High-tech touch for Ambedkar Bhavan
ಸಾರ್ವಜನಿಕರ ಹಾಗೂ ದಲಿತ ಹಕ್ಕುಗಳ ಹೋರಾಟಗಾರರ ವರ್ಷಗಳ ಕನಸು ಕೊನೆಗೂ ನನಸಾಗಿದೆ. ನಗರದ ಹೃದಯಭಾಗದಲ್ಲಿ ಅತ್ಯಾಧುನಿಕ ಹಾಗೂ ವಿನೂತನ ಮಾದರಿಯ ಅಂಬೇಡ್ಕರ್ ಭವನ ಲೋಕಾರ್ಪಣೆಗೆ ಸಜ್ಜಾಗಿದೆ.
ಮಾಜಿ ಸಚಿವ,ಶಾಸಕ ಡಾ.ಎಂ.ಸಿ.ಸುಧಾಕರ್ ಅವರ ನೇತೃತ್ವದಲ್ಲಿ ಸುಮಾರು 20 ಕೋಟಿ ರೂ. ವೆಚ್ಚದಲ್ಲಿ ನಿಮಾರ್ಣಗೊಂಡಿರುವ ಭವ್ಯ ಭವನದ ಉದ್ಘಾಟನೆಗೆ ಆ.22ರಂದು ಉಪಮುಖ್ಯಮಂತ್ರಿ ಸೇರಿ ಹಲವು ಸಚಿವರ ಆಗಮಿಸಲಿದ್ದಾರೆ.
5 ಲಕ್ಷ ರೂ. ಅನುದಾನದಿಂದ 20 ಕೋಟಿ ರೂ. ತೊಡಗಿಸಿಕೊಂಡ ಈ ಯೋಜನೆ, ಇಂದು ರಾಜ್ಯದಲ್ಲೇ ಪ್ರಥಮ ಬಾರಿಗೆ ಪೇಪರ್ ಲೆಸ್ ಸಭಾಂಗಣದ ಜತೆಗೆ ಸಂವಿಧಾನ ಶಿಲ್ಪಿ ಡಾ.ಅಂಬೇಡ್ಕರ್ ಅವರ ಜೀವನ, ಹೋರಾಟ ಮತ್ತು ಚಿಂತನೆಗಳನ್ನು ಯುವಪೀಳಿಗೆಗೆ ತಲುಪಿಸಲು ವಿಶೇಷ ಅನುಭವ ಕೇಂದ್ರವನ್ನಾಗಿ ಸ್ಥಾಪಿಸಲಾಗಿದೆ. ವಿದ್ಯಾರ್ಥಿಗಳಿಗಾಗಿ 4 ಕಂಪ್ಯೂಟರ್ ಅಳವಡಿಸಲಾಗಿದ್ದು, ಕ್ವಿಜ್ ಸ್ಪರ್ಧೆಗಳ ಮೂಲಕ ಅಂಬೇಡ್ಕರ್ ಜ್ಞಾನಾರ್ಜನೆಗೆ ಅವಕಾಶ ಕಲ್ಪಿಸಲಾಗಿದೆ.
ಭವನದ ಸುಂದರ ಒಳಾಂಗಣದಲ್ಲಿ ಬಿಳಿ ಬಣ್ಣದ ಶಿಲೆಯ ಭಗವಾನ್ ಬುದ್ಧ ಹಾಗೂ ಅಂಬೇಡ್ಕರ್ ಪ್ರತಿಮೆ ಅನಾವರಣಗೊಳಿಸಲಾಗುತ್ತಿದೆ. ಮಲ್ಟಿ-ಫಂಕ್ಷನ್ ಸೌಲಭ್ಯಗಳ ಜತೆಗೆ ವಿಶಾಲವಾದ ಡೈನಿಂಗ್ ಹಾಲ್, ಆಧುನಿಕ ಎಲ್ಇಡಿ ಪರದೆ, ಗ್ರಂಥಾಲಯ, ಸಾರ್ವಜನಿಕ ವಾಹನಗಳಿಗೆ ಸುಸಜ್ಜಿತ ಪಾರ್ಕಿಂಗ್ ವ್ಯವಸ್ಥೆಯನ್ನೂ ಮಾಡಲಾಗಿದೆ.
ಹಿರಿಯ ದಲಿತ ಮುಖಂಡರು ರಾಜ್ಯದ ಅನೇಕ ಕಡೆ ಅಂಬೇಡ್ಕರ್ ಭವನಗಳು ನಿರ್ವಹಣೆಯಿಲ್ಲದೆ ಸೊರಗುತ್ತಿವೆ. ಆದರೆ, ಚಿಂತಾಮಣಿಯ ಭವನವು ಶೈಕ್ಷಣಿಕ ಹಾಗೂ ವೈಚಾರಿಕ ಕೇಂದ್ರವಾಗಿ ಹೊರಹೊಮ್ಮುತ್ತಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಸಚಿವರಾದ ಭೈರತಿ ಸುರೇಶ್, ಈಶ್ವರ್ ಖಂಡ್ರೆ, ಕೆ.ಎಚ್.ಮುನಿಯಪ್ಪ ಸೇರಿದಂತೆ ಹಲವರು ಭಾಗವಹಿಸಲಿದ್ದು, ಎಲ್ಲ ಸಮುದಾಯಗಳ ಪ್ರಮುಖರು ಹಾಗೂ ಸಂಘಟನೆಗಳನ್ನು ತೊಡಗಿಸಿಕೊಂಡು ಕಾರ್ಯಕ್ರಮ ಯಶಸ್ವಿಗೊಳಿಸಲು ತಹಸೀಲ್ದಾರ್ ಸುದರ್ಶನ್ ಯಾದವ್ ಹಾಗೂ ಸ್ಥಳಿಯ ಮುಖಂಡರು ಸಿದ್ಧತೆ ನಡೆಸಿದ್ದಾರೆ.