ದೊಡ್ಡಬಳ್ಳಾಪುರದ ಭಾರತ್​ ಸ್ಕೌಟ್ಸ್​ ಮತ್ತು ಗೈಡ್ಸ್​ ತರಬೇತಿ ಕೇಂದ್ರ ಉನ್ನತಿಕರಣಕ್ಕೆ ಸ್ಕೌಟ್ಸ್​ ಮತ್ತು ಗೈಡ್ಸ್​ ಮುಖ್ಯ ಆಯುಕ್ತ ಪಿ.ಜಿ.ಆರ್​.ಸಿಂಧ್ಯಾ, ಶಾಸಕ ಧೀರಜ್​ ಮುನಿರಾಜು ಭೂಮಿ ಪೂಜೆ ನೆರವೇರಿಸಿದರು. ರಾಜ್ಯ ಕಾರ್ಯದರ್ಶಿ ಗಂಗಪ್ಪ ಗೌಡ, ಪದಾಧಿಕಾರಿಗಳಾದ ಎಂ.ಎಸ್​.ಸತೀಶ್​, ಬಿ.ಕೆ.ಬಸವರಾಜ್​, ತಿರುಮಲ ರಾವ್​ ಇತರರು ಇದ್ದರು. 
ರಾಜ್ಯ

ಸ್ಕೌಟ್ಸ್​-ಗೈಡ್ಸ್​ ತರಬೇತಿ ಕೇಂದ್ರಕ್ಕೆ ಹೈಟೆಕ್​ ಸ್ಪರ್ಶ / DODABALLAPUR

ಬೆಂಗಳೂರು ಗ್ರಾಮಾಂತರ ಡೆಸ್ಕ್
ದೊಡ್ಡಬಳ್ಳಾಪುರ : ತಾಲೂಕಿನ ಅನಿಬೆಸೆಂಟ್​ ಪಾರ್ಕ್​ನಲ್ಲಿರುವ ಭಾರತ್​ ಸ್ಕೌಟ್ಸ್​ ಮತ್ತು ಗೈಡ್ಸ್​ ತರಬೇತಿ ಕೇಂದ್ರವನ್ನು ಉನ್ನತಿಕರಿಸುವ ಕಾಮಗಾರಿಗೆ ಶಾಸಕ ಧೀರಜ್​ ಮುನಿರಾಜ್​ ಹಾಗೂ ಭಾರತ್​ ಸ್ಕೌಟ್ಸ್​ ಮತ್ತು ಗೈಡ್ಸ್​ ಮುಖ್ಯ ಆಯುಕ್ತೆ ಪಿ.ಜಿ.ಆರ್​.ಸಿಂಧ್ಯಾ ಗುರುವಾರ ಭೂಮಿ ಪೂಜೆ ನೆರವೇರಿಸಿದರು.
ಈ ವೇಳೆ ಮಾತನಾಡಿದ ಮುಖ್ಯ ಆಯುಕ್ತೆ ಪಿ.ಜಿ.ಆರ್​.ಸಿಂಧ್ಯಾ, ತರಬೇತಿ ಕೇಂದ್ರವನ್ನು ಅಂತಾರಾಷ್ಟ್ರೀಯ ಮಟ್ಟದ ಕೇಂದ್ರವಾಗಿ ಅಭಿವೃದ್ಧಿಪಡಿಸುವ ಉದ್ದೇಶದಿಂದ ಮರುನಿಮಾರ್ಣ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದ್ದು, ಖಾಸಗಿ ಅನುದಾನದ ಮೂಲಕ ಅಭಿವೃದ್ಧಿ ಕಾರ್ಯ ನಡೆಸಲಾಗುವುದು ಎಂದರು.
ಕೇಂದ್ರದಲ್ಲಿ ಚಿಟ್ಟೆ ಪಾರ್ಕ್​, ನವಿಲು ಪಾರ್ಕ್​ ಹಾಗೂ ಅಡ್ವೆಂಚರ್​ ಪಾರ್ಕ್​ ನಿರ್ಮಿಸಲು ಯೋಜನೆ ರೂಪಿಸಲಾಗಿದೆ. ತರಬೇತಿಗೆ ಆಗಮಿಸುವ ವಿದ್ಯಾರ್ಥಿಗಳು ಪ್ರಕೃತಿ ಮತ್ತು ಪರಿಸರದ ಬಗ್ಗೆ ಅರಿವು ಪಡೆದು, ಜೀವನೋಪಯೋಗಿ ಅನುಭವಗಳೊಂದಿಗೆ ಹಿಂತಿರುಗುವಂತ ವಾತಾವರಣ ನಿರ್ಮಿಸುವ ಗುರಿ ಹೊಂದಲಾಗಿದೆ. ಆಧುನಿಕ ಗ್ರಂಥಾಲಯದಲ್ಲಿ 7 ಸಾವಿರ ಪುಸ್ತಕಗಳು ಹಾಗೂ 10 ಕಂಪ್ಯೂಟರ್​ ಅಳವಡಿಸಲಾಗುವುದು. ಶಿಕ್ಷಕರು ಮತ್ತು ವಿದ್ಯಾರ್ಥಿಗಳ ಬೌದ್ಧಿಕ ಬೆಳವಣಿಗೆಗೆ ಅಗತ್ಯ ಸೌಲಭ್ಯ ಒದಗಿಸಲಾಗುವುದು. ಕರಾವಳಿ ಪ್ರದೇಶದ ಸಾಹಸ ಚಟುವಟಿಕೆಗಳ ಮಾದರಿಯ ತರಬೇತಿಯನ್ನೂ ಪರಿಚಯಿಸುವ ಉದ್ದೇಶವಿದೆ ಎಂದು ತಿಳಿಸಿದರು.
ಸ್ಕೌಟ್ಸ್​ ಆ್ಯಂಡ್​ ಗೈಡ್ಸ್​ ರಾಜ್ಯ ಕಾರ್ಯದರ್ಶಿ ಗಂಗಪ್ಪ ಗೌಡ ಮಾತನಾಡಿ, ಸುಮಾರು 2 ಕೋಟಿ ರೂ. ವೆಚ್ಚದಲ್ಲಿ ಆರಂಭಿಕ ಅಭಿವೃದ್ಧಿ ಕಾಮಗಾರಿಗಳು ನಡೆಯುತ್ತಿದ್ದು, ಕಟ್ಟಡಗಳ ದುರಸ್ತಿ ಸೇರಿ 20 ಕೋಟಿಗೂ ಅಧಿಕ ಮೌಲ್ಯದ ವಿವಿಧ ಅಭಿವೃದ್ಧಿ ಕಾಮಗಾರಿ ಕೈಗೆತ್ತಿಕೊಳ್ಳಲು ಯೋಜನೆ ರೂಪಿಸಲಾಗಿದೆ. ಈ ಕಾರ್ಯಕ್ಕೆ ಎಲ್ಲರ ಸಹಕಾರ ಅಗತ್ಯ ಎಂದು ಹೇಳಿದರು.
ಶಾಸಕ ಧೀರಜ್​ ಮುನಿರಾಜು ಮಾತನಾಡಿ, ತಾಲೂಕಿನಲ್ಲಿ ಅಂತಾರಾಷ್ಟ್ರೀಯ ಮಟ್ಟದ ಭಾರತ್​ ಸ್ಕೌಟ್ಸ್​ ಮತ್ತು ಗೈಡ್ಸ್​ ತರಬೇತಿ ಕೇಂದ್ರ ಪುನರ್​ ಅಭಿವೃದ್ಧಿಯಾಗುತ್ತಿರುವುದು ಹೆಮ್ಮೆಯ ವಿಷಯ ಎಂದರು.