ನೀಲಕಂಠ ಸಿದ್ದಪ್ಪ ರೂಡಗಿಯವರ ಮನೆಯಲ್ಲಿರಾತ್ರಿ ಕಳ್ಳತನವಾಗಿರುವುದು. 
ರಾಜ್ಯ

ಗೊಳಸಂಗಿಯಲ್ಲಿ ಮನೆ ಕಳ್ಳತನ

ಪ್ರಮುಖ ಮುಖ್ಯಾಂಶಗಳು

  • ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣಗಳ ಕಳ್ಳತನ
  • ಬೆಚ್ಚಿಬಿದ್ದ ಜನತೆ
ಗೊಳಸಂಗಿ : ಗ್ರಾಮದಲ್ಲಿ ಭಾನುವಾರ ರಾತ್ರಿ ಮನೆ ಕಳ್ಳನವಾಗಿದ್ದು, ಮನೆಯಲ್ಲಿದ್ದ ಲಕ್ಷಾಂತರ ರೂ., ಚಿನ್ನಾಭರಣಗಳನ್ನು ಕಳ್ಳರು ದೋಚಿದ್ದಾರಲ್ಲದೇ, ಮೂರು ಬೈಕ್‌ಗಳ ಕಳ್ಳತನಕ್ಕೆ ಯತ್ನಿಸಿದ್ದಾರೆ.
ಇಂದಿರಾ ನಗರ ಹೊರ ವಲಯದ ನಿವಾಸಿ ನೀಲಕಂಠ ಸಿದ್ದಪ್ಪ ರೂಡಗಿ ಎಂಬುವವರ ಮನೆಯಲ್ಲಿ ಕಳ್ಳತನವಾಗಿದ್ದು, ತಿಜೋರಿ ಬೀಗ ಮುರಿದ ಕಳ್ಳರು ಅದರಲ್ಲಿದ್ದ ತಲಾ 10 ಗ್ರಾಂ ತೂಕದ 2 ಚಿನ್ನದ ನೆಕ್ಲೆಸ್, 5 ಗ್ರಾಂ ತೂಕದ ಕಿವಿಯೋಲೆ, 2 ಸಣ್ಣ ಉಂಗುರಗಳು, 11 ತೊಲೆ ಬೆಳ್ಳಿ ಸೇರಿ ಲಕ್ಷಾಂತರ ರೂ., ಮೌಲ್ಯದ ಆಭರಣಗಳು ಕಳ್ಳತನವಾಗಿವೆ ಎಂದು ಮನೆಯೊಡತಿ ರೇಣುಕಾ ನೀಲಕಂಠ ರೂಡಗಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಇಂದಿರಾ ನಗರದ ಇನ್ನೊಂದು ಬೀದಿಯ ಪ್ರತ್ಯೇಕ ಮೂರು ಮನೆಗಳ ಆವರಣದಲ್ಲಿ ನಿಲ್ಲಿಸಿದ ಮೂರು ಬೈಕ್‌ಗಳನ್ನು ಕೂಡ ಕಳ್ಳತನ ಮಾಡಲು ಯತ್ನಿಸಿ ವಿಲವಾಗಿದೆ. ಬೈಕ್‌ನ ಹ್ಯಾಂಡಲ್ ಲಾಕ್ ಮಾಡಲಾಗಿದ್ದರೂ ಸ್ವಲ್ಪ ದೂರ ತಳ್ಳುತ್ತ ಸಾಗಿ ಪರಾರಿ ಮಾಡಲು ಕಳ್ಳರು ಯತ್ನಿಸಿದ್ದಾರೆ. ಅದು ಕಷ್ಟ ಸಾಧ್ಯವಾಗುತ್ತಿದ್ದಂತೆಯೇ ಒಂದು ಬೈಕ್‌ನ್ನು ನಜ್ಜು ಗುಜ್ಜುಮಾಡಿ, ಬಾಕಿ ಉಳಿದೆಲ್ಲ ಬೈಕ್‌ಗಳನ್ನು ಅಲ್ಲಲ್ಲಿ ಬಿಟ್ಟು ಪರಾರಿಯಾಗಿದ್ದಾರೆ.
ಮನೆಗಳಿಗೆ ಬೀಗ : ಇಂದಿರಾ ನಗರದ ನೀಲಕಂಠ ರೂಡಗಿ ಅವರ ಮನೆ ಮಂದಿಯೆಲ್ಲ ವರಾಂಡದಲ್ಲಿಯೇ ಭಾನುವಾರ ರಾತ್ರಿ ಮಲಗಿದ್ದಾರೆ. ಇದನ್ನರಿತ ಕಳ್ಳರು ಅಕ್ಕಪಕ್ಕದಲ್ಲಿರುವ ಇನ್ನೂ 3-4 ಮನೆಗಳು ಮತ್ತು ನೀಲಕಂಠ ರೂಡಗಿಯವರ ಮನೆಗೂ ಬೀಗ ಹಾಕಿದ್ದಾರೆ. ನಂತರ ಮನೆಯ ಹಿಂಬದಿಯಲ್ಲಿರುವ ಕಿಟಕಿಯ ಗ್ರಿಲ್ ಕೊರೆದು ಕಳ್ಳತನ ಮಾಡಿದ್ದಾರೆ.
ಕಳೆದ ಏಳು ತಿಂಗಳಿನಿಂದ ಕೂಡಗಿ ಎನ್‌ಟಿಪಿಸಿ ಪೊಲೀಸರು ಗೊಳಸಂಗಿ ಗ್ರಾಮದ ಮೇಲೆ ಹದ್ದಿನ ಕಣ್ಣಿರಿಸಿ ರಾತ್ರಿ ಹೊತ್ತು ಗಸ್ತು ತಿರುಗುತ್ತಿದ್ದರೂ ಕೂಡ ಇಂತಹ ಘಟನೆ ಆಗಾಗ ಪುನರಾವರ್ತನೆಯಾಗುತ್ತಲೇ ಇರುವುದು ಗ್ರಾಮಸ್ಥರಲ್ಲಿ ಆತಂಕ ಸೃಷ್ಟಿಯಾಗಿದೆ. ಘಟನಾ ಸ್ಥಳಕ್ಕೆ ಎನ್‌ಟಿಪಿಸಿ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದಾರೆ.