ರಾಜಧಾನಿಯಲ್ಲಿ 116 ವರ್ಷದ ಬಳಿಕ ಗರಿಷ್ಠ ತಾಪಮಾನ
ಬೆಂಗಳೂರು: ಎಲ್‌ನಿನೋ ಪ್ರಭಾವದಿಂದ ಮುಂಗಾರು ಕ್ಷೀಣವಾಗಿರುವ ಹಿನ್ನೆಲೆಯಲ್ಲಿ ರಾಜಧಾನಿಯಲ್ಲಿ 116 ವರ್ಷದ ಬಳಿಕ ಗರಿಷ್ಠ ತಾಪಮಾನ ದಾಖಲಾಗಿದೆ.
1914ರ ಜುಲೈನಲ್ಲಿ 33.3 ಡಿ.ಸೆ. ಉಷ್ಣಾಂಶ ದಾಖಲಾಗಿತ್ತು. 116 ವರ್ಷದ ಬಳಿಕ ಅಂದರೆ 2026ರ ಜು.14ರಂದು 33.6 ಡಿ.ಸೆ.ದಾಖಲಾಗಿದ್ದು, ಹಿಂದಿನ ಎಲ್ಲ ದಾಖಲೆಗಳನ್ನು ಅಳಿಸಿಹಾಕಿದೆ. ನಗರದಲ್ಲಿ ವಾಡಿಕೆಯಂತೆ ಗರಿಷ್ಠ ತಾಪಮಾನದಲ್ಲಿ 28.3 ಡಿ.ಸೆ. ವರದಿಯಾಗಬೇಕಿತ್ತು. ಆದರೆ, ಪ್ರಸ್ತುತ 33.6 ಡಿ.ಸೆ.ದಾಖಲಾಗಿದ್ದು, ವಾಡಿಕೆಗಿಂತ ಸರಾಸರಿ 5-6 ಡಿ.ಸೆ.ಉಷ್ಣಾಂಶ ಅಧಿಕವಾಗಿದೆ.
ಹವಾಮಾನ ತಜ್ಞ ಡಾ.ಶ್ರೀನಿವಾಸರೆಡ್ಡಿ ಮಾತನಾಡಿ, ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ವಾಡಿಕೆಗಿಂತ 3 ಡಿ.ಸೆ.ನಿಂದ 7 ಡಿ.ಸೆ.ವರೆಗೆ ಉಷ್ಣಾಂಶ ಹೆಚ್ಚಳವಾಗಿದೆ. ಉಡುಪಿ, ದಕ್ಷಿಣ ಕನ್ನಡ, ಉತ್ತರ ಕನ್ನಡ ಸೇರಿ ಉತ್ತರ ಕರ್ನಾಟಕದ ಕೆಲ ಜಿಲ್ಲೆಗಳಲ್ಲಿ ಬಿಸಿಗಾಳಿ, ತೇವಾಂಶ ಪರಿಸ್ಥಿತಿಗಳು ಹೆಚ್ಚಾಗುವ ಸಂಭವವಿದೆ. ಗರಿಷ್ಠ ತಾಪಮಾನದಲ್ಲಿ ರಾಯಚೂರು 38.4, ಕಲಬುರಗಿ 38.3 ಮತ್ತು ಬೀದರ್ 37.6 ಡಿ.ಸೆ.ಉಷ್ಣಾಂಶ ಮಂಗಳವಾರ ದಾಖಲಾಗಿದೆ. ಹಲವು ಜಿಲ್ಲೆಗಳಲ್ಲಿ ಗಂಟೆಗೆ 30-40 ಕಿಮೀ ವೇಗದಲ್ಲಿ ಗಾಳಿ ಬೀಸುತ್ತಿದೆ ಎಂದರು.
ಮುಂದಿನ 5 ದಿನ ಇದೇ ರೀತಿ ವಾತಾವರಣ ಮುಂದುವರಿಯಲಿದೆ. ಇದೀಗ ರಾಜ್ಯದಲ್ಲಿ ‘ಎಲ್‌ನಿನೋ’ ಪರಿಣಾಮ ಕಾಣಿಸಿಕೊಳ್ಳುತ್ತಿದೆ. ಇದು ಮಳೆ ತಗ್ಗಿಸುವ ಮಾತ್ರವಲ್ಲದೆ, ಗರಿಷ್ಠ ಮತ್ತು ಕನಿಷ್ಠ ತಾಪಮಾನದಲ್ಲಿಯೂ ಉಷ್ಣಾಂಶ ಹೆಚ್ಚಿಸಲಿದೆ. ಮಳೆ ಕ್ಷೀಣವಾದ ಬೆನ್ನಲ್ಲೇ ಹಲವು ವರ್ಷಗಳ ಬಳಿಕ ಪ್ರಸಕ್ತ ಸಾಲಿನ ಮಳೆಗಾಲದ ಋತುಮಾನದಲ್ಲಿ ರಾಜ್ಯದಲ್ಲೆಡೆ ದೀರ್ಘಾವಧಿ ಒಣಹವೆ ಕಾಣಿಸಿಕೊಳ್ಳುತ್ತಿದೆ ಎಂದು ಮಾಹಿತಿ ನೀಡಿದರು.