H K Patil | ಮಾಜಿ ಸಚಿವ, ಶಾಸಕ ಎಚ್ ಕೆ ಪಾಟೀಲ
ಗದಗ: ಅಕ್ಟೋಬರ್ 10ರೊಳಗಾಗಿ ಗದಗ ತಾಲೂಕನ್ನು ಬರಪೀಡಿತ ಪ್ರದೇಶ ಎಂದು ಘೋಷಿಸದಿದ್ದರೆ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಮಾಜಿ ಸಚಿವ, ಶಾಸಕ ಎಚ್ ಕೆ ಪಾಟೀಲ (H K Patil) ಅವರು ಸ್ವಪಕ್ಷದ ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.
ರೈತ ಸಂಘ ಹಾಗೂ ವಿವಿಧ ಸಂಘಟನೆಗಳು ಗದಗ ತಾಲೂಕನ್ನು ಬರಗಾಲ ಪೀಡಿತ ಪ್ರದೇಶವೆಂದು ಘೋಷಿಸದಿರುವುದನ್ನು ವಿರೋಧಿಸಿ ಪಟ್ಟಣದ ಕಾರವಾರ-ಕೈಗಾ-ಇಳಕಲ್ ರಾಜ್ಯ ಹೆದ್ದಾರಿಯಲ್ಲಿ ಹಮ್ಮಿಕೊಂಡಿದ್ದ ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿ ರೈತರನ್ನು ಉದ್ದೇಶಿಸಿ ಅವರು ಮಾತನಾಡಿದ ಅವರು, ನಾನು ಒಬ್ಬ ರೈತ ಕುಟುಂಬದವನಾಗಿದ್ದು, ರೈತರ ಪರ ಇದ್ದವನು. ಅನ್ನದಾತನ ಪರಿಸ್ಥಿತಿಯ ಬಗ್ಗೆ ನನಗೆ ಅರಿವಿದೆ. ಅಕ್ಟೋಬರ್ 2ರ ಗಾಂಧಿ ಜಯಂತಿಯೊಳಗಾಗಿ ಗದಗ ತಾಲೂಕನ್ನು ಬರಪೀಡಿತ ಪ್ರದೇಶ ಎಂದು ಘೋಷಿಸುವಂತೆ ಪ್ರಯತ್ನ ಮುಂದುವರಿಸುತ್ತೇನೆ ಎಂದರು.
ಮುಂದುವರೆದು ಮಾತನಾಡಿದ ಎಚ್ ಕೆ ಪಾಟೀಲ ಅವರು, ಅಕ್ಟೋಬರ್ 2ರೊಳಗೆ ಬರ ಘೋಷಣೆ ಸಾಧ್ಯವಾಗದೆ ಹೋದರೆ ಅಕ್ಟೋಬರ್ 10ರ ಗಡುವನ್ನು ನೀಡಿ, ರಾಜೀನಾಮೆಯನ್ನು ಶಾಸನ ಸಭೆಯ ಮೂಲಕ ಸರ್ಕಾರಕ್ಕೆ ನೀಡುತ್ತೇನೆ ಎಂದು ಪುನರುಚ್ಚರಿಸಿದರು. ಸಿಎಂ ಡಿ ಕೆ ಶಿವಕುಮಾರ್ ಅವರು ಜಿಲ್ಲೆಗೆ ಆಗಮಿಸಿ ಕದಾಂಪುರದಿಂದ ಕುರ್ತಕೋಟಿಯವರೆಗೆ ಬೆಳೆ ವೀಕ್ಷಣೆ ಮಾಡಿದ್ದರು. ಬರ ಕುರಿತು ಸಮೀಕ್ಷೆ ನಡೆಸಿದ್ದರು. ಇಷ್ಟಾದರೂ ಗದಗನ್ನು ಬರಪೀಡಿತ ತಾಲೂಕೆಂದು ಘೋಷಣೆ ಮಾಡಿಲ್ಲ. ಬರ ಘೋಷಣೆ ಮಾಡಲು ಅಡ್ಡಿಯಾದವರು ಯಾರು..? ಎಂದು ಪ್ರಶ್ನಿಸಿದ ಅವರು, ಇಂತಹ ಅನ್ಯಾಯ, ಮೋಸವನ್ನು ಸಹಿಸುವುದಕ್ಕೆ ಸಾಧ್ಯವಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಬಾರಕೋಲು ಚಳವಳಿ ಎಚ್ಚರಿಕೆ
ಗದಗ ತಾಲೂಕು ಸೇರಿ ಜಿಲ್ಲೆಯ ಬರ ಪರಿಸ್ಥಿತಿಯನ್ನು ಮುಖ್ಯಮಂತ್ರಿಗಳು ಸ್ವತಃ ಪರಿಶೀಲಿಸಿದ್ದಾರೆ. ನಿಮ್ಮ ಕಣ್ಣು ನಿಮಗೆ ಸುಳ್ಳು ಹೇಳುತ್ತವೆಯೇ..? ನೀವೇ ಪರಿಶೀಲನೆ ನಡೆಸಿ ಬರಗಾಲವೆಂದು ಘೋಷಣೆ ಮಾಡುವ ಪಟ್ಟಿಯಲ್ಲಿ ಹೆಸರಿಲ್ಲದಿರುವುದು ಅನ್ಯಾಯದ ಪರಮಾವಧಿಯಾಗಿದೆ. ಇದು ರೈತರಿಗೆ ಮಾಡಿದ ಮೋಸವಾಗಿದ್ದು, ತಕ್ಷಣ ಬ್ರಿಟಿಷ್ ಮನಸ್ಥಿತಿಯ ಅಧಿಕಾರಿಶಾಹಿಗಳ ಸುಳ್ಳು ವರದಿ ನಂಬದೆ, ನಿಜವಾಗಿ ರೈತರ ಸಂಕಷ್ಟಕ್ಕೆ ಸರ್ಕಾರ ಧಾವಿಸಬೇಕು. ಇಲ್ಲದಿದ್ದರೆ ರೈತರ ಜೊತೆಗೂಡಿ ಹೆಗಲಿಗೆ ಬಾರಕೋಲು ಹಾಕಿಕೊಂಡು ಹೋರಾಟಕ್ಕೆ ಅಣಿಯಾಗಬೇಕಾಗುತ್ತದೆ.
ಎಚ್.ಕೆ. ಪಾಟೀಲ ಮಾಜಿ ಸಚಿವರು, ಶಾಸಕರು
ಬರದಿಂದ ತತ್ತರಿಸಿರುವ ರೈತರು ರೊಚ್ಚಿಗೆದ್ದು ಹೋರಾಟ ಮಾಡುತ್ತಿದ್ದಾರೆ. ಗದಗ ತಾಲೂಕಿನಲ್ಲಿಯೇ ಶೇಕಡಾ 49ರಷ್ಟು ಮಳೆ ಕೊರತೆಯಾಗಿದೆ. ಬರಪೀಡಿತ ಪ್ರದೇಶವೆಂದು ಯಾಕೆ ಘೋಷಣೆ ಮಾಡಲಿಲ್ಲ..? ಜಿಲ್ಲಾ ಉಸ್ತುವಾರಿ ಸಚಿವರು ಜಿಲ್ಲೆಯ ನಾಲ್ಕು ವಿಧಾನಸಭಾ ಕ್ಷೇತ್ರಗಳ ಶಾಸಕರ ನೇತೃತ್ವದಲ್ಲಿ ಅಧಿಕಾರಿಗಳ ಸಭೆ ನಡೆಸಿದ್ದರು. ಬರಪೀಡಿತ ಪ್ರದೇಶವೆಂದು ಸ್ಪಷ್ಟವಾದ ಚಿತ್ರಣ ನಮ್ಮದಾಗಿತ್ತು. ಅಧಿಕಾರಿಗಳ ವರದಿ ನಂತರ ಸಿಎಂ ಅತ್ಯಂತ ಬರ ಬಿದ್ದಿರುವ ಜಿಲ್ಲೆಯೆಂದು ಧಾವಿಸಿ ಬಂದಿದ್ದರು. ಇಷ್ಟೆಲ್ಲ ಆದರೂ, ಗದಗ ತಾಲೂಕು ಸೇರಿ ಜಿಲ್ಲೆಗೆ ಅನ್ಯಾಯವಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಉತ್ತರ ಕರ್ನಾಟಕ ಭಾಗದಲ್ಲಿ 73 ತಾಲೂಕುಗಳಿವೆ. 73ರಲ್ಲಿ ಇನ್ನೂ 27 ತಾಲೂಕುಗಳನ್ನು ಬರ ಪಟ್ಟಿಯಿಂದ ಕೈಬಿಟ್ಟಿದ್ದಾರೆ. ಉತ್ತರ ಕರ್ನಾಟಕದ ಇನ್ನುಳಿದ 27 ತಾಲೂಕುಗಳನ್ನು ಬರಪೀಡಿತ ತಾಲೂಕುಗಳೆಂದು ಘೋಷಣೆ ಮಾಡಬೇಕು. ಇದರಲ್ಲಿ ಅನಾವಶ್ಯಕವಾಗಿ ರಾಜಕೀಯವನ್ನು ಬೆರೆಸಲ್ಲ. ಅಕಸ್ಮಾತ್ ರಾಜಕಾರಣ ಕೂಡಿದರೆ ಅದನ್ನು ಭೇದಿಸಿ ಹೋಗುವ ಶಕ್ತಿ ನನ್ನಲ್ಲಿದೆ ಎಂದು ಶಾಸಕ ಎಚ್.ಕೆ. ಪಾಟೀಲ ಹೇಳಿದರು.