ಮುದ್ದೇಬಿಹಾಳ ತಾಲೂಕಿನ ಬಿದರಕುಂದಿ ಗ್ರಾಮದ ಸಮೀಪ ನಿರ್ಮಾಣವಾಗುತ್ತಿರುವ ಕ್ರೀಡಾಂಗಣದ ನಿಯೋಜಿತ ಸ್ಥಳಕ್ಕೆ ಶಾಸಕ ಸಿ.ಎಸ್. ನಾಡಗೌಡ ಭೇಟಿ ನೀಡಿದರು. ಸಂಗನಗೌಡ ಬಿರಾದಾರ, ಮಲ್ಲಿಕಾರ್ಜುನ ಬಾಗೇವಾಡಿ ಮತ್ತಿತರರಿದ್ದರು. 
ರಾಜ್ಯ

ಕ್ರೀಡಾಪಟುಗಳಿಗೆ ಹೈಟೆಕ್ ಕ್ರೀಡಾಂಗಣ

ಮಾರುತಿ ತಳ್ಳಳ್ಳಿ

ಪ್ರಮುಖ ಮುಖ್ಯಾಂಶಗಳು

  • ಶಾಸಕ ಸಿ.ಎಸ್. ನಾಡಗೌಡ ಅಪ್ಪಾಜಿ ಭರವಸೆ
  • ಕಾಮಗಾರಿಯ ನಿಯೋಜಿತ ಸ್ಥಳ ವೀಕ್ಷಣೆ
ಮುದ್ದೇಬಿಹಾಳ : ಕ್ಷೇತ್ರದ ಕ್ರೀಡಾಪಟುಗಳಿಗೆ ಅಗತ್ಯವಿರುವ ಎಲ್ಲ ಮೂಲಸೌಕರ್ಯಗಳನ್ನು ಒದಗಿಸುವ ಉದ್ದೇಶದಿಂದ ಸರ್ಕಾರದ ಹೆಚ್ಚಿನ ಅನುದಾನದಡಿ ಹೈಟೆಕ್ ಕ್ರೀಡಾ ಮೈದಾನವನ್ನು ನಿರ್ಮಿಸಲಾಗುವುದು ಎಂದು ಶಾಸಕ ಸಿ.ಎಸ್. ನಾಡಗೌಡ ಅಪ್ಪಾಜಿ ಹೇಳಿದರು.
ತಾಲೂಕಿನ ಬಿದರಕುಂದಿ ಗ್ರಾಮದ ಸಮೀಪ ನಿರ್ಮಾಣವಾಗುತ್ತಿರುವ ಕ್ರೀಡಾಂಗಣದ ನಿಯೋಜಿತ ಸ್ಥಳಕ್ಕೆ ಭೇಟಿ ನೀಡಿ ಅವರು ಮಾತನಾಡಿ, ಯುವಕರಲ್ಲಿ ಕ್ರೀಡಾ ಚಟುವಟಿಕೆಗಳಿಗೆ ಹೆಚ್ಚಿನ ಉತ್ತೇಜನ ನೀಡುವ ನಿಟ್ಟಿನಲ್ಲಿ ಈ ಕ್ರೀಡಾಂಗಣವನ್ನು ಆಧುನಿಕ ಸೌಲಭ್ಯಗಳೊಂದಿಗೆ ಅಭಿವೃದ್ಧಿಪಡಿಸಲಾಗುತ್ತಿದೆ ಎಂದರು.
ಕ್ರೀಡಾಂಗಣ ನಿರ್ಮಾಣಕ್ಕಾಗಿ ಈಗಾಗಲೇ 2.50 ಕೋಟಿ ರೂ. ಅನುದಾನ ಮಂಜೂರಾಗಿದ್ದು, ಹೆಚ್ಚುವರಿಯಾಗಿ 1.80 ಕೋಟಿ ರೂ. ಅನುದಾನ ತರಲಾಗಿದೆ. ಈ ಅನುದಾನದಿಂದ ಕ್ರೀಡಾಪಟುಗಳಿಗೆ ಅಗತ್ಯವಿರುವ ಗುಣಮಟ್ಟದ ಸೌಲಭ್ಯಗಳನ್ನು ಕಲ್ಪಿಸಿ, ರಾಜ್ಯ ಹಾಗೂ ರಾಷ್ಟ್ರೀಯ ಮಟ್ಟದ ಕ್ರೀಡಾಕೂಟಗಳನ್ನು ಆಯೋಜಿಸಬಹುದಾದ ಹೈಟೆಕ್ ಕ್ರೀಡಾಂಗಣವಾಗಿ ಅಭಿವೃದ್ಧಿಪಡಿಸಲಾಗುವುದು ಎಂದು ತಿಳಿಸಿದರು.
ಕ್ಷೇತ್ರದ ಪ್ರತಿಭಾವಂತ ಕ್ರೀಡಾಪಟುಗಳಿಗೆ ಉತ್ತಮ ತರಬೇತಿ ಹಾಗೂ ಅಭ್ಯಾಸದ ವಾತಾವರಣ ಕಲ್ಪಿಸುವುದು ತಮ್ಮ ಆದ್ಯತೆಯಾಗಿದ್ದು, ಕಾಮಗಾರಿಯನ್ನು ಗುಣಮಟ್ಟದೊಂದಿಗೆ ಶೀಘ್ರ ಪೂರ್ಣಗೊಳಿಸುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಹೇಳಿದರು.
ಮುರಾರ್ಜಿ ದೇಸಾಯಿ ವಸತಿ ಶಾಲೆಯ ಕಟ್ಟಡ ಕಾಮಗಾರಿ ಕಳಪೆ ಮಟ್ಟದಲ್ಲಿದ್ದು, ಸಂಬಂಧಿಸಿದ ಅಧಿಕಾರಿಗಳು ತಕ್ಷಣ ಸ್ಥಳ ಪರಿಶೀಲನೆ ನಡೆಸುವಂತೆ ಸೂಚಿಸಿದ್ದೇನೆ ಎಂದರು.