ಸರಗೂರು ತಾಲೂಕಿನ ಪಟ್ಟಣದ ಶ್ರೀ ದೇವರಾಜುಸ್ವಾಮಿ ನಿರಂತರ ಶಾಲೆಯಲ್ಲಿ ಮಕ್ಕಳಿಗಾಗಿ ಆಯೋಜಿಸಲಾಗಿದ್ದ ಅಕ್ಷರಾಭ್ಯಾಸ ಕಾರ್ಯಕ್ರಮವನ್ನು ವೇಣುಗೋಪಾಲ್ ಉದ್ಘಾಟಿಸಿದರು. ಡಾ ಷಡಕ್ಷರಿ ಸ್ವಾಮೀಜಿ, ಸಲೀಮ, ಗುರುಸ್ವಾಮೀಜಿ ಇದ್ದರು.
ಸರಗೂರು: ಶಿಕ್ಷಣದ ಬಗ್ಗೆ ಮಕ್ಕಳಲ್ಲಿ ಪ್ರೀತಿ, ಆಸಕ್ತಿ ಹುಟ್ಟುವಂತೆ ಮಾಡುವುದು ಬದುಕಿನ ಮೊದಲ ಆದ್ಯತೆ ಆಗಬೇಕಾಗಿದೆ ಎಂದು ಎಚ್.ಡಿ.ಕೋಟೆ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನಾಧಿಕಾರಿ ವೇಣುಗೋಪಾಲ್ ತಿಳಿಸಿದರು.
ಪಟ್ಟಣದ ಶ್ರೀ ಷಡಕ್ಷರಿ ದೇವರಾಜಸ್ವಾಮಿ ನಿರಂತರ ಶಾಲೆಯಲ್ಲಿ ಶುಕ್ರವಾರ ಮಕ್ಕಳಿಗಾಗಿ ಆಯೋಜಿಸಿದ್ದ ಅಕ್ಷರಾಭ್ಯಾಸ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಮಕ್ಕಳಿಗೆ ಮನೆಯೇ ಮೊದಲ ಪಾಠ ಶಾಲೆ, ತಾಯಿಯೇ ಮೊದಲ ಗುರು ಎಂದು ಹೇಳಿ ವಿದ್ಯಾಭ್ಯಾಸದ ಬಗ್ಗೆ ಕೆಲ ಹಿತನುಡಿಗಳನ್ನಾಡಿ ಶುಭ ಹಾರೈಸಿದರು.
ದಡದಹಳ್ಳಿ ಪಟ್ಟದ ಮಠದ ಶ್ರೀ ಷಡಕ್ಷರಿ ಸ್ವಾಮೀಜಿ ಮಾತನಾಡಿ, ಈಗಿನ ಸಮಾಜದಲ್ಲಿ ಮಕ್ಕಳು ವಿಷಯಗಳನ್ನು ಗ್ರಹಿಸುವ ಸಾಮರ್ಥ್ಯ ಹಿಂದಿನ ಕಾಲದ ಮಕ್ಕಳಿಗಿಂತ ಹೆಚ್ಚಾಗಿದೆ. ಅಕ್ಷರಾಭ್ಯಾಸಕ್ಕೆ ಮುಂಚೆ ಮಕ್ಕಳಿಗೆ ಚಿತ್ರ ಪರಿಚಯವಾಗಬೇಕು. ಆನೆ ಎಂದರೆ ಹೇಗಿರುತ್ತದೆ. ಹಸು, ಹುಲಿ, ಜಿಂಕೆ ಹೀಗೆ ಒಂದೊಂದು ಚಿತ್ರದ ಪರಿಚಯವಾದ ಮೇಲೆ ಅದರ ಶಬ್ದ, ವರ್ತನೆಗಳನ್ನು ತೋರಿಸಿ ಹೇಳಬೇಕು. ಆಗ ಮಕ್ಕಳಿಗೆ ಚೆನ್ನಾಗಿ ಅರ್ಥವಾಗುತ್ತದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಮಠದ ಕಿರಿಯ ಗುರುಸ್ವಾಮಿಗಳು, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಹಂಚಿಪುರ ವಲಯ ಮೇಲ್ವಿಚಾರಕ ಸಲೀಮ, ಶಿಕ್ಷಕರು ಉಪಸ್ಥಿತರಿದ್ದರು.