ಲಾಡ್ಲಾಪುರದ ಹೊರ ವಲಯದಲ್ಲಿ ಚಿರತೆ ದಾಳಿಯಿಂದ ಮೃತಪಟ್ಟಿರುವ ಕುದುರೆ. 
ರಾಜ್ಯ

ಲಾಡ್ಲಾಪುರದಲ್ಲಿ ಚಿರತೆ ದಾಳಿಗೆ ಕುದುರೆ ಬಲಿ

ವಾಡಿ: ಚಿರತೆ ದಾಳಿಗೆ ಕುದುರೆಯೊಂದು ಬಲಿಯಾದ ಟನೆ ಗುರುವಾರ ತಡರಾತ್ರಿ ಲಾಡ್ಲಾಪುರ ಗ್ರಾಮದ ಹೊರವಲಯದಲ್ಲಿ ನಡೆದಿದೆ. ಗ್ರಾಮದ ಸಣ್ಣ ಸಾಬಣ್ಣ ಗೊಡಗ ಅವರ ಹೊಲದ ಮನೆ ಮುಂದೆ ಕಟ್ಟಿದ್ದ ಎತ್ತುಗಳ ಮೇಲೆ ದಾಳಿ ನಡೆಸಲು ಬಂದಿದ್ದ ಚಿರತೆಯು ಅಲ್ಲಿಯೇ ಮೇಯುತ್ತಿದ್ದ ಕುದುರೆ ಮೇಲೆ ಏಕಾಏಕಿ ದಾಳಿ ನಡೆಸಿದೆ. ಕುತ್ತಿಗೆ, ಹೊಟ್ಟೆಯ ಭಾಗವನ್ನು ತಿಂದಿದೆ. ಇದೇ ಸ್ಥಳದಲ್ಲಿ 8 ಎತ್ತುಗಳಿದ್ದವು, ಕುದುರೆ ಮೇಲೆ ದಾಳಿ ನಡೆದಿದ್ದರಿಂದ ಎತ್ತುಗಳು ಬಚಾವ್​ ಆಗಿವೆ. ಕಳೆದ ವರ್ಷ ಇದೇ ಸ್ಥಳದಲ್ಲಿ ಎತ್ತಿನ ಮೇಲೆ ದಾಳಿ ನಡೆಸಲು ಬಂದಿದ್ದ ಚಿರತೆಗೆ ನಾಯಿ ಬಲಿಯಾಗಿತ್ತು. ಇದೀಗ ಮತ್ತೆ ದಾಳಿ ಮಾಡಿದ್ದು ರೈತರಲ್ಲಿ ಆತಂಕ ಮೂಡಿಸಿದೆ. ಅರಣ್ಯ ಇಲಾಖೆ ಮತ್ತು ಪಶುಪಾಲನಾ ಸಿಬ್ಬಂದಿ ಶುಕ್ರವಾರ ಬೆಳಗ್ಗೆ ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ.
"

ಈಗಾಗಲೇ ಲಾಡ್ಲಾಪುರಕ್ಕೆ ಅರಣ್ಯ ಇಲಾಖೆ ಸಿಬ್ಬಂದಿ ಭೇಟಿ ನೀಡಿದ್ದು, ಚಿರತೆಯ ಹೆಜ್ಜೆಗುರುತು ಪತ್ತೆ ಹಚ್ಚುವ ಕೆಲಸ ನಡೆದಿದೆ. ಗುರುತು ಪತ್ತೆಯಾಗುತ್ತಿದ್ದಂತೆ ಬೋನು ಅಳವಡಿಸಲಾಗುವದು. ಚಿರತೆ ಸೆರೆಗೆ ಅರಣ್ಯ ಇಲಾಖೆ ಪ್ರಯತ್ನ ಮಾಡುತ್ತಿದೆ.

— > ವಿಜಯಕುಮಾರ ಬಡಿಗೇರ, ವಲಯ ಅರಣ್ಯಾಧಿಕಾರಿ, ಚಿತ್ತಾಪುರ