- ಕಾರ್ಮಿಕರ ವೇತನ ಏರಿಕೆ ಉದ್ಯಮಕ್ಕೆ ಹೊಡೆತ ಎಂದು ಅಸಮಾಧಾನ
ಬೆಂಗಳೂರು: ರಾಜ್ಯ ಸರ್ಕಾರ ಜಾರಿಗೆ ತಂದಿರುವ ಪರಿಷ್ಕೃತ ಕಾರ್ಮಿಕರ ಕನಿಷ್ಠ ವೇತನ ಏರಿಕೆಯಿಂದ ಹೋಟೆಲ್ ಉದ್ಯಮದ ಮೇಲೆ ಗಂಭೀರ ಪರಿಣಾಮ ಬೀರಲಿದ್ದು, ಒಂದು ಪ್ಲೇಟ್ ಇಡ್ಲಿ ಬೆಲೆ 80 ರೂ., ಮಸಾಲೆ ದೋಸೆ 150, ಸಸ್ಯಾಹಾರಿ ಊಟದ ಬೆಲೆ 250ರಿಂದ 300 ರೂ. ಮತ್ತು ಬಿರಿಯಾನಿ ಬೆಲೆ 500 ರೂ.ಗೆ ಏರಬಹುದು ಎಂದು ರಾಜ್ಯ ಹೋಟೆಲ್ಗಳ ಸಂದ ಅಧ್ಯಕ್ಷ ಜಿ.ಕೆ. ಶೆಟ್ಟಿ ಎಚ್ಚರಿಸಿದ್ದಾರೆ.
ಪತ್ರಿಕಾ ಹೇಳಿಕೆ ಹೊರಡಿಸಿರುವ ಅವರು, ಅವೈಜ್ಞಾನಿಕ ವೇತನ ಪರಿಷ್ಕರಣೆಯಿಂದ ಆತಿಥ್ಯ ಕ್ಷೇತ್ರಕ್ಕೆ ಸಮಸ್ಯೆ ಆಗಲಿದೆ. ಈಗ ಇರುವ ವೇತನಕ್ಕೆ ಹೋಲಿಸಿದರೆ ಶೇ.60 ಅಧಿಕ ಹೆಚ್ಚಳವನ್ನು ಸರ್ಕಾರ ಮಾಡಿದೆ. ಇದು ಸಂಕಷ್ಟದಲ್ಲಿರುವ ಉದ್ಯಮಕ್ಕೆ ಹೊಡೆದ ನೀಡಲಿದೆ. ಪರಿಣಾಮವಾಗಿ ಆಹಾರಗಳ ಬೆಲೆ ಏರಿಸುವುದು ಅನಿವಾರ್ಯವಾಗಲಿದೆ. ಆದ್ದರಿಂದ ಸರ್ಕಾರ ತಕ್ಷಣವೇ ಮಧ್ಯಪ್ರವೇಶಿಸಬೇಕು ಎಂದು ಜಿ.ಕೆ.ಶೆಟ್ಟಿ ಆಗ್ರಹಿಸಿದ್ದಾರೆ.
ಎಲ್ಪಿಜಿ ಸಿಲಿಂಡರ್ಗಳ ಬೆಲೆ 1,884ರೂ. ನಿಂದ 3,152ರೂ. ಗೆ ಏರಿಕೆಯಾಗಿದೆ. ದಿನಸಿ, ವಿದ್ಯುತ್ ದರ ಮತ್ತು ಕಸದ ಸೆಸ್ಗಳೂ ಏರಿಕೆಯಾಗಿವೆ. ಕನಿಷ್ಠ ವೇತನ ಹೆಚ್ಚಳ ಜಾರಿ ಸಂದರ್ಭದಲ್ಲಿ ಕ್ಷೇತ್ರವನ್ನು ಪ್ರತ್ಯೇಕ ವರ್ಗವಾಗಿ ಪರಿಗಣಿಸುವಂತೆ ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿತ್ತು. ಆದರೆ, ಅದನ್ನು ಪರಿಗಣಿಸಿಲ್ಲ. ಹೋಟೆಲ್ ಮಾಲೀಕರು ಮತ್ತು ಗ್ರಾಹಕರಿಗೆ ಉಂಟಾಗಬಹುದಾದ ಸಂಭಾವ್ಯ ನಷ್ಟ ತಡೆಯಲು ಸರ್ಕಾರ ವೇತನ ಪರಿಷ್ಕರಣೆ ಮರುಪರಿಶೀಲಿಸಬೇಕು ಎಂದು ರಾಜ್ಯ ಹೋಟೆಲ್ಗಳ ಸಂಘ ಕೋರಿದೆ.
ನೌಕರರಿಗೆ ಸೌಲಭ್ಯಗಳಿವೆ:
ಹೋಟೆಲ್ ಉದ್ಯಮವು ಈಗಾಗಲೇ ಕಾರ್ಮಿಕರಿಗೆ ಆಹಾರ, ವಸತಿ, ಯೂನಿಫಾರ್ಮ್ ಹಾಗೂ ತೊಳೆಯುವ ಭತ್ಯೆ ಸೇರಿ ಹಲವು ಸೌಲಭ್ಯಗಳನ್ನು ನೀಡುತ್ತಿದೆ. ರಾಜ್ಯದಲ್ಲಿ ಅತಿ ಹೆಚ್ಚಿನ ಉದ್ಯೋಗ ಸೃಷ್ಟಿ ಈ ಕ್ಷೇತ್ರದಿಂದ ಆಗಿದೆ. ಈ ಅವೈಜ್ಞಾನಿಕ ವೇತನ ಹೆಚ್ಚಳವು ಕ್ಷೇತ್ರದ ಮೇಲೆ ಮಾಡಿರುವ ಗದಾಪ್ರಹಾರವಾಗಿದೆ. ವಾಸ್ತವ ಸ್ಥಿತಿ ಪರಿಗಣಿಸಿ ಸರ್ಕಾರ ಪರಿಷ್ಕರಣೆ ಮಾಡಬೇಕಿತ್ತು ಎಂದು ಸಂಘ ಹೇಳಿದೆ.
⚠️ ಸರ್ಕಾರದಿಂದ ಅವೈಜ್ಞಾನಿಕ ಹೆಚ್ಚಳ
ಸರ್ಕಾರವು ಕನಿಷ್ಠ ವೇತನವನ್ನು ತಾಲೂಕು ಮಟ್ಟದ (ವಲಯ 3) ಕಾರ್ಮಿಕರಿಗೆ 19,300ರಿಂದ 23,376 ರೂ. ಗೆ, ವಲಯ 1ರಲ್ಲಿ ಅತ್ಯಂತ ಪರಿಣಿತಿ ಹೊಂದಿದ ಕಾರ್ಮಿಕರಿಗೆ 31,100ರೂ.ತನಕ ವೇತನ ಏರಿಸಿದೆ. ಇದನ್ನು ಭರಿಸಲು ಸಾಧ್ಯವಿಲ್ಲ ಎಂದು ರಾಜ್ಯ ಹೋಟೆಲ್ಗಳ ಸಂ ಅಸಮಾಧಾನ ವ್ಯಕ್ತಪಡಿಸಿದೆ.