ಬೆಂಗಳೂರು: ನೂತನವಾಗಿ ರಚನೆಯಾಗಿರುವ ಐದು ಪೊಲೀಸ್ ಕಮಿಷ್ನರೇಟ್ ವಿಭಾಗದ ಪೊಲೀಸ್ ಆಯುಕ್ತರು ಹಾಗೂ ಮುಖ್ಯ ಆಯುಕ್ತರೊಂದಿಗೆ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಶುಕ್ರವಾರ ಸಭೆ ನಡೆಸಿದರು.
ನಗರದಲ್ಲಿ ಪೊಲೀಸ್ ವ್ಯವಸ್ಥೆಯನ್ನು ಮತ್ತಷ್ಟು ಪರಿಣಾಮಕಾರಿಯಾಗಿ ರೂಪಿಸುವುದು, ಆಯುಕ್ತಾಲಯಗಳ ಕಾರ್ಯನಿರ್ವಹಣೆ ಹಾಗೂ ಇಲಾಖೆ ಸಾಮರ್ಥ್ಯ ಬಲಪಡಿಸುವ ನಿಟ್ಟಿನಲ್ಲಿ ಚರ್ಚಿಸಿದ ಸಚಿವರು, ಜಾಗತಿಕ ಮಟ್ಟದಲ್ಲಿ ಬೆಂಗಳೂರು ನಗರ ಬದಲಾಗುತ್ತಿರುವ ಅಗತ್ಯತೆಗಳಿಗೆ ಅನುಗುಣವಾಗಿ ಅಧಿಕಾರಿಗಳ ಸೇವೆ ಅಗತ್ಯವಾಗಿದೆ. ಸಾರ್ವಜನಿಕರ ಸಮಸ್ಯೆಗಳಿಗೆ ತ್ವರಿತವಾಗಿ ಸ್ಪಂದಿಸುವುದು, ಇಲಾಖೆ ಸೇವೆ ಜನಸ್ನೇಹಿಯಾಗಿ ರೂಪಿಸಬೇಕಾಗಿದೆ.
ಹೊಸ ಪೊಲೀಸ್ ಆಯುಕ್ತಾಲಯಗಳ ನಡುವೆ ಉತ್ತಮ ಸಮನ್ವಯ ಸಾಧಿಸುವುದರ ಜತೆಗೆ, ಇಲಾಖೆಯ ಕಾರ್ಯನಿರ್ವಹಣೆಯಲ್ಲಿ ದಕ್ಷತೆ, ಹೊಣೆಗಾರಿಕೆ ಮುಂದುವರೆಸಿಕೊಂಡು ಹೋಗಬೇಕು ಎಂದು ಅಧಿಕಾರಿಗಳಿಗೆ ಕಿವಿ ಮಾತು ಹೇಳಿದರು.
ಸುಮಾರು ಎರಡು ಗಂಟೆಗಳ ಕಾಲ ಚರ್ಚೆ ನಡೆಸಿದ ಗೃಹ ಸಚಿವರು, ಮುಖ್ಯ ಪೊಲೀಸ್ ಆಯುಕ್ತ ಆರ್.ಹಿತೇಂದ್ರ ಮತ್ತು ಐವರು ಹೊಸ ಆಯುಕ್ತರ ಸಲಹೆ ಪಡೆದರು. ಹೊಸ ಪೊಲೀಸ್ ಠಾಣೆಗಳ ರಚನೆ, ಹೊಸ ಕಟ್ಟಡಗಳ ನಿರ್ಮಾಣ, ಸ್ಮಾರ್ಟ್ ಪೊಲೀಸ್ ವ್ಯವಸ್ಥೆಗೆ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಸಮಾಲೋಚಿಸಿದರು.
ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಗೃಹ ಸಚಿವರ ಪ್ರಿಯಾಂಕ್ ಖರ್ಗೆ, ನಗರದ ಸುರಕ್ಷತೆ ಹಾಗೂ ಜನಸ್ನೇಹಿ ಪೊಲೀಸ್ ವಾತಾವರಣ ನಿರ್ಮಾಣಕ್ಕಾಗಿ 5 ಕಮೀಷನರೇಟ್ಗಳನ್ನು ರಚಿಸಲಾಗಿದೆ. ಹೊಸ ಕಟ್ಟಡ ನಿರ್ಮಾಣ ಹಾಗೂ ಮರುನವೀಕರಣ ಸೇರಿ ಮೂಲಸೌಕರ್ಯಗಳನ್ನು 15 ದಿನಗಳಲ್ಲಿ ಭೌಗೊಳಿಕ ಹಾಗೂ ವೈಜ್ಞಾನಿಕವಾಗಿ ಅಧ್ಯಯನ ಮಾಡಿ ಪ್ರಸ್ತಾವನೆ ಸಲ್ಲಿಸುವಂತೆ ಅಧಿಕಾರಿಗಳಿಗೆ ನಿರ್ದೇಶಿಸಲಾಗಿದೆ ಎಂದರು. ಹಾಲಿಯಿರುವ ಸಿಸಿಬಿ ಕಚೇರಿ ಮುಂದುವರೆಯಲಿದೆ. ಇದಕ್ಕೆ ಆ್ಯಂಟಿ ಸೋಷಿಯಲ್ ವಿಂಗ್ ಸೇರಿ ಕೆಲ ವಿಭಾಗಗಳನ್ನು ರಚಿಸಲಾಗುತ್ತದೆ. ಸಂಚಾರ ವಿಭಾಗಕ್ಕಾಗಿ ಪ್ರತ್ಯೇಕ ಕಮೀಷನರ್ ನಿಯೋಜಿಸಲಾಗಿದ್ದು, ಟ್ರಾಫಿಕ್ ಡಿಸಿಪಿಗಳು ಇವರಿಗೆ ವರದಿ ಮಾಡಲಿದ್ದಾರೆ ಎಂದರು.