ಪಂ. ಶೇಷಗಿರಿ ಹಾನಗಲ್ 
ರಾಜ್ಯ

ಇಂದಿರಾ ಗಾಂಧಿ ಹೆಸರಿನಲ್ಲಿ ಹಿಂದೂಸ್ತಾನಿ ತಾಳ!

ನಾಡಿನ ಶ್ರೇಷ್ಠ ತಬಲಾವಾದಕರಲ್ಲೊಬ್ಬರಾದ ಪಂಡಿತ್ ರವೀಂದ್ರ ಯಾವಗಲ್ ನೇತೃತ್ವದ ಶ್ರೀರಾಮ ಕಲಾ ವೇದಿಕೆಯು ಗುರು ಪಂ. ಶೇಷಗಿರಿ ಹಾನಗಲ್ ಅವರ ಜನ್ಮಶತಮಾನೋತ್ಸವ ಹಾಗೂ ರಾಮಚಂದ್ರ ಯಾವಗಲ್ ಸ್ಮರಣಾರ್ಥ ಜ.25ರಂದು ಇಡೀ ದಿನ ನಾದ ನಮನ ಕಾರ್ಯಕ್ರಮ ಆಯೋಜಿಸಿದೆ. ಈ ಸಂದರ್ಭದಲ್ಲಿ ಶೇಷಗಿರಿ ಹಾನಗಲ್ ಅವರ ನೆನಪು ಹಾಗೂ ವೇದಿಕೆಯ ಪುಟ್ಟ ಪರಿಚಯ ಇಲ್ಲಿದೆ.
ಅದು ಸುಮಾರು 1966ರ ಸಮಯ. ಆಗ ಕೇಂದ್ರದಲ್ಲಿ ವಾರ್ತಾ ಮತ್ತು ಪ್ರಸಾರ ಇಲಾಖೆಯ ಸಚಿವರಾಗಿದ್ದವರು ಕಾಂಗ್ರೆಸ್ ನಾಯಕಿ ಇಂದಿರಾ ಗಾಂಧಿ. ಒಮ್ಮೆ ಸಂಗೀತ ಕಲಾವಿದರ ನಿಯೋಗವೊಂದು ಅವರ ಬಳಿ ತೆರಳುತ್ತದೆ. ಅವರೆಲ್ಲ ಆಕಾಶವಾಣಿಯ ನಿಲಯ ಕಲಾವಿದರು. ಆದರೆ ಅವರದು ಗುತ್ತಿಗೆ ಆಧಾರದಲ್ಲಿ- ಒಂಥರ ದಿನಗೂಲಿ - ಕೆಲಸ. ಮೂರು ತಿಂಗಳಿಗೊಮ್ಮೆ ಅವರ ಕಾಂಟ್ರಾಕ್ಟ್ ಮುಗಿದುಹೋಗುತ್ತಿತ್ತು. ಮತ್ತೆಮತ್ತೆ ಕೆಲಸದ ಅಭದ್ರತೆ ಕಾಡುತ್ತಿತ್ತು. ಇದರಿಂದ ಅವರ ಕುಟುಂಬವೂ ಸಂಕಟಪಡುತ್ತಿತ್ತು. ಆ ಗೋಳನ್ನು ಸಚಿವರಲ್ಲಿ ತೋಡಿಕೊಳ್ಳೋಣವೆಂದು ತೆರಳಿದ ನಿಯೋಗ ಅದಾಗಿತ್ತು. ಭೇಟಿಯಾಯಿತು. ಮನವಿ ಅರ್ಪಿಸಿದರು.
ಇಂದಿರಾಗಾಂದಿಯವರಿಗೆ ಕಲಾವಿದರ ಕುರಿತು ತುಂಬ ಗೌರವ. ಕಲಾವಿದರು ದೇಶದ ಸಾಂಸ್ಕೃತಿಕ ರಾಯಭಾರಿಗಳು, ಅಂಥ ಕ್ರಿಯಾಶೀಲ ಮನಸ್ಸುಗಳಿಗೆ ಕಿರಿಕಿರಿಯಿಲ್ಲದ ಪೂರಕ ವಾತಾವರಣ ಬೇಕು ಎಂಬ ಸದಾಶಯ ಅವರದು. ಇಂಥ ಕಲಾವಿದರನ್ನು ನಮ್ಮ ಸರ್ಕಾರ ಹೀಗೆಲ್ಲ ನಡೆಸಿಕೊಳ್ಳುತ್ತಿದೆಯಲ್ಲ ಎಂಬ ಅಪರಾಧಿ ಪ್ರಜ್ಞೆ ಅವರನ್ನು ಕಾಡಿತೆಂದೆನಿಸುತ್ತದೆ. ಹಾಗಾಗಿ ವಿಷಯವನ್ನು ಎಳೆಯಲು ಬಿಡದೆ ಗಂಭೀರವಾಗಿ ಪರಿಗಣಿಸಿ ಆಕಾಶವಾಣಿ ನಿಲಯ ಕಲಾವಿದರನ್ನು ರಾಷ್ಟ್ರಾಧ್ಯಕ್ಷರ ವ್ಯಾಪ್ತಿಗೆ ಜೋಡಿಸಿದರು.ಅಲ್ಲದೆ 58 ವರ್ಷದವರೆಗೂ ಅವರ ಕೆಲಸವನ್ನು ಕಾಯಂ ಆಗುವಂತೆಯೂ ಬೇರೆ ಅಧಿಕಾರಿಗಳ ಕಿರಿಕಿರಿ ಇಲ್ಲದಂತೆಯೂ ಮಾಡಿದರು. ಆ ಮೂಲಕ ಕಲಾವಿದರ ಪಾಲಿಗೆ ಒಂದು ಸುದೀರ್ಘ ನಿರಾಳತೆ ಒದಗಿಸಿದರು.
ಅಂದು ಆ ನಿಯೋಗದ ನೇತೃತ್ವ ವಹಿಸಿದ್ದವರು ಸುಪ್ರಸಿದ್ಧ ತಬಲಾ ವಾದಕ ಪಂಡಿತ್ ಶೇಷಗಿರಿ ಹಾನಗಲ್. ಇಂದಿರಾ ಅವರೇನೋ ಮಹದುಪಕಾರ ಮಾಡಿದರು. ಅವರಿಗೊಂದು ಕೃತಜ್ಞತೆ ಹೇಳುವುದು ಬೇಡವೇ? ಹೇಳದಿದ್ದರೆ ನಾವು ಕೃತಘ್ನರಾಗಿಬಿಡುವುದಿಲ್ಲವೆ ಎಂಬ ಯೋಚನೆ ಅವರ ತಲೆಯಲ್ಲಿ ಕೊರೆಯತೊಡಗಿತು. ಆಗ ಅವರಿಗೆ ಹೊಳೆದಿದ್ದೇ ಹೊಸ ತಾಳವೊಂದರ ರಚನೆ. ಆ ಕಾಲದಲ್ಲಿ ಇಲ್ಲದೇ ಇರುವ ಒಂಬತ್ತೂವರೆ ಮಾತ್ರೆಯ ತಾಳವೊಂದನ್ನು ಸೃಷ್ಟಿಸಿದರು. ಅದಕ್ಕೆ ‘ಇಂದಿರಾ ತಾಲ್’ ಎಂದು ಹೆಸರಿಟ್ಟು ಸಂಗೀತ ಲೋಕದಲ್ಲಿ ಇಂದಿರಾ ಗಾಂಧಿ ಅವರ ಹೆಸರು ಶಾಶ್ವತವಾಗುವಂತೆ ಮಾಡಿದರು! ಅಷ್ಟೇ ಅಲ್ಲ, ಪುಣೆಯ ಸವಾಯಿ ಗಂಧರ್ವ ಸಂಗೀತೋತ್ಸವದಲ್ಲಿ ಅದೇ ತಾಳದಲ್ಲಿ ಸೋಲೋ ನುಡಿಸಿ ಸೈ ಅನಿಸಿಕೊಂಡರು.ಇದು ಶೇಷಗಿರಿ ಅವರಿಗಿರುವ ಹೊಸತರ ತುಡಿತಕ್ಕೆ, ಅನ್ವೇಷಕ ಬುದ್ದಿಗೆ ಸಾಕ್ಷಿ ಕೂಡ.

ಗಂಗಾ ಚಲನ್

ಶೇಷಗಿರಿ ಹಾನಗಲ್ ಅವರ ತಬಲಾ ವಾದನ ಎಂದಾಕ್ಷಣ ನೆನಪಾಗುವುದು ‘ಗಂಗಾ ಚಲನ್’. ಇದು ಕೂಡ ಅವರದೇ ಪ್ರಯೋಗ. ಸಾಮಾನ್ಯವಾಗಿ ತಬಲಾ ನುಡಿಸುವವರು ಕಾಯದಾಗಳನ್ನೋ ಬೋಲುಗಳನ್ನೋ ಒಂದು ಪಟ್ಟು, ಎರಡು ಪಟ್ಟು, ನಾಲ್ಕು, ಸಾಧ್ಯವಾದರೆ ಎಂಟುಪಟ್ಟು ವೇಗದಲ್ಲಿ ಬಾರಿಸುವುದುಂಟು. ಅದು ಸಾಂಪ್ರದಾಯಿಕ ಪದ್ಧತಿ. ಹಾನಗಲ್ ಅದಕ್ಕೊಂದು ಹೊಸರೂಪ ಕೊಟ್ಟರು. ಒಂದು, ಒಂದೂವರೆ, ಎರಡು, ಮೂರು, ನಾಲ್ಕು, ಐದು, ಆರು, ಏಳು, ಎಂಟು... ಹೀಗೆ ಚಲಿಸುವಂತಹ ನಡೆಯೊಂದನ್ನು ರೂಪಿಸಿದರು. ಸಂಗೀತದ ಭಾಷೆಯಲ್ಲಿ ಹೇಳುವುದಾದರೆ ಚತುಶ್ರ, ಖಂಡ, ತಿಸ್ರ, ಮಿಶ್ರ, ಚತುಶ್ರ ಮೇಲ್ ಕಾಲ... ಹೀಗೆ ಸಾಗುವ ವಾದನ. ಅದಕ್ಕೆ ಅವರಿಟ್ಟ ಹೆಸರು ಗಂಗಾ ಚಲನ್. ಇದರಲ್ಲಿ ಪೇಷ್ಕಾರ್, ಚಕ್ರಧಾರ್, ಕಾಯದಾ ಕೂಡ ನುಡಿಸತೊಡಗಿ ಬೆರಗು ಹುಟ್ಟಿಸಿದ್ದಲ್ಲದೇ ಅದೊಂದು ತಬಲಾವಾದನದ ಭಾಗವಾಗುವಂತೆ ಮಾಡಿಬಿಟ್ಟರು. ತಮ್ಮ ಶಿಷ್ಯರಿಗೂ ಅದನ್ನು ಕಲಿಸಿದರು. ಗಂಗಾ ಎಂದರೆ ಅಕ್ಕ ಗಂಗೂಬಾಯಿ ಹಾನಗಲ್. ಗಂಗಾನದಿಯ ಹರಿವು ಮತ್ತು ಗಂಗೂಬಾಯಿಯವರ ಗಾನಲಹರಿಯನ್ನು ಸಂಕೇತಿಸುವ ವಿಶಿಷ್ಟ ಲಯ ಇದಾಗಿರುವುದರಿಂದ ಅದು ಗಂಗಾ ಚಲನ್!.
ಧಾರವಾಡದ ಪಂ. ಶೇಷಗಿರಿ ಹಾನಗಲ್ ಶ್ರುತಿ, ಲಯ ತಾಳಗಳಲ್ಲಿ ಅಪ್ರತಿಮ ಕೌಶಲ ಬೆಳೆಸಿಕೊಂಡವರು. ಅವರು ತಬಲಾ ನುಡಿಸುತ್ತಿದ್ದರೆ ಅಲ್ಲಿ ಬೋಲ್‌ಗಳು ಸ್ಪಷ್ಟವಾಗಿ ಕೇಳುತ್ತಿದ್ದವು. ಅವರ ಬೆರಳುಗಳು ನಯವಾಗಿ ತಬಲಾದ ಮೇಲೆ ಸಂಚರಿಸುತ್ತಿದ್ದವು. ತಬಲಾದ ಸಕಲ ಸಾಧ್ಯತೆಗಳೂ ಅವರ ವಾದನದಲ್ಲಿ ನಲಿಯುತ್ತಿದ್ದವು. ಉಳಿದವರು ನುಡಿಸಲು ಕಷ್ಟವೆನ್ನುವ ಸಂಗತಿಗಳೆಲ್ಲ ಅವರ ಕೈಗೆ ಸುಲಭವಾಗಿ ಒಲಿಯುತ್ತಿದ್ದವು.ಹಾಗೆ ನೋಡಿದರೆ ಅವರು ಕಲಿತಿದ್ದು ನಾಲ್ಕನೆಯ ತರಗತಿಯವರೆಗೆ ಮಾತ್ರ. ಅದೂ ತಾಯಿಯ ಆಸರೆಯಲ್ಲಿ ಶಾಲೆಗೆ ಹೋಗಿ ಬರಬೇಕಾಯಿತು. ಏಕೆಂದರೆ ಅವರನ್ನು ಬಾಲ್ಯದಲ್ಲಿಯೇ ಪೋಲಿಯೊ ಬಾಧಿಸಿತು. ಆದರೆ ಅದು ಸಂಗೀತ ಕ್ಷೇತ್ರಕ್ಕೆ ವರವಾಗಿ ಬದಲಾಗಿದ್ದು ಅವರ ಛಲದಿಂದ. ಶಾಲೆಗೆ ಹೋಗಲಾಗದ ಬಾಲಕನಿಗೆ ಸಂಗೀತ ಕಲಿಯಲು ಬೇಕಾದಷ್ಟು ಸಮಯ ಸಿಕ್ಕಿತು. ಹಾರ್ಮೋನಿಯಂ, ವೈಲಿನ್ ಕೈಗೆತ್ತಿಕೊಂಡರು. ಜತೆಗೇ ತಬಲಾ ಕಲಿಯತೊಡಗಿದರು. ಕ್ರಮೇಣ ತಬಲಾದ ತಿರಕಿಟವೇ ಹೆಚ್ಚು ಸೆಳೆಯಿತು. ಪಂ. ಲಾಲಜಿ ಗೋಖಲೆ, ಪಂ. ನಾರಾಯಣ ರಾವ್ ಇಂಧೋರಕರ ಅವರಿಂದ ತಬಲಾ ನುಡಿಸುವಿಕೆಯ ಸೂಕ್ಷ್ಮಗಳನ್ನು ಕಲಿತರು.
1922ರಲ್ಲಿ ಧಾರವಾಡದಲ್ಲಿ ಜನಿಸಿದ ಶೇಷಗಿರಿ ಹಾನಗಲ್ ತಬಲಾದಲ್ಲಿ ಸ್ವತಂತ್ರ ಶೈಲಿ ರೂಢಿಸಿಕೊಂಡಿದ್ದರು. ತಂದೆ ಕೃಷ್ಣಪ್ಪ, ಚಿಕ್ಕಪ್ಪ ರಾಮರಾಯರು ತಬಲಾ ವಿದ್ವಾಂಸರು. ಅತ್ತೆ ತಾರಾಬಾಯಿ ಹಿಂದೂಸ್ತಾನಿ ಸಂಗೀತ ಗಾಯಕಿಯಾದರೆ ಅಕ್ಕ ವಿದುಷಿ ಗಂಗೂಬಾಯಿ ಹಾನಗಲ್ ಸಂಗೀತ ಗಂಗೆ. ಆಕಾಶವಾಣಿಯ ಉದ್ಯೋಗ, ಗಂಗೂಬಾಯಿ ಅವರ ಕಛೇರಿಗಳಲ್ಲಿ ತಬಲಾ ಸಾಥ್... ಇವೆರಡೂ ಅವರಿಗೆ ಅನಿವಾರ್ಯವಾಗಿತ್ತು. ಹೀಗಾಗಿ ಬೇರೆ ಕಲಾವಿದರಿಗೆ ಸಾಥ್ ನೀಡುವ ಅನೇಕ ಅವಕಾಶಗಳಿಂದ ಅವರು ವಂಚಿತರಾದರು. ಹಾಗಿದ್ದೂ ಸವಾಯಿ ಗಂಧರ್ವ, ಉಸ್ತಾದ ರೆಹಮತ್‌ಖಾನ್, ಬಸವರಾಜ ರಾಜಗುರು, ಭೀಮಸೇನ ಜೋಶಿ, ಮಲ್ಲಿಕಾರ್ಜುನ ಮನ್ಸೂರ್, ಬಾಲೇಖಾನ್, ಮಾಧವ ಗುಡಿ ಮುಂತಾದ ದಿಗ್ಗಜರಿಗೆ ತಬಲಾ ಸಾಥಿ ನೀಡಿದ ಹೆಗ್ಗಳಿಕೆ ಇವರಿಗಿದೆ. ಎಲ್ಲಕ್ಕಿಂತ ಮುಖ್ಯವಾಗಿ ರವೀಂದ್ರ ಯಾವಗಲ್, ಸೂರಜ್ ಪುರಂದರೆ, ಅಜಯ್ ಹಾನಗಲ್, ಗೋಪಾಲಕೃಷ್ಣ ಹೆಗಡೆ ಕಲಭಾಗ್, ವಿನಾಯಕ ಪಾಟೀಲ್ ಅವರಂಥ ಶಿಷ್ಯ ಪರಂಪರೆಯನ್ನೇ ಅವರು ಸಂಗೀತ ಕ್ಷೇತ್ರಕ್ಕೆ ಅಮೂಲ್ಯ ಕೊಡುಗೆಯಾಗಿ ನೀಡಿದ್ದಾರೆ.
‘ತಬಲಾ ಮಾತ್ರವಲ್ಲ. ಅವರ ಜೀವನ ವಿಧಾನವೂ ಅನುಕರಣೀಯವಾಗಿತ್ತು. ಕಲಾವಿದರ ನಡವಳಿಕೆ ಹೇಗಿರಬೇಕು ಎನ್ನುವುದಕ್ಕೆ ಅವರು ಮಾದರಿಯಾಗಿದ್ದರು. ಅವರು ಧರಿಸುವ ಬಟ್ಟೆಯ ಇಸಿ ಮುರಿಯುತ್ತಿರಲಿಲ್ಲ. ಶಿಷ್ಯರೂ ಹಾಗೆಯೇ ಇರಬೇಕೆಂದು ಅವರು ಬಯಸುತ್ತಿದ್ದರು. ಹಾಗೆಂದು ಒತ್ತಡ ಹಾಕುತ್ತಿರಲಿಲ್ಲ. ಅವರನ್ನು ನೋಡಿ ನಾವು ಕಲಿಯುತ್ತಿದ್ದೆವು. ಅಲ್ಲದೇ ಅವರು ಅಪಾರ ಸ್ವಾಭಿಮಾನಿಯೂ ಆಗಿದ್ದರು’ ಎಂದು ನೆನಪಿಸಿಕೊಳ್ಳುತ್ತಾರೆ ಪಂ. ರವೀಂದ್ರ ಯಾವಗಲ್.
ಗಂಗೂಬಾಯಿ ಹಾನಗಲ್ ಅವರೊಂದಿಗೆೆ ಅಮೆರಿಕ, ಲಂಡನ್, ಫ್ರಾನ್ಸ್, ಜರ್ಮನಿ, ಕೆನಡಾ ಮುಂತಾದ ಕಡೆಗಳಲ್ಲಿ ಸಂಗೀತ ಪ್ರವಾಸ ಮಾಡಿರುವ ಶೇಷಗಿರಿ ಹಾನಗಲ್ ಅವರನ್ನು ಕೇಂದ್ರ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ, ಕರ್ನಾಟಕ ಕಲಾತಿಲಕ ಬಿರುದು, ರಾಜ್ಯೋತ್ಸವ ಪ್ರಶಸ್ತಿ, ಸಂಗೀತ ಕಲಾಕಾರ ಇತ್ಯಾದಿ ಗೌರವಗಳು ಅವರಸಿ ಬಂದಿವೆ. ಪ್ರತಿಷ್ಠಿತ ಕನಕ ಪುರಂದರ ಪ್ರಶಸ್ತಿಗೂ ಭಾಜನರಾಗಿದ್ದಾರೆ. 2016ರಲ್ಲಿ ಅವರು ವಿಧಿವಶರಾದರು.

ಶ್ರೀರಾಮ ಕಲಾವೇದಿಕೆಗೆ 20 ವರ್ಷ

ಸಂಗೀತವು ಕೇವಲ ಮನೋರಂಜನೆಗಾಗಿ ಅಲ್ಲ, ಅದು ಆತ್ಮೋನ್ನತಿಯ ಮಾರ್ಗ ಕೂಡ ಎಂಬ ಮಾತಿದೆ. ನಮ್ಮ ದೇಶದ ಅನೇಕ ಮಹಾನ್ ಚೇತನಗಳು ಸಂಗೀತವನ್ನು ಒಂದು ತಪಸ್ಸಾಗಿ ಸ್ವೀಕರಿಸಿದ್ದಾರೆ ಮತ್ತು ಇಂದಿಗೂ ಅದನ್ನು ಮುಂದುವರಿಸುತ್ತಿದ್ದಾರೆ. ಹಿಂದೆ ಸಂಗೀತದ ಮೇಲೆ ಪ್ರೀತಿಯಿದ್ದರೂ ಅಂದಿನ ಸಾಮಾಜಿಕ ವ್ಯವಸ್ಥೆ ಮತ್ತು ಆರ್ಥಿಕ ಸಂಕಷ್ಟಗಳಿಂದಾಗಿ ಕೇವಲ ಕೇಳುಗರಾಗಿ ಉಳಿದು, ತಮ್ಮ ಕೈಲಾದ ಮಟ್ಟಿಗೆ ಸಂಗೀತ ಕ್ಷೇತ್ರಕ್ಕೆ ಸೇವೆ ಸಲ್ಲಿಸಿದ ಅನೇಕರಿದ್ದಾರೆ. ಅಂಥ ಮಹಿನೀಯರಲ್ಲಿ ಪಂ. ರವೀಂದ್ರ ಯಾವಗಲ್ ಅವರ ತಂದೆಯಾದ ರಾಮಚಂದ್ರ ಯಾವಗಲ್ ಕೂಡ ಒಬ್ಬರು. ರವೀಂದ್ರ ಅವರ ಬಾಲ್ಯದಲ್ಲಿಯೇ ತಬಲಾದ ಮೇಲಿದ್ದ ಅವರ ಆಸಕ್ತಿಯನ್ನು ಗುರುತಿಸಿ, ಪೋಷಿಸಿ, ಅವರನ್ನು ಒಬ್ಬ ಕಲಾವಿದನನ್ನಾಗಿ ರೂಪಿಸಿದ ರಾಮಚಂದ್ರ ಅವರದು ಒಂಥರ ತಪಸ್ಸೇ ಸರಿ.
ತಂದೆಯನ್ನು ಬೇಗನೇ ಕಳೆದುಕೊಂಡ ರವೀಂದ್ರ ಯಾವಗಲ್ ಅವರು, ತಂದೆಯ ನೆನಪಿಗಾಗಿ ಹುಬ್ಬಳ್ಳಿಯ ತಮ್ಮ ಸಣ್ಣ ಮನೆಯಲ್ಲಿ ಸಂಗೀತ ಬೈಠಕ್‌ಗಳನ್ನು ಆಯೋಜಿಸಲು ಪ್ರಾರಂಭಿಸಿದರು. ಈ ಬೈಠಕ್‌ಗಳಲ್ಲಿ ರಾಜ್ಯದ ಹಿರಿಯ ಕಲಾವಿದರಾದ ಪಂ. ನಾಗನಾಥ ಒಡೆಯರ್, ಪಂ. ಗಣಪತಿ ಭಟ್ ಅಂಥವರೂ ಕಛೇರಿ ನೀಡಿದ್ದರು. ಕೆಲಸದ ನಿಮಿತ್ತ ಬೆಂಗಳೂರಿಗೆ ಬಂದ ನಂತರ, ಈ ಚಟುವಟಿಕೆಗಳು ತಾತ್ಕಾಲಿಕವಾಗಿ ಸ್ಥಗಿತಗೊಂಡವಾದರೂ ಅದರಿಂದ ಪೂರ್ನ ಹೊರಬರಲು ರವೀಂದ್ರ ಅವರಿಗೆ ಆಗಲಿಲ್ಲ. 2000ನೇ ಇಸವಿಯಲ್ಲಿ ಬೈಠಕ್‌ಗಳ ಸರಣಿ ಮತ್ತೆ ಪ್ರಾರಂಭವಾಯಿತು. 2005ರಲ್ಲಿ ದಿವಂಗತ ಪಾರ್ವತಿಬಾಯಿ ಯಾವಗಲ್ ಅವರ ನೇತೃತ್ವದಲ್ಲಿ, ಶ್ರೀರಾಮ ಕಲಾ ವೇದಿಕೆ ಆರಂಭವಾಯಿತು. ಅದಕ್ಕೀಗ 20 ವರ್ಷ. ಪ್ರತಿವರ್ಷ ನಿಯಮಿತವಾಗಿ ಕಾರ್ಯಕ್ರಮಗಳನ್ನು ಆಯೋಜಿಸುತ್ತ ಬಂದಿದೆ.
- ರಾಜಶೇಖರ ಜೋಗಿನ್ಮನೆ
(ಸಹಾಯಕ ಸಂಪಾದಕ, ವಿಜಯವಾಣಿ)