ಆಯುಷ್ಯ ವೈದ್ಯಾಧಿಕಾರಿಗಳ ಹುದ್ದೆಗಳಿಗೆ ನೇಮಕಗೊಳಿಸುವಂತೆ ಒತ್ತಾಯಿಸಿ ಜಿಲ್ಲೆಯ ಆಯುಷ್ಯ ವೈದ್ಯಾಧಿಕಾರಿಗಳ ಪರವಾಗಿ ಜಿಲ್ಲಾಧಿಕಾರಿ ಡಾ. ಆನಂದ ಕೆ. ಅವರಿಗೆ ಮನವಿ ಸಲ್ಲಿಸಲಾಯಿತು. ಸಂತೋಷ ಬಗಲಿ ಮತ್ತಿತರರಿದ್ದಾರೆ.
- ಜಿಲ್ಲಾಧಿಕಾರಿ ಡಾ. ಆನಂದ ಕೆ. ಅವರಿಗೆ ಮನವಿ
- ಕೋವಿಡ್ ಸೇವೆ ಸಲ್ಲಿಸಿದವರಿಗೆ ಆದ್ಯತೆ ನೀಡಿ
ವಿಜಯಪುರ: ಕೋವಿಡ್ ಸಂದರ್ಭದಲ್ಲಿ ಸೇವೆ ಸಲ್ಲಿಸಿ ಸರ್ಕಾರದಿಂದ ಅನ್ಯಾಯಕ್ಕೆ ಒಳಗಾದ ಆಯುಷ್ಯ ವೈದ್ಯಾಧಿಕಾರಿಗಳನ್ನು ರಾಜ್ಯದಲ್ಲಿ ಖಾಲಿ ಇರುವ ವೈದ್ಯಾಧಿಕಾರಿಗಳ ಹುದ್ದೆಗಳಿಗೆ ನೇಮಕ ಮಾಡಿಕೊಳ್ಳುವಂತೆ ಒತ್ತಾಯಿಸಿ ಜಿಲ್ಲೆಯ ಸಮಸ್ತ ಆಯುಷ್ಯ ವೈದ್ಯಾಧಿಕಾರಿಗಳ ಪರವಾಗಿ ಬುಧವಾರ ಜಿಲ್ಲಾಧಿಕಾರಿ ಡಾ. ಆನಂದ ಕೆ. ಅವರಿಗೆ ಮನವಿ ಸಲ್ಲಿಸಲಾಯಿತು.
ಕೋವಿಡ್ ಮಹಾಮಾರಿ ವಕ್ಕರಿಸಿಕೊಂಡ ಸಂದರ್ಭದಲ್ಲಿ ರಾಜ್ಯ ಸರ್ಕಾರದ ಆರೋಗ್ಯ ವ್ಯವಸ್ಥೆಗೆ ಬೆನ್ನುಲುಬಾಗಿ ನಿಂತು ಕಾರ್ಯ ನಿರ್ವಹಿಸಿದ ಆಯುಷ್ಯ ವೈದ್ಯಾಧಿಕಾರಿಗಳು ತಮ್ಮ ಜೀವದ ಹಂಗು ತೊರೆದು ಜನರ ಆರೋಗ್ಯ ರಕ್ಷಣೆಗೆ ಮಹತ್ವದ ಸೇವೆ ಸಲ್ಲಿಸಿದ್ದಾರೆ. ರಾಜ್ಯದ ವಿವಿಧ ಭಾಗಗಳಲ್ಲಿ ಕೋವಿಡ್ ಪರೀಕ್ಷೆ, ಚಿಕಿತ್ಸಾ ಕೇಂದ್ರಗಳ ನಿರ್ವಹಣೆ, ಮನೆ ಮನೆ ಸಮೀಕ್ಷೆ, ಜಾಗೃತಿ ಕಾರ್ಯಕ್ರಮಗಳು ಸೇರಿ ಹಲವು ಜವಾಬ್ದಾರಿಗಳನ್ನು ಸಮರ್ಥವಾಗಿ ನಿರ್ವಹಿಸಿದ್ದಾರೆ.
ಆದರೆ, ಕೋವಿಡ್ ಸೊಂಕಿನ ತೀವ್ರತೆ ಕಡಿಮೆಯಾದ ನಂತರ ಈ ವೈದ್ಯಾಧಿಕಾರಿಗಳಿಗೆ ಯಾವುದೇ ಶಾಶ್ವತ ಪರ್ಯಾಯ ವ್ಯವಸ್ಥೆ ಕಲ್ಪಿಸದೆ ಸೇವೆಯಿಂದ ಬಿಡುಗಡೆ ಮಾಡಲಾಗಿದೆ. ಸರ್ಕಾರದ ಸಂಕಷ್ಟದ ಸಂದರ್ಭದಲ್ಲಿ ಸೇವೆ ಸಲ್ಲಿಸಿದ ವೈದ್ಯರನ್ನು ನಂತರ ಕಡೆಗಣಿಸುವದು ಅತ್ಯಂತ ಬೇಸರದ ಸಂಗತಿಯಾಗಿದೆ.
ಪ್ರಸ್ತುತ ರಾಜ್ಯದಲ್ಲಿ ತಾತ್ಕಾಲಿಕವಾಗಿ 900 ವೈದ್ಯಾಧಿಕಾರಿಗಳ ಹುದ್ದೆಗಳನ್ನು ನೇಮಕ ಮಾಡಿಕೊಳ್ಳಲು ಸರ್ಕಾರ ಮುಂದಾಗಿದೆ. ಈ ಹುದ್ದೆಗಳಿಗೆ ನೇಮಕಾತಿ ನಡೆಸುವ ಸಂದರ್ಭದಲ್ಲಿ ಕೋವಿಡ್ ಸಮಯದಲ್ಲಿ ಸೇವೆ ಸಲ್ಲಿಸಿದ ಆಯುಷ್ಯ ವೈದ್ಯಾಧಿಕಾರಿಗಳಿಗೆ ಮೊದಲ ಆದ್ಯತೆ ನೀಡಬೇಕು. ಅದರಿಂದ ಅವರ ಸೇವೆಗೆ ಗೌರವ ದೊರೆಯುವುದರ ಜತೆಗೆ ಸರ್ಕಾರದಿಂದ ಅವರಿಗೆ ಆದ ಅನ್ಯಾಯಕ್ಕೆ ನ್ಯಾಯ ಒದಗಿಸಿದಂತಾಗುತ್ತದೆ ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.
ಸಂತೋಷ ಬಗಲಿ ಮತ್ತಿತರರಿದ್ದರು.