rock collapse 
ರಾಜ್ಯ

ಬೆಂಗಳೂರು ಹೊರವಲಯದಲ್ಲಿ ಭೀಕರ ಕಲ್ಲು ಕ್ವಾರಿ ದುರಂತ: ಬಂಡೆ ಕುಸಿದು 7 ಕಾರ್ಮಿಕರ ಸಾವು, ಹಲವರಿಗೆ ಗಾಯ!

ಬೆಂಗಳೂರು: ರಾಜಧಾನಿ ಬೆಂಗಳೂರು ಹೊರವಲಯದಲ್ಲಿ ಗುರುವಾರ ಮುಂಜಾನೆ ಸಂಭವಿಸಿದ ಭೀಕರ ಕಲ್ಲು ಕ್ವಾರಿ ದುರಂತದಲ್ಲಿ ಏಳು ಕಾರ್ಮಿಕರು ಮೃತಪಟ್ಟಿದ್ದು, ಐದಕ್ಕೂ ಹೆಚ್ಚು ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಬೆಂಗಳೂರು ದಕ್ಷಿಣ ತಾಲೂಕಿನ ಮಾದಾಪಟ್ಟಣ ಸಮೀಪದ ಚಿಕ್ಕನಹಳ್ಳಿ (ಹುಲವೇನಹಳ್ಳಿ ಗ್ರಾಮ ವ್ಯಾಪ್ತಿ) ಬಳಿ ಇರುವ ಖಾಸಗಿ ಕಂಪನಿಗೆ ಸೇರಿದ ಕಲ್ಲು ಕ್ವಾರಿಯಲ್ಲಿ ಈ ಅವಘಡ ಸಂಭವಿಸಿದೆ. ಸ್ಥಳಕ್ಕೆ ತಾವರೆಕೆರೆ ಪೊಲೀಸರು ಹಾಗೂ ಹಿರಿಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ರಕ್ಷಣಾ ಕಾರ್ಯಾಚರಣೆ ಮುಂದುವರಿದಿದೆ.
ಪ್ರಾಥಮಿಕ ಮಾಹಿತಿಯ ಪ್ರಕಾರ, ಸುಮಾರು 100 ಅಡಿ ಎತ್ತರದಲ್ಲಿ ಹಿಟಾಚಿ ಯಂತ್ರದ ಮೂಲಕ ಬಂಡೆ ತೆರವುಗೊಳಿಸುವ ಕೆಲಸ ನಡೆಯುತ್ತಿತ್ತು. ಇದೇ ವೇಳೆ ಕೆಳಭಾಗದಲ್ಲಿ ಕಾರ್ಮಿಕರು ಕೆಲಸ ಮಾಡುತ್ತಿದ್ದರು. ಈ ಸಂದರ್ಭ ಮೇಲ್ಭಾಗದಿಂದ ಬಂಡೆ ಕುಸಿದು ಕಾರ್ಮಿಕರ ಮೇಲೆ ಬಿದ್ದ ಪರಿಣಾಮ ದುರಂತ ಸಂಭವಿಸಿದೆ ಎಂದು ತಿಳಿದುಬಂದಿದೆ.

ಮತ್ತೊಂದು ಮಾಹಿತಿ ಪ್ರಕಾರ, ಹೊಸ ಕ್ರಷರ್‌ ಆರಂಭಿಸಲು ಸ್ಥಳವನ್ನು ಸ್ವಚ್ಛಗೊಳಿಸುವ ವೇಳೆ ಈ ಅವಘಡ ಸಂಭವಿಸಿದೆ. ಮೇಲ್ಭಾಗದಲ್ಲಿ ಯಂತ್ರ ಕಾರ್ಯನಿರ್ವಹಿಸುತ್ತಿದ್ದರೂ ಕೆಳಭಾಗದಲ್ಲಿ ಕಾರ್ಮಿಕರು ಕೆಲಸ ಮಾಡುತ್ತಿರುವುದನ್ನು ಗಮನಿಸದ ಕಾರಣ ಈ ಘಟನೆ ನಡೆದಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ.

ಅಕ್ರಮ ಗಣಿಗಾರಿಕೆ ಶಂಕೆ!

ಸ್ಥಳೀಯ ಮೂಲಗಳ ಪ್ರಕಾರ, ಹುಲವೇನಹಳ್ಳಿ ಗ್ರಾಮ ವ್ಯಾಪ್ತಿಯಲ್ಲಿ ಅಗತ್ಯ ಪರವಾನಗಿ ಇಲ್ಲದೆ ಅಕ್ರಮ ಗಣಿಗಾರಿಕೆ ನಡೆಸಲಾಗುತ್ತಿತ್ತು ಎಂಬ ಆರೋಪ ಕೇಳಿಬಂದಿದೆ. ಮುಂಜಾನೆ ಕಲ್ಲು ಒಡೆಯಲು ಜಿಲೆಟಿನ್ ಸ್ಫೋಟಕ ಬಳಸಿದ ಬಳಿಕ ಬಂಡೆ ಸಿಡಿದು ಅದರ ಕೆಳಗಿದ್ದ ಕಾರ್ಮಿಕರ ಮೇಲೆ ಉರುಳಿ ಬಿದ್ದಿರುವ ಸಾಧ್ಯತೆಯನ್ನೂ ಅಧಿಕಾರಿಗಳು ಪರಿಶೀಲಿಸುತ್ತಿದ್ದಾರೆ. ಆದರೆ, ಈ ಕುರಿತು ಅಧಿಕಾರಿಗಳಿಂದ ಇನ್ನೂ ಅಧಿಕೃತ ಮಾಹಿತಿ ಪ್ರಕಟವಾಗಿಲ್ಲ.