ಪ್ರೌಢ ಶಾಲಾ ಶಿಕ್ಷಕರಿಗೆ ಪಿಯು ಉಪನ್ಯಾಸಕ ಬಡ್ತಿ ಪರೀಕ್ಷೆ 
ರಾಜ್ಯ

ಪ್ರೌಢ ಶಾಲಾ ಶಿಕ್ಷಕರಿಗೆ ಪಿಯು ಉಪನ್ಯಾಸಕರಾಗಿ ಬಡ್ತಿ: ಫೆ.22ರಂದು ಪರೀಕ್ಷೆ

ಪ್ರಮುಖ ಮುಖ್ಯಾಂಶಗಳು

  • ಸರ್ಕಾರಿ ಪ್ರೌಢ ಶಾಲಾ ಸಹ ಶಿಕ್ಷಕ ವೃಂದದಿಂದ ಸರ್ಕಾರಿ ಪದವಿ ಪೂರ್ವ ಕಾಲೇಜುಗಳ ಉಪನ್ಯಾಸಕ ವೃಂದದ ಹುದ್ದೆಗೆ ಬಡ್ತಿ ನೀಡಲು ಮೊದಲ ಬಾರಿಗೆ ನಡೆಯುತ್ತಿರುವ ಅರ್ಹತಾ ಪರೀಕ್ಷೆ
  • ಫೆ.22 ರಂದು ಎರಡು ಅಧಿವೇಶನದಲ್ಲಿ ಪರೀಕ್ಷೆ
  • ಒಟ್ಟು 789 ಹುದ್ದೆಗಳಿಗೆ ನೇಮಕಾತಿ ಪರೀಕ್ಷೆ ನಡೆಯಲಿದೆ.
ಬೆಂಗಳೂರು: ಸರ್ಕಾರಿ ಪ್ರೌಢ ಶಾಲಾ ಸಹ ಶಿಕ್ಷಕ ವೃಂದದಿಂದ ಸರ್ಕಾರಿ ಪದವಿ ಪೂರ್ವ ಕಾಲೇಜುಗಳ ಉಪನ್ಯಾಸಕ ವೃಂದದ ಹುದ್ದೆಗೆ ಬಡ್ತಿ ನೀಡಲು ಮೊದಲ ಬಾರಿಗೆ ನಡೆಯುತ್ತಿರುವ ಅರ್ಹತಾ ಪರೀಕ್ಷೆಗೆ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ದಿನಾಂಕ ನಿಗದಿಪಡಿಸಿ ಅಧಿಸೂಚನೆ ಹೊರಡಿಸಿದೆ.
ಫೆ.22 ರಂದು ಎರಡು ಅಧಿವೇಶನದಲ್ಲಿ ಪರೀಕ್ಷೆ ನಡೆಯಲಿದೆ. ಮೊದಲ ಅಧಿವೇಶನ ಬೆಳಗ್ಗೆ 9. 30 ರಿಂದ ಮಧ್ಯಾಹ್ನ 12 ಮತ್ತು ಎರಡನೇ ಅಧಿವೇಶನ ಮಧ್ಯಾಹ್ನ 2 ರಿಂದ ಸಂಜೆ 4.30ರವರೆಗೆ ನಿಗದಿಯಾಗಿದೆ. ಮೊದಲ ಅಧಿವೇಶನದಲ್ಲಿ ಕನ್ನಡ, ಇಂಗ್ಲಿಷ್, ಹಿಂದಿ, ಉರ್ದು ಮತ್ತು ಸಂಸ್ಕೃತ ಪರೀಕ್ಷೆ ನಡೆಯಲಿದೆ. ಎರಡನೇ ಅಧಿವೇಶನದಲ್ಲಿ ಇತಿಹಾಸ, ಅರ್ಥಶಾಸ್ತ್ರ, ಭೂಗೋಳಶಾಸ್ತ್ರ, ಸಮಾಜಶಾಸ್ತ್ರ, ರಾಜ್ಯಶಾಸ್ತ್ರ, ಗಣಿತ ಮತ್ತು ಜೀವಶಾಸ್ತ್ರ ವಿಷಯಗಳ ಪರೀಕ್ಷೆ ನಡೆಯಲಿದೆ. ವಿವರಣಾತ್ಮಕ ಮಾದರಿಯಲ್ಲಿ ಪ್ರಶ್ನೆ ಪತ್ರಿಕೆ ಇರಲಿದೆ, 
ಡಿ.29 ರಿಂದ ಜ.28ರವರೆಗೆ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ. ಜಿಲ್ಲಾ ಕೇಂದ್ರದಲ್ಲಿ ಪರೀಕ್ಷೆ ನಡೆಯಲಿದೆ. 100 ಅಂಕಗಳ ಪರೀಕ್ಷೆಯಲ್ಲಿ ಕನಿಷ್ಠ  50 ಅಂಕ ಪಡೆದವರು ಅರ್ಹತೆ ಪಡೆಯುತ್ತಾರೆ.
ಇನ್ನು ಬಡ್ತಿ ಕೋಟಾದಲ್ಲಿ ಕನ್ನಡ ವಿಷಯದಲ್ಲಿ 229, ಇಂಗ್ಲಿಷ್ 89, ಹಿಂದಿ 19, ಉರ್ದು 16, ಸಂಸ್ಕತ 10. ಇತಿಹಾಸ 59, ಅರ್ಥಶಾಸ್ತ್ರ 110, ಭೂಗೋಳಶಾಸ್ತ್ರ 20, ಸಮಾಜ ಶಾಸ್ತ್ರ 146, ರಾಜ್ಯಶಾಸ್ತ್ರ 55, ಗಣಿತ 17 ಮತ್ತು ಜೀವಶಾಸ್ತ್ರ 19 ಹುದ್ದೆಗಳಿದ್ದು ಒಟ್ಟು 789 ಹುದ್ದೆಗಳಿಗೆ ನೇಮಕಾತಿ ನಡೆಯಲಿದೆ. 
ಶಾಲಾ ಶಿಕ್ಷಣ ಇಲಾಖೆಯ ಕೇಂದ್ರಿಕೃತ ದಾಖಲಾತಿ ಘಟಕವು ಪರೀಕ್ಷಾ ಪ್ರಾಧಿಕಾರವಾಗಿ ಕಾರ್ಯನಿರ್ವಹಿಸಲಿದೆ.