ವಿಜಯಪುರದಲ್ಲಿ ಆಯೋಜಿಸಿದ್ದ ಹಿಂದೂ ಸಮಾಜೋತ್ಸವದಲ್ಲಿ ಕೀಲು ಕುದುರೆ, ಗಾರುಡಿ ಗೊಂಬೆ, ವಿವಿಧ ಕಲಾ ತಂಡಗಳು, ದೇವರ ಪಲ್ಲಕ್ಕಿ ಉತ್ಸವಗಳು ಆಕರ್ಷಣಿವಾಗಿದ್ದವು.
ವಿಜಯಪುರ : ಪಟ್ಟಣದ ಹಿಂದೂ ಸಮಾಜೋತ್ಸವ ಆಯೋಜನಾ ಸಮಿತಿಯಿಂದ ಹಮ್ಮಿಕೊಳ್ಳಲಾಗಿದ್ದ ಹಿಂದೂ ಸಮಾಜೋತ್ಸವ ಅದ್ದೂರಿಯಾಗಿ ನೆರವೇರಿಸಲಾಯಿತು.
ಜಿಲ್ಲಾ ಗ್ರಂಥಾಲಯದ ಆವರಣದಲ್ಲಿ ಮಧ್ಯಾಹ್ನ 3.30ಕ್ಕೆ ಗೋ ಪೂಜೆ ನೆರವೇರಿಸುವ ಮೂಲಕ ಶೋಭಾಯಾತ್ರೆಗೆ ಚಾಲನೆ ನೀಡಲಾಯಿತು. ಕೀಲು ಕುದುರೆ, ಗಾರುಡಿ ಗೊಂಬೆ, ವಿವಿಧ ಕಲಾ ತಂಡಗಳು, ದೇವರ ಪಲ್ಲಕ್ಕಿ ಉತ್ಸವಗಳು ಮತ್ತು ನೂರಕ್ಕೂ ಹೆಚ್ಚು ಮಕ್ಕಳ ವೈವಿಧ್ಯಮಯ ವೇಷಭೂಷಣ ಆಕರ್ಷಣಿಯವಾಗಿದ್ದವು. ಅಂಕತಟ್ಟಿ ನಂಜುಡಪ್ಪ ವೃತ್ತ, ಗಾಂಧಿಚೌಕ, ಬಜಾರ್ ರಸ್ತೆ ಸೇರಿ ಪ್ರಮುಖ ರಸ್ತೆಗಳಲ್ಲಿ ಶೋಭಾಯಾತ್ರೆ ಸಾಗಿತು.
ಆರ್ಎಸ್ಎಸ್ ಸಂಘದ ಪ್ರಾಂತ್ಯ ಕಾರ್ಯಕಾರಿಣಿ ಸದಸ್ಯ ರಾಧಾಕೃಷ್ಣ ಹೊಳ್ಳ ಮಾತನಾಡಿ, ಪ್ರಪಂಚದ ಉಳಿದ ದೇಶಗಳು ಉದಯಿಸುವ ಮೊದಲೇ ಭಾರತದಲ್ಲಿ ಉನ್ನತವಾದ ನಾಗರಿಕತೆ ಅಸ್ತಿತ್ವದಲ್ಲಿತ್ತು. ವರ್ಷಗಳ ಹಿಂದಿನ ಮಹಾಭಾರತ ಮತ್ತು ಅದಕ್ಕಿಂತಲೂ ಪುರಾತನವಾದ ರಾಮಾಯಣ ಭವ್ಯ ಇತಿಹಾಸಕ್ಕೆ ಸಾಕ್ಷಿ ಪುರಾವೆಗಳಾಗಿವೆ ಎಂದರು.
ನದಿಗಳನ್ನು ಕೇವಲ ನೀರಿನ ಮೂಲವಾಗಿ ನೋಡದೆ ಗಂಗೆ, ಕಾವೇರಿ, ಗೋದಾವರಿಯಂತಹ ಮಾತೆಯರ ರೂಪದಲ್ಲಿ ಪೂಜಿಸುತ್ತೇವೆ. ಕಾಶ್ಮೀರದಿಂದ ಕನ್ಯಾಕುಮಾರಿಯವರೆಗೆ ಗೋಮಾತೆಯನ್ನು ಆರಾಧಿಸುವ ಸಂಸ್ಕಾರ ನಮ್ಮದು. ಸಂಘದ ಶತಮಾನೋತ್ಸವ ಪ್ರಯುಕ್ತ ಪಂಚ ಪರಿವರ್ತನೆಗಳಾದ ಸಾಮರಸ್ಯ, ಕುಟುಂಬ ಪ್ರಬೋಧನ, ಪರಿಸರ ಸಂರಕ್ಷಣೆ, ಸ್ವದೇಶಿ ಜೀವನಶೈಲಿ ಮತ್ತು ನಾಗರಿಕ ಶಿಷ್ಟಾಚಾರಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಲು ಕರೆ ನೀಡಿದರು. ತಾಲೂಕು ಉಪಾಧ್ಯಕ್ಷೆ ದೀಪಾ ರಮೇಶ್, ಮುಖಂಡರು, ಸಂಘ ಸಂಸ್ಥೆಗಳ ಪದಾಧಿಕಾರಿಗಳು, ಕಾರ್ಯಕರ್ತರು ಭಾಗವಹಿಸಿದ್ದರು.