿ ಬೆಂಕಿ ತಗುಲಿ 3 ಮನೆಗಳು ಸಂಪೂರ್ಣ ಸುಟ್ಟು ಹೋದ ಸ್ಥಳಕ್ಕೆ ಶಾಸಕ ಸಿಮೆಂಟ್ ಮಂಜು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಕೆ.ಎಸ್. ಮಂಜೇಗೌಡ ಹನುಮಂತೇಗೌಡ, ಮನು ಇತರರಿದ್ದರು.
ಆಲೂರು: ತಾಲೂಕಿನ ಪಾಳ್ಯ ಹೋಬಳಿ ಕಣದಹಳ್ಳಿ ಗ್ರಾಮದಲ್ಲಿ ಮೂರು ಮನೆಗಳಿಗೆ ಬೆಂಕಿ ತಗುಲಿ ಸಂಪೂರ್ಣ ಸುಟ್ಟುಹೋಗಿದ್ದು, ಮನೆಯಲ್ಲಿದ್ದ ದಿನಬಳಕೆಯ ವಸ್ತುಗಳೊಂದಿಗೆ ಲಕ್ಷಾಂತರ ರೂ. ಬೆಳೆಬಾಳುವ ಚಿನ್ನ, ನಗದು ಸೇರಿದಂತೆ ಇತರ ವಸ್ತುಗಳು ನಾಶಗೊಂಡಿದೆ.
ಗ್ರಾಮದ ಈರೇಗೌಡ, ಚಂದ್ರೇಗೌಡ, ಸಣ್ಣಪ್ಪಗೌಡ ಎಂಬವರು ಮನೆಗಳನ್ನು ಕಳೆದುಕೊಂಡವರು. ಕಣದಹಳ್ಳಿಯಲ್ಲಿ ಬುಧವಾರ ಮಧ್ಯಾಹ್ನ ಏಕಾಏಕಿ ಒಂದು ಮನೆಗೆ ಬೆಂಕಿ ಕಾಣಿಸಿಕೊಂಡಿದೆ. ಎಚ್ಚೆತ್ತುಕೊಂಡ ಕುಟುಂಬ ಮನೆಗಳಿಂದ ಹೊರಬಂದು ಕೂಗಿಕೊಂಡಾಗ ಅಕ್ಕಪಕ್ಕದ ಗ್ರಾಮಸ್ಥರು ಓಡಿ ಬಂದು ಬೆಂಕಿ ನಂದಿಸಲು ಪ್ರಯತ್ನ ಮಾಡಿದರು. ಆದರೆ ಬೆಂಕಿಯ ಜ್ವಾಲೆ ಹೆಚ್ಚಾಗಿದ್ದರಿಂದ ಹತೋಟಿಗೆ ಬಾರದೆ ಪಕ್ಕದಲ್ಲಿರುವ ಮತ್ತೆರಡು ಮನೆಗಳಿಗೂ ಬೆಂಕಿ ಆವರಿಸಿ, ಮೂರು ಮನೆಗಳು ಸಂಪೂರ್ಣ ಸುಟ್ಟು ಹೋಗಿವೆ. ಸುದ್ದಿ ತಿಳಿದ ಕೂಡಲೆ ಅಗ್ನಿಶಾಮಕ ಸಿಬ್ಬಂದಿ ಗ್ರಾಮಕ್ಕೆ ಆಗಮಿಸಿ ಬೆಂಕಿಯನ್ನು ನಂದಿಸಲು ಹರಸಾಹಸಪಟ್ಟರು.
ಮನೆಯಲ್ಲಿ ಸಂಗ್ರಹಿಸಿಟ್ಟದ್ದ ದವಸ ಧಾನ್ಯಗಳು, ಬಟ್ಟೆ, ಚಿನ್ನಾಭರಣಗಳು ಹಾಗೂ ನಗದು ಹಣ ಸೇರಿ ಲಕ್ಷಾಂತರ ರೂ. ಹಾನಿಯಾಗಿವೆ. ಎಲ್ಲವನ್ನು ಕಳೆದುಕೊಂಡು ಮೂರು ಕುಟುಂಬದವರು ಕಂಗಾಲಾಗಿದ್ದಾರೆ. ಬೆಂಕಿ ಅವಘಡದಿಂದ ಆಸ್ತಿ ಕಳೆದುಕೊಂಡು ಕುಟುಂಬಗಳ ಸದಸ್ಯರಿಗೆ ಸರ್ಕಾರದಿಂದ ಸೂಕ್ತ ಪರಿಹಾರ ನೀಡಬೇಕೆಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.
ಸುದ್ದಿ ತಿಳಿದು ಸ್ಥಳಕ್ಕೆ ಆಗಮಿಸಿದ ಶಾಸಕ ಸಿಮೆಂಟ್ ಮಂಜು ಅವರು ಸಂತ್ರಸ್ತ ಕುಟುಂಬಗಳಿಗೆ ಸಾಂತ್ವನ ಹೇಳಿ, ಸರ್ಕಾರದಿಂದ ಪರಿಹಾರ ಒದಗಿಸುವ ಭರವಸೆ ನೀಡಿದರು. ಸಂಬಂಧಪಟ್ಟ ಅಧಿಕಾರಿಗಳು ತಕ್ಷಣವೇ ಹಾನಿ ಪರಿಶೀಲಿಸಿ ವರದಿ ಸಿದ್ಧಪಡಿಸಬೇಕು. ಸಂತ್ರಸ್ತರಿಗೆ ಸರ್ಕಾರದ ವತಿಯಿಂದ ಸಿಗಬೇಕಾದ ಗರಿಷ್ಠ ಪರಿಹಾರವನ್ನು ತ್ವರಿತವಾಗಿ ವಿತರಿಸಲು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ತಾಲೂಕು ಜೆಡಿಎಸ್ ಅಧ್ಯಕ್ಷ ಕೆ ಎಸ್ ಮಂಜೇಗೌಡ, ಬಿಜೆಪಿಯ ರೈತ ಮೋರ್ಚಾ ಅಧ್ಯಕ್ಷ ಹನುಮಂತೇಗೌಡ, ಗ್ರಾಮ ಲೆಕ್ಕಾಧಿಕಾರಿ ಮನು ಸೇರಿದಂತೆ ಇತರರಿದ್ದರು.