- * ಡೇಟಿಂಗ್ ಆಪ್ಸ್‌ಗಳಲ್ಲಿ ಜಾಹಿರಾತು ಮೂಲಕ ಹೆಚ್‌ಐವಿ ಸೋಂಕಿನ ಕುರಿತು ಅರಿವು
ಬೆಂಗಳೂರು: ರಾಷ್ಟ್ರೀಯ ಏಡ್ಸ್ ನಿಯಂತ್ರಣಾ ಸಂಸ್ಥೆಯ ಪ್ರಕಾರ ರಾಜ್ಯದಲ್ಲಿ ಎಚ್‌ಐವಿ ಸೋಂಕಿರುವವರಲ್ಲಿ ಸುಮಾರು 56 ಸಾವಿರ ಮಂದಿ ಪರೀಕ್ಷೆಗೆ ಒಳಪಟ್ಟಿಲ್ಲ. ಹಾಗಾಗಿ ಡಿಜಿಟಲ್ ವೇದಿಕೆಗಳ ಮೂಲಕ ಎಚ್‌ಐವಿ ಸೋಂಕಿನ ಅಪಾಯವನ್ನು ಸ್ವಯಂ ತಪಾಸಣೆ ಮತ್ತು ವಿಶ್ಲೇಷಿಸುವ ವ್ಯವಸ್ಥೆ ರೂಪಿಸಲಾಗಿದೆ ಎಂದು ಕರ್ನಾಟಕ ರಾಜ್ಯ ಏಡ್ಸ್ ಪ್ರಿವೆನ್ಷನ್ ಸೊಸೈಟಿ ಹೇಳಿದೆ.
ರಾಜ್ಯದಲ್ಲಿ ಸಾಮಾನ್ಯ ಹಾಗೂ ಅಪಾಯದ ಅಂಚಿನಲ್ಲಿರುವ ಜನರಲ್ಲಿ, ಪರೀಕ್ಷೆಗೆ ಒಳಪಡದ ಎಚ್‌ಐವಿ ಸೋಂಕಿತರಿಗೆ ಅವರ ಎಚ್‌ಐವಿ ಸ್ಥಿತಿ ತಿಳಿಯಲು breakfreeindia.org - HIV Self Risk Assessment QR Code ಅನ್ನು ಸ್ಕಾೃನ್ ಮಾಡಲು ಅವಕಾಶ ಕಲ್ಪಿಸಲಾಗಿದೆ. ಇದರಲ್ಲಿ ಅಪಾಯವಿದ್ದರೆ ಎಚ್‌ಐವಿ ಪರೀಕ್ಷೆಗೆ ಒಳಪಡಲು ಸೂಚಿಸಲಾಗುತ್ತಿದೆ ಎಂದು ತಿಳಿಸಿದ್ದಾರೆ.
ರಾಜ್ಯದಲ್ಲಿ ಎಚ್‌ಐವಿ ಸೋಂಕಿನ ಹರಡುವಿಕೆ ನಿಯಂತ್ರಿಸುವ ಉದ್ದೇಶದಿಂದ ಮೊಬಿಲೈಸೇಷನ್ ಫಾರ್ ಏಡ್ಸ್ ಸುರಕ್ಷಾ (ಎಂಎಎಸ್)ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಎಚ್‌ಐವಿ/ಏಡ್ಸ್ ಬಗ್ಗೆ ಕಾಲೇಜು ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸಲು ಎಂಟು ತಿಂಗಳ ರೆಡ್ ರಿಬ್ಬನ್ ಜಾಗೃತಿ ಅಭಿಯಾನದಲ್ಲಿ, ಪ್ರತಿ ತಿಂಗಳು ವಿವಿಧ ಕಾರ್ಯಚಟುವಟಿಕೆ ನಡೆಸಲು ಸೂಚಿಸಲಾಗಿದೆ ಎಂದು ಸೊಸೈಟಿಯ ಯೋಜನಾ ನಿರ್ದೇಶಕರು ಮಾಹಿತಿ ನೀಡಿದ್ದಾರೆ.
ಗೃಹ, ಶಿಕ್ಷಣ, ಸಾರಿಗೆ ಸೇರಿ ವಿವಿಧ ಇಲಾಖೆಗಳ ವ್ಯಾಪ್ತಿಯಲ್ಲಿ ಎಚ್‌ಐವಿ ಬಗ್ಗೆ ಜಾಗೃತಿಯ ಜತೆಗೆ, ಆರೋಗ್ಯ ತಪಾಸಣಾ ಶಿಬಿರಗಳನ್ನು ನಡೆಸಲಾಗುತ್ತಿದೆ. 2004ರಿಂದ ಈವರೆಗೆ 18ರಿಂದ 35 ವರ್ಷದೊಳಗಿನ 39,028 ಎಚ್‌ಐವಿ ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದಾರೆ. ಎಚ್‌ಐವಿ ಮತ್ತು ಏಡ್ಸ್ (ತಡೆ ಮತ್ತು ನಿಯಂತ್ರಣ) ಕಾಯ್ದೆ 2017ರ ಪ್ರಕಾರ ಯಾವುದೇ ವ್ಯಕ್ತಿಗೆ ಎಚ್‌ಐವಿ ಪರೀಕ್ಷೆ ಕಡ್ಡಾಯಗೊಳಿಸಲು ಅವಕಾಶ ಇರುವುದಿಲ್ಲ ಎಂದು ಹೇಳಿದ್ದಾರೆ.
ರಾಜ್ಯದಲ್ಲಿ ಎಚ್‌ಐವಿ ಸ್ಥಿತಿಯನ್ನು ತಿಳಿಯದೆ ಇರುವವರಲ್ಲಿ ಜಾಗೃತಿ ಮೂಡಿಸುವ ಸಲುವಾಗಿ ಅಭಿಯಾನ ಆರಂಭಿಸಲಾಗಿದ್ದು, ಹೆಚ್ಚು ಅಪಾಯಕಾರಿ ನಡವಳಿಕೆಯ ಗುಂಪುಗಳನ್ನು ಡೇಟಿಂಗ್ ಆಪ್ಸ್‌ಗಳಲ್ಲಿ ಜಾಹಿರಾತು ನೀಡಿ ಹೆಚ್‌ಐವಿ ಸೋಂಕಿನ ಕುರಿತು ಅರಿವು ಮೂಡಿಸಲಾಗುತ್ತಿದೆ ಎಂದು ತಿಳಿಸಿದ್ದಾರೆ.