Hosanagara-Bengaluru sleeper bus burns 40
ಹೊಸನಗರ (ಶಿವಮೊಗ್ಗ): ಹೊಸನಗರದಿಂದ ಬೆಂಗಳೂರಿಗೆ ತೆರಳುತ್ತಿದ್ದ ಖಾಸಗಿ ಸ್ಲೀಪರ್ ಬಸ್ಸೊಂದು ಹೊಸನಗರ ತಾಲೂಕಿನ ಸುಡೂರು ಎಂಬಲ್ಲಿ ಬೆಂಕಿ ಅವಘಡಕ್ಕೀಡಾದ(Sleeper Bus Burns) ಘಟನೆ ಮಂಗಳವಾರ ರಾತ್ರಿ (ಜ.27) ನಡೆದಿದೆ. ಚಾಲಕನ ಸಮಯಪ್ರಜ್ಞೆ ಹಾಗೂ ಬಸ್ಸಿನಲ್ಲಿದ್ದ ಪ್ರಯಾಣಿಕರು ತಕ್ಷಣವೇ ಪ್ರತಿಕ್ರಿಯಿಸಿದ್ದರಿಂದ ಭೀಕರ ಪ್ರಾಣಾಪಾಯವೊಂದು ಕೂದಲೆಳೆ ಅಂತರದಲ್ಲಿ ತಪ್ಪಿದೆ.
ಖಾಸಗಿ ಕಂಪನಿಗೆ ಸೇರಿದ (Non-AC) ಸ್ಲೀಪರ್ ಬಸ್ ಸುಮಾರು 36ಕ್ಕೂ ಹೆಚ್ಚು ಪ್ರಯಾಣಿಕರೊಂದಿಗೆ ಹೊಸನಗರದಿಂದ ಬೆಂಗಳೂರಿನತ್ತ ಸಾಗುತ್ತಿತ್ತು. ರಾತ್ರಿ ಸುಮಾರು 10:30ರ ವೇಳೆಗೆ ಸುಡೂರು ಸಮೀಪ ಬಸ್ ತಲುಪಿದಾಗ, ಚಾಲಕನ ಕ್ಯಾಬಿನ್‌ನಲ್ಲಿ ದಿಢೀರ್ ಹೊಗೆ ಕಾಣಿಸಿಕೊಂಡಿದೆ. ಗಾಬರಿಗೊಂಡ ಚಾಲಕ ಬಸ್ಸನ್ನು ನಿಯಂತ್ರಿಸಲು ಯತ್ನಿಸಿದ್ದು, ರಸ್ತೆಯ ಪಕ್ಕದ ಮರಕ್ಕೆ ಡಿಕ್ಕಿ ಹೊಡೆದು ನಿಲ್ಲಿಸಿದ್ದಾರೆ.
ತಪ್ಪಿದ ಭೀಕರ ದುರಂತ
ಬಸ್ ನಾನ್ಎಸಿ ಸ್ಲೀಪರ್ ಆಗಿದ್ದರಿಂದ ಕಿಟಕಿಗಳನ್ನು ತೆರೆಯಲು ಸುಲಭವಾಯಿತು. ಬೆಂಕಿ ಇಡೀ ಬಸ್ಸಿಗೆ ವ್ಯಾಪಿಸುವ ಮೊದಲೇ ಪ್ರಯಾಣಿಕರು ತುರ್ತು ನಿರ್ಗಮನ ದ್ವಾರ ಹಾಗೂ ಕಿಟಕಿಗಳ ಮೂಲಕ ಹೊರಕ್ಕೆ ಜಿಗಿದಿದ್ದಾರೆ. "ಬಸ್ ಎಸಿ ಆಗಿರದ ಕಾರಣ ಪ್ರಯಾಣಿಕರು ತ್ವರಿತವಾಗಿ ಕಿಟಕಿಗಳನ್ನು ತೆರೆದು ಪ್ರಾಣ ಉಳಿಸಿಕೊಳ್ಳಲು ಸಾಧ್ಯವಾಯಿತು" ಎಂದು ಶಿವಮೊಗ್ಗ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ.ನಿಖಿಲ್ ತಿಳಿಸಿದ್ದಾರೆ.
ಅನಾಹುತದ ಹಾನಿ
ಬೆಂಕಿ ನಂದಿಸಲು ಹೋದ ಚಾಲಕ, ನಿರ್ವಾಹಕ ಹಾಗೂ ಒಬ್ಬ ಪ್ರಯಾಣಿಕರಿಗೆ ಸುಟ್ಟ ಗಾಯಗಳಾಗಿವೆ. ಇನ್ನುಳಿದ ಕೆಲವರು ಬಸ್ಸಿನಿಂದ ಜಿಗಿಯುವಾಗ ಸಣ್ಣಪುಟ್ಟ ಗಾಯಗಳಿಗೀಡಾಗಿದ್ದಾರೆ. ಅಗ್ನಿಶಾಮಕ ದಳ ಸ್ಥಳಕ್ಕೆ ಬರುವಷ್ಟರಲ್ಲಿ ಇಡೀ ಬಸ್ ಬೆಂಕಿಯ ಕೆನ್ನಾಲಗೆಗೆ ಸಂಪೂರ್ಣವಾಗಿ ಆಹುತಿಯಾಗಿದೆ. ಪ್ರಯಾಣಿಕರ ಲಗೇಜುಗಳು ಕೂಡ ಬೆಂಕಿಯಲ್ಲಿ ಸುಟ್ಟು ಕರಕಲಾಗಿವೆ ಎಂದು ವರದಿಯಾಗಿದೆ.
ಸ್ಥಳೀಯ ಪೊಲೀಸರು ಮತ್ತು ಅಗ್ನಿಶಾಮಕ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಬೆಂಕಿ ನಂದಿಸಿದ್ದಾರೆ. ಗಾಯಾಳುಗಳನ್ನು ಕೂಡಲೇ ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಎಲ್ಲರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ವೈದ್ಯಕೀಯ ಮೂಲಗಳು ಖಚಿತಪಡಿಸಿವೆ. ಶಾರ್ಟ್ ಸರ್ಕ್ಯೂಟ್ ಈ ಅಗ್ನಿ ದುರಂತಕ್ಕೆ ಕಾರಣವಿರಬಹುದು ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ಈ ಘಟನೆಯು ರಾತ್ರಿ ವೇಳೆ ಸಂಚರಿಸುವ ಖಾಸಗಿ ಬಸ್‌ಗಳ ತಾಂತ್ರಿಕ ಸುರಕ್ಷತೆಯ ಬಗ್ಗೆ ಮತ್ತೊಮ್ಮೆ ಪ್ರಶ್ನೆಗಳನ್ನು ಎಬ್ಬಿಸಿದೆ.
ಸಂಸದ ಬಿ.ವೈ.ರಾಘವೇಂದ್ರ ವಿಷಾದ
ಹೊಸನಗರದಿಂದ ಬೆಂಗಳೂರಿಗೆ ಪ್ರಯಾಣಿಸುತ್ತಿದ್ದ ಖಾಸಗಿ ಎಸಿಯೇತನ ಸ್ಲೀಪರ್ ಬಸ್ಸಿನ ಅಗ್ನಿ ದುರಂತದ ಸುದ್ದಿ ಮನಸ್ಸಿಗೆ ತೀವ್ರ ಆಘಾತ ನೀಡಿದೆ. ಎಲ್ಲಾ ಪ್ರಯಾಣಿಕರು ಪಾರಾಗಿದ್ದಾರೆಂದು ಅಧಿಕಾರಿಗಳು ದೃಢಪಡಿಸಿದ್ದಾರೆ ಮತ್ತು ಕೆಲವರಿಗೆ ಸುಟ್ಟ ಗಾಯಗಳಾಗಿವೆ, ಗಾಯಗೊಂಡವರು ಬೇಗ ಚೇತರಿಸಿಕೊಳ್ಳಲಿ ಎಂದು ಹಾರೈಸುತ್ತೇನೆ ಎಂದು ಶಿವಮೊಗ್ಗ ಸಂಸದ ಬಿ.ವೈ.ರಾಘವೇಂದ್ರ ಎಕ್ಸ್ ವೇದಿಕೆಯಲ್ಲಿ ಹಂಚಿಕೊಂಡಿದ್ದಾರೆ.