ಶ್ರೀ ಕಡಕೋಳ ಮಡಿವಾಳೇಶ್ವರರು. 
ರಾಜ್ಯ

ಚಿಣಮಗೇರಿ ಗುಡ್ಡಕ್ಕೆ ಪಾದಯಾತ್ರೆ ಇಂದು

ಯಡ್ರಾಮಿ: ಸಂಪ್ರದಾಯದಂತೆ ಕಡಕೋಳ ಮಹಾಮಠದ ಪೀಠಾಧಿಪತಿ ಶ್ರೀ ಡಾ.ರುದ್ರಮುನಿ ಶಿವಾಚಾರ್ಯರ ನೇತೃತ್ವದಲ್ಲಿ ಶುಕ್ರವಾರ ಕಡಕೋಳ ಮಡಿವಾಳೇಶ್ವರ ಮಹಾಮಠದಿಂದ ಅಪಜಲಪುರ ತಾಲೂಕಿನ ಚಿಣಮಗೇರಿಯ ಶ್ರೀ ಮಹಾಂತೇಶ್ವರ ಗುಡ್ಡಕ್ಕೆ ಪಾದಯಾತ್ರೆ ಪ್ರಾರಂಭವಾಗಲಿದೆ ಎಂದು ಶ್ರೀಮಠ ಪ್ರಕಟಣೆಯಲ್ಲಿ ತಿಳಿಸಿದೆ.
ಬೆಳಗ್ಗೆ ಶ್ರೀ ಮಡಿವಾಳೇಶ್ವರರ ಕರ್ತೃ ಗದ್ದುಗೆಗೆ ರುದ್ರಾಭಿಷೇಕ, ಮಹಾಮಂಗಳಾರತಿ ಹಾಗೂ ಪ್ರಸಾದದ ಬಳಿಕ 10.30ಕ್ಕೆ ಪಾದಯಾತ್ರೆಗೆ ಚಾಲನೆ ದೊರೆಯುವುದು. ಜಂಬೇರಾಳ, ಅರಳಗುಂಡಗಿ, ಕುರನಳ್ಳಿ, ನೇದಲಗಿ, ಬಿಲ್ಲಾಡ, ಬಳ್ಳುಂಡಗಿ, ಬೇಲೂರ, ಅಂಕಲಗಿ, ಬಟಗೇರಿ, ಕೆರಕನಹಳ್ಳಿ, ಸಂಗಮ, ದೇವಲಗಾಣಗಾಪುರ, ಚೌಡಾಪುರ ಮಾರ್ಗವಾಗಿ ಪಾದಯಾತ್ರೆ ತೆರಳಲಿದೆ. ಆ.31ರಂದು ಸಂಜೆ 8ಕ್ಕೆ ಚಿಣಮಗೇರಿಯ ಶ್ರೀ ಮಹಾಂತೇಶ್ವರ ಗುಡ್ಡ ತಲುಪುವುದು. ರಾತ್ರಿಯಿಡೀ ಶ್ರೀಮಠದಲ್ಲಿ ಭಜನೆ ನಡೆಯಲಿದೆ.
ಸೆ.1ರಂದು ಬೆಳಗ್ಗೆ 6ಕ್ಕೆ ಶ್ರೀ ಮಹಾಂತೇಶ್ವರರ ಕರ್ತೃ ಗದ್ದುಗೆಗೆ ರುದ್ರಾಭಿಷೇಕ, ಸಹಸ್ರ ಬಿಲ್ವಾರ್ಚನೆ ನಡೆಯುವುದು. ಬೆಳಗ್ಗೆ 12ಕ್ಕೆ ಶ್ರೀಮಠದ ಆವರಣದಲ್ಲಿ ಚಿಣಮಗೇರಿಯ ಶ್ರೀ ವೀರಮಹಾಂತ ಶಿವಾಚಾರ್ಯರ ನೇತೃತ್ವದಲ್ಲಿ ಸಮಾರೂಪ ಸಮಾರಂಭ ನಡೆಯಲಿದ್ದು, ಶ್ರೀ ಡಾ.ಸಿದ್ಧರಾಮ ಶಿವಾಚಾರ್ಯರು ಸಾನ್ನಿಧ್ಯ, ಕಡಕೋಳ ಮಹಾಮಠದ ಶ್ರೀ ಡಾ.ರುದ್ರಮುನಿ ಶಿವಾಚಾರ್ಯರು ಅಧ್ಯಕ್ಷತೆ, ಹಿಂಚಗೇರಾ ಬೃಹನ್ಮಠದ ಶ್ರೀ ಶಂಭುಲಿಂಗ ಶಿವಾಚಾರ್ಯರು ಸಮ್ಮುಖ ವಹಿಸುವರು. ಸಂಜೆ ಪಾದಯಾತ್ರಿಗಳು ಮರಳಿ ಕಡಕೋಳ ಗ್ರಾಮಕ್ಕೆ ಆಗಮಿಸಲಿದ್ದು, ಪ್ರಮುಖ ಬೀದಿಗಳಲ್ಲಿ ಸಕಲ ವಾದ್ಯಗಳ ಜತೆಗೆ ಬೃಹತ್​ ಮೆರವಣಿಗೆಯೊಂದಿಗೆ ಸ್ವಾಗತಿಸಲಾಗುವುದು.