ಕಲಾವಿದರು ರಚಿಸಿರುವ ಐತಿಹಾಸಿಕ ಚಿತ್ರಗಳು.ಕಲಾವಿದ ಅಮರೇಶ ಕೈಚಳಕದಲ್ಲಿ ಮೂಡಿದ ಮಲಿಯಾಬಾದ್ ಕಲ್ಲಾನೆ.  
ರಾಜ್ಯ

ರಾಯಚೂರು ಉತ್ಸವದಲ್ಲಿ ಕಲಾವಿದರ ಕೈಚಳಕದಲ್ಲಿ ಅರಳಿದ ಇತಿಹಾಸ

ಪ್ರಮುಖ ಮುಖ್ಯಾಂಶಗಳು

  • ಕುಂಚದಲ್ಲಿ ಹೊರಬಂದ ಪರಂಪರೆ
  • ಐತಿಹಾಸಿಕ ಕೋಟೆಗಳ ಬಣ್ಣದ ವೈಭವ
ರಾಯಚೂರು: ಎಡದೊರೆ ನಾಡು ರಾಯಚೂರು ಜಿಲ್ಲಾ ಉತ್ಸವದ ಅಂಗವಾಗಿ ನಗರದಲ್ಲಿ ಆಯೋಜಿಸಿದ್ದ ಸಂಗೀತ, ನೃತ್ಯ ಮತ್ತು ಚಿತ್ರಕಲೆ ಪ್ರದರ್ಶನ ಕಲಾಭಿಮಾನಿಗಳ ಗಮನ ಸೆಳೆಯಿತು. ನಗರದ ಕೃಷಿ ವಿಶ್ವವಿದ್ಯಾಲಯದ ಆವರಣದಲ್ಲಿ ಹಮ್ಮಿಕೊಂಡಿರುವ ಚಿತ್ರಕಲಾ ಶಿಬಿರದಲ್ಲಿ ನಾಡಿನ ಹೆಸರಾಂತ ಕಲಾವಿದರು ಪಾಲ್ಗೊಂಡು ತಮ್ಮ ಪ್ರತಿಭೆ ಮೆರೆದರು.
ಕಲಾವಿದರ ಕಲ್ಪನೆಯಲ್ಲಿ ಮೂಡಿಬಂದ ವೈವಿಧ್ಯಮಯ ಚಿತ್ತಾರಗಳನ್ನು ಸಾರ್ವಜನಿಕರ ವೀಕ್ಷಣೆಗಾಗಿ ಪ್ರದರ್ಶನಕ್ಕಿಡಲಾಗಿತ್ತು. ಈ ಚಿತ್ರಕಲಾ ಶಿಬಿರಕ್ಕೆ ಭೇಟಿ ನೀಡಿದ ಪ್ರೇಕ್ಷಕರು ಪ್ರದರ್ಶಿತಗೊಂಡ ಕಲಾಕೃತಿಗಳನ್ನು ಕಂಡು ಬೆರಗಾದರಲ್ಲದೆ, ಮುಕ್ತ ಕಂಠದಿಂದ ಕಲಾವಿದರನ್ನು ಪ್ರಶಂಸಿಸಿದರು. ಈ ಶಿಬಿರವು ರಾಯಚೂರಿನ ಸಾಂಸ್ಕೃತಿಕ ಶ್ರೀಮಂತಿಕೆಯನ್ನು ಬಿಂಬಿಸುವ ವೇದಿಕೆಯಾಗಿ ಮಾರ್ಪಟ್ಟಿತ್ತು.
ಹಿರಿಯ ಚಿತ್ರ ಕಲಾವಿದ ಎಚ್.ಎಸ್.ಮ್ಯಾದರ, ಸಂತೋಷ ಅದಾನಿ ಹಾಗೂ ಅಮರೇಶ ಸೇರಿದಂತೆ ಒಟ್ಟು 28 ಜನ ನುರಿತ ಚಿತ್ರಕಲಾವಿದರು ತಮ್ಮ ಕೈಚಳಕದ ಮೂಲಕ ರಾಯಚೂರು ಜಿಲ್ಲೆಯ ಐತಿಹಾಸಿಕ ಪರಂಪರೆಯನ್ನು ಕ್ಯಾನ್ವಾಸ್ ಮೇಲೆ ಅರಳಿಸಿದರು.
ಜಿಲ್ಲೆಯ ಇತಿಹಾಸ ಪ್ರಸಿದ್ಧ ತಾಣಗಳಾದ ರಾಯಚೂರಿನ ಕಲ್ಲಾನೆ, ಮಲಿಯಾಬಾದ್ ಕಲ್ಲಾನೆ, ರಾಯಚೂರು ಕೋಟೆ, ಜಲದುರ್ಗ ಕೋಟೆ, ಗುಬ್ಬರ್ ಬೆಟ್ಟ ಕೋಟೆ ದರ್ವಾಜ, ನವರಂಗ ದರ್ವಾಜ ಹಾಗೂ ಮಾವಿನ ಕೆರೆಯ ಚಿತ್ರಗಳು ಪ್ರಮುಖ ಆಕರ್ಷಣೆಯಾಗಿದ್ದವು. ಅಲ್ಲದೆ, ಜಿಲ್ಲೆಯ ಪ್ರಗತಿಯ ಸಂಕೇತಗಳಾದ ಆರ್‌ಟಿಪಿಎಸ್ ಮತ್ತು ವೈಟಿಪಿಎಸ್ ಘಟಕಗಳ ಚಿತ್ರಗಳನ್ನು ಸಹ ಕಲಾವಿದರು ಅತ್ಯಂತ ಮನಮೋಹಕವಾಗಿ ರಚಿಸಿ ಪ್ರದರ್ಶಿಸಿದರು.