ಬೆಂಗಳೂರು: "ಕರ್ನಾಟಕ ರತ್ನ' ಡಾ. ವಿಷ್ಣುವರ್ಧನ್ (Dr Vishnuvardhan) 75ನೇ ಜಯಂತಿ ಅಂಗವಾಗಿ ಡಾ. ವಿಷ್ಣು ಸೇನಾ ಸಮಿತಿ ವತಿಯಿಂದ ವಿಜಯವಾಣಿ ಮಾಧ್ಯಮ ಸಹಯೋಗದೊಂದಿಗೆ ಭಾನುವಾರ (ಸೆ.27) ಡಾ. ವಿಷ್ಣುವರ್ಧನ್ ಅಮೃತ ಮಹೋತ್ಸವ ಆಯೋಜಿಸಲಾಗಿದೆ. ನಾಯಂಡಹಳ್ಳಿ ಬಳಿಯ ನಂದಿಲಿಂಕ್ ಮೈದಾನದಲ್ಲಿ ಸಂಜೆ 6ರಿಂದ ರಾತ್ರಿ 11ರವರೆಗೆ ಕಾರ್ಯಕ್ರಮ ನಡೆಯಲಿದೆ. ಕನ್ನಡ ಚಿತ್ರರಂಗ, ಸಾಹಿತ್ಯ, ಸಂಸ್ಕೃತಿ ಹಾಗೂ ಸಾಮಾಜಿಕ ಕ್ಷೇತ್ರದ ಗಣ್ಯರು ಭಾಗವಹಿಸಲಿದ್ದಾರೆ. ವಿಷ್ಣುವರ್ಧನ್ ಕಲಾ ಬದುಕು, ಸಿನಿಮಾ ರಂಗಕ್ಕೆ ನೀಡಿದ ಕೊಡುಗೆ ಹಾಗೂ ಅವರ ಸಾಮಾಜಿಕ ಮತ್ತು ಸಾಂಸ್ಕೃತಿಕ ಹೆಜ್ಜೆಗುರುತುಗಳನ್ನು ಸ್ಮರಿಸುವ ಉದ್ದೇಶದಿಂದ ಉತ್ಸವ ಹಮ್ಮಿಕೊಳ್ಳಲಾಗಿದೆ.
ಸಂಜೆ 5ಕ್ಕೆ ಆಯೋಜಿಸಿರುವ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ನಟರಾದ ಶಿವರಾಜ್ಕುಮಾರ್, ರವಿಚಂದ್ರನ್, ಸುದೀಪ್, ದುನಿಯಾ ವಿಜಯ್, ಗಣೇಶ್ ಮತ್ತಿತರರು ಭಾಗವಹಿಸಲಿದ್ದಾರೆ. ರಾತ್ರಿ 7ಕ್ಕೆ ವಿಷ್ಣುವರ್ಧನ್ ಅಭಿನಯದ ಚಿತ್ರಗಳ ಜನಪ್ರಿಯ ಗೀತೆಗಳಿಗೆ ವಿವಿಧ ಕಲಾವಿದರು ನೃತ್ಯ ಪ್ರಸ್ತುತಪಡಿಸಲಿದ್ದಾರೆ. 10ಕ್ಕೆ ದಾದಾ ಡಿಜೆ ವಿಶೇಷ ನೃತ್ಯ ರೂಪಕದೊಂದಿಗೆ ಕಾರ್ಯಕ್ರಮಕ್ಕೆ ತೆರೆ ಬೀಳಲಿದೆ. ಸುಹಾಸಿನಿ ಮಣಿರತ್ನಂ, ರೋಜಾ, ಅಂಬಿಕಾ, ಊರ್ವಶಿ, ರಾಜಶೇಖರ್, ಲಕ್ಷ್ಮಿ ಗೋಪಾಲಸ್ವಾಮಿ ಸೇರಿ ಪರಭಾಷಾ ಚಿತ್ರರಂಗದ ಕಲಾವಿದರೂ ಪಾಲ್ಗೊಳ್ಳಲಿದ್ದಾರೆ. ಡಾ. ವಿಷ್ಣು ಸೇನಾ ಸಮಿತಿ ಅಧ್ಯಕ್ಷ ವೀರಕಪುತ್ರ ಶ್ರೀನಿವಾಸ್ ನೇತೃತ್ವದಲ್ಲಿ ಉತ್ಸವ ನಡೆಯಲಿದೆ.
ಅಂದು ಬೆಳಗ್ಗೆ 6ಕ್ಕೆ ಗಾಳಿ ಆಂಜನೇಯಸ್ವಾಮಿ ದೇವಸ್ಥಾನದಿಂದ ಆರಂಭವಾಗಲಿರುವ ಭವ್ಯ ಮೆರವಣಿಗೆಯಲ್ಲಿ ನಟರು, ಕಲಾವಿದರು, ಅಭಿಮಾನಿಗಳು ಹಾಗೂ ಡಾ. ವಿಷ್ಣು ಸೇನಾ ಸಮಿತಿ ಕಾರ್ಯಕರ್ತರು ಪಾಲ್ಗೊಳ್ಳಲಿದ್ದಾರೆ. ಸುಮಾರು ಒಂದೂವರೆ ಕಿ.ಮೀ. ಉದ್ದದ ಕನ್ನಡ ಧ್ವಜವು ಮೆರವಣಿಗೆಯ ಪ್ರಮುಖ ಆಕರ್ಷಣೆಯಾಗಲಿದೆ. 9.30ಕ್ಕೆ ಉದ್ಘಾಟನಾ ಸಮಾರಂಭದಲ್ಲಿ ಹಿರಿಯ ನಟರಾದ ಶ್ರೀನಾಥ್, ರಮೇಶ್ ಅರವಿಂದ್, ಸುಂದರ್ ರಾಜ್, ನಿರ್ದೇಶಕರಾದ ಎಸ್. ನಾರಾಯಣ್, ಎಸ್.ವಿ. ರಾಜೇಂದ್ರ ಸಿಂಗ್ ಬಾಬು, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷೆ ಜಯಮಾಲಾ, ನಟರಾದ ಅವಿನಾಶ್, ನಟಿಯರಾದ ಶ್ರುತಿ, ಮಾಳವಿಕಾ ಅವಿನಾಶ್ ಮೊದಲಾದವರು ಭಾಗವಹಿಸಲಿದ್ದಾರೆ. ಬಳಿಕ ರಾಜೇಶ್ ಕೃಷ್ಣನ್ ನೇತೃತ್ವದಲ್ಲಿ ಸಂಗೀತ ಕಾರ್ಯಕ್ರಮ ನಡೆಯಲಿದೆ. "ಸಂಪಾದಕರ ಕಣ್ಣಲ್ಲಿ ವಿಷ್ಣುವರ್ಧನ್' ಸಂವಾದ ಹಾಗೂ ಮಧ್ಯಾಹ್ನ 3.30ಕ್ಕೆ 75 ಕಲಾವಿದರಿಗೆ ಸನ್ಮಾನ ಆಯೋಜಿಸಲಾಗಿದೆ.