ಶಹಾಬಾದ್ ಹೊರ ವಲಯದ ವರ್ತುಲ ರಸ್ತೆಯ ಪಕ್ಕದಲ್ಲಿ ಮನೆಯ ಅವಶೇಷ ಹಾಕಿರುವುದು.
- ಮುಖ್ಯ ರಸ್ತೆ ಪಕ್ಕದಲ್ಲಿಯೇ ಕಟ್ಟಡದ ಅವಶೇಷ ಎಸೆಯುತ್ತಿರುವ ಜನ
- ಸುಗಮ ಸಂಚಾರಕ್ಕೆ ಕಿರಿಕಿರಿ
ಶಹಾಬಾದ್: ಸಾರ್ವಜನಿಕರು ತಮ್ಮ ಕರ್ತವ್ಯಗಳನ್ನು ಅರಿತು ಉತ್ತಮ ನಾಗರಿಕರಾಗಿ ವರ್ತಿಸಿದಾಗ ಮಾತ್ರ ಸುಂದರ ಹಾಗೂ ಮಾದರಿ ನಗರ ನಿರ್ಮಾಣ ಸಾಧ್ಯ. ಆದರೆ ಶಹಾಬಾದ್ ಜನತೆ ಇದಕ್ಕೆ ತದ್ವಿರುದ್ಧವಾಗಿದ್ದು, ಎಲ್ಲೆಂದರಲ್ಲಿ ಕಸ ಎಸೆಯುತ್ತಿರುವುದರಿಂದ ನಗರಸಭೆಗೆ ತಲೆನೋವಾಗಿ ಪರಿಣಮಿಸಿದೆ.
ಹೊನಗುಂಟಾ ರಸ್ತೆಯ ಸಿದ್ದಾರ್ಥ ವ್ಯತ್ತದಿಂದ ಎಪಿಎಂಸಿ ಗೇಟ್ವರೆಗಿನ ವರ್ತುಲ ರಸ್ತೆಯಲ್ಲಿನ ಒತ್ತುವರಿಯನ್ನು ತೆರವುಗೊಳಿಸಿ ಅಗಲೀಕರಣ ಮಾಡಲಾಗಿತ್ತು. ಆದರೆ ಇದೀಗ ಶರಣನಗರ ಫಲಕದಿಂದ ಎಪಿಎಂಸಿ ಗೇಟ್ವರೆಗಿನ ರಸ್ತೆ ಪಕ್ಕದಲ್ಲಿ ಜನರು ಮನೆ ಕಟ್ಟಡದ ಅವಶೇಷಗಳು ತಂದು ಬಿಸಾಡುತ್ತಿದ್ದಾರೆ. ಮಣ್ಣು, ಸಿಮೆಂಟ್ನ ಗೋಡೆಗಳು ಸೇರಿ ಇನ್ನಿತರ ಅವಶೇಷಗಳನ್ನು ಟಿಪ್ಪರ್, ಟ್ರಾಕ್ಟರ್ಗಳ ಮೂಲಕ ರಸ್ತೆ ಪಕ್ಕದಲ್ಲಿ ತಂದು ಬಿಸಾಡುತ್ತಿದ್ದಾರೆ. ಅಲ್ಲದೆ ಹೊನಗುಂಟಾ ರಸ್ತೆಯಿಂದ ನಿಜಾಮ ಬಜಾರ್ವರೆಗಿ ರಸ್ತೆಯ ಸ್ಥಿತಿ ಇದೇ ಆಗಿದೆ.
ಕಸ ಹಾಕುತ್ತಿರುವುದರಿಂದ ರಸ್ತೆ ಇಕ್ಕಟ್ಟಾಗಿದ್ದು, ಸುಗಮ ಸಂಚಾರಕ್ಕೆ ತೊಂದರೆ ಆಗುತ್ತಿದೆ. ಅಲ್ಲದೆ ಮಳೆಗಾಲದಲ್ಲಿ ನೀರು ರಸ್ತೆ ಪಕ್ಕಕ್ಕೆ ಹರಿದು ಹೋಗದೆ ರಸ್ತೆ ಮೇಲೆ ನಿಲ್ಲುತ್ತಿವೆ. ಇನ್ನು ರಸ್ತೆ ಪಕ್ಕದಲ್ಲಿ ಅರಣ್ಯ ಇಲಾಖೆಯಿಂದ ನೆಟ್ಟಿದ್ದ ಸಸಿಗಳು ಮನೆಯ ಅವಶೇಷಗಳಡಿ ಸಿಲುಕಿ ಹಾಳಾಗಿವೆ. ರಾತ್ರಿ ಹೊತ್ತು ತ್ಯಾಜ್ಯ ಎಸೆಯುತ್ತಿರುವುದರಿಂದ ಕಡಿವಾಣ ಹಾಕಲು ಸಾಧ್ಯವಾಗುತ್ತಿಲ್ಲ ಎಂಬುದು ನಗರಸಭೆ ಸಿಬ್ಬಂದಿಯ ಅಳಲಾಗಿದೆ.
"
ಶಹಾಬಾದ್ ಹೊರ ವಲಯದ ಜೇವರ್ಗಿ ವರ್ತುಲ ರಸ್ತೆ ಪಕ್ಕದಲ್ಲಿ ಕಟ್ಟಡಗಳ ತ್ಯಾಜ್ಯ ಹಾಕುತ್ತಿರುವುದು ಗಮನಕ್ಕೆ ಬಂದಿದೆ. ಶ್ರೀದಲ್ಲಿಯೇ ಸ್ವಚ್ಛಗೊಳಿಸಲಾಗುವುದು. ರಾತ್ರಿ ಸಮಯದಲ್ಲಿ ಕಸ ಹಾಕುತ್ತಿದ್ದು, ಸಿಬ್ಬಂದಿಗೆ ನಿಗಾ ವಹಿಸಲು ಸೂಚನೆ ನೀಡಿದ್ದೇನೆ. ತ್ಯಾಜ್ಯ ಚಲ್ಲುವ ಟ್ರಾಕ್ಟರ್, ಟಿಪ್ಪರ್ಗಳ ಮೇಲೆ ಹಾಗೂ ಮನೆಗಳ ಮಾಲೀಕರ ಮೇಲೆ ಕಾನೂನು ಕ್ರಮ ಕೈಗೊಳ್ಳುತ್ತೇನೆ.
— > ಮೈನೋದ್ದಿನ್, ಹಿರಿಯ ನೈರ್ಮಲ್ಯ ಅಧಿಕಾರಿ, ನಗರಸಭೆ ಶಹಾಬಾದ್