ಬೆಂಗಳೂರು: ನಟ ವಿನೋದ್ ಪ್ರಭಾಕರ್( Vinod Prabhakar) ಅವರ ಆರೋಗ್ಯದಲ್ಲಿ ಏರುಪೇರು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಬೆಂಗಳೂರಿನ ನಾಗರಭಾವಿಯ ಖಾಸಗಿ ಆಸ್ಪತ್ರೆಗೆ ಶನಿವಾರ ಸಂಜೆ ದಾಖಲಿಸಲಾಗಿದೆ. ರಕ್ತದೊತ್ತಡ (ಬಿಪಿ) ಸಂಬಂಧಿತ ಸಮಸ್ಯೆ ಕಾಣಿಸಿಕೊಂಡ ಕಾರಣ ಕುಟುಂಬದವರು ತಕ್ಷಣ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಇದೀಗ ಅವರು ಚೇತರಿಸಿಕೊಂಡಿದ್ದಾರೆ ಎಂದು ಕುಟುಂಬ ಮೂಲಗಳು ತಿಳಿಸಿವೆ.
ಐಸಿಯುನಲ್ಲಿ ಚಿಕಿತ್ಸೆ
ಆಸ್ಪತ್ರೆಯ ಕಾರ್ಡಿಯಾ ಕೇರ್ ವಿಭಾಗದಲ್ಲಿ ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ವೈದ್ಯರು ಅವರ ಆರೋಗ್ಯದ ಮೇಲೆ ನಿಗಾ ವಹಿಸಿದ್ದು, ಮುನ್ನೆಚ್ಚರಿಕಾ ಕ್ರಮವಾಗಿ ಐಸಿಯುನಲ್ಲಿ ಇರಿಸಿ ಪರೀಕ್ಷೆ ಹಾಗೂ ಚಿಕಿತ್ಸೆಯನ್ನು ಮುಂದುವರಿಸಿದ್ದಾರೆ ಎಂದು ತಿಳಿದುಬಂದಿದೆ.
ಅಭಿಮಾನಿಗಳಲ್ಲಿ ಆತಂಕ
ಇತ್ತೀಚೆಗೆ ತಮ್ಮ ‘ಬಲರಾಮ’ ಚಿತ್ರದ ಪ್ರಚಾರ ಕಾರ್ಯಗಳಲ್ಲಿ ವಿನೋದ್ ಪ್ರಭಾಕರ್ ತೊಡಗಿಸಿಕೊಂಡಿದ್ದರು. ಈ ನಡುವೆ ಅವರ ಆರೋಗ್ಯದಲ್ಲಿ ಏರುಪೇರು ಉಂಟಾಗಿರುವ ಸುದ್ದಿ ಹೊರಬಿದ್ದಿದ್ದು, ಅಭಿಮಾನಿಗಳಲ್ಲಿ ಆತಂಕ ಮೂಡಿಸಿದೆ. ಸದ್ಯ ಚಿಕಿತ್ಸೆ ಮುಂದುವರಿದಿದ್ದು, ವೈದ್ಯರ ತಂಡ ಅವರ ಆರೋಗ್ಯವನ್ನು ನಿರಂತರವಾಗಿ ಪರಿಶೀಲಿಸುತ್ತಿದೆ.